ಮೈ ಕೈ ಆಡಿಸುವುದು, ತುಟಿ ಕಚ್ಚಿ ಮೈ ಕುಣಿಸುವುದು, ಕನ್ನಡಿಗರನ್ನು ಕೆಣಕಿದವಳಿಗೆ ಮಾಳವಿಕಾ ಅವಿನಾಶ್ ತಪರಾಕಿ..!
ನಾವೂ ಇದ್ದರೆ ನೀವು ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಬಾಯಿಗೆ ಬಂದಂತೆ ಮಾತನಾಡಿ, ಕನ್ನಡಿಗರನ್ನು ಕೆಣಕಿದ್ದವರು ಸುಗಂಧ್ ಶರ್ಮಾ. ಕೋರಮಂಗಲದ ಪಬ್ಬು - ಕ್ಲಬ್ಬುಗಳಲ್ಲಿಯೇ ಎದ್ದು ಬಿದ್ದು ವಾಲಾಡುವಂತೆ ಕಾಣಿಸುವ ಸುಗಂಧ್ ಶರ್ಮಾ ತಾನು ಮಾಡಿದ ಈ ಪ್ರಮಾದದಿಂದ ಸದ್ಯ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ತಿಪ್ಪೆ ಸಾರಿಸಲು ನನಗೆ ಬೆಂಗಳೂರು ಅಂದರೆ ಇಷ್ಟ, ಕನ್ನಡ ಅಂದರೆ ಇಷ್ಟ ಎಂದು ನುಲಿದಿದ್ದಾರೆ.
ಆದರೂ, ಕನ್ನಡಿಗರ ಕೋಪ ಕಡಿಮೆಯಾಗ್ತಿಲ್ಲ. ಸುಗಂಧ್ ಶರ್ಮಾ ಅವರನ್ನು ಕನ್ನಡದ ತಾರೆಯರು ಕ್ಷಮಿಸಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗದ ಹಿರಿಯ ನಟಿ ಮಾಳವಿಕಾ ಅವಿನಾಶ್ ದುರ್ಗಂಧವನ್ನು ಹರಡಿಸಿದ ಸುಗಂಧ್ ಶರ್ಮಾ ವಿರುದ್ಧ ಕೆಂಡ ಕಾರಿದ್ದಾರೆ. ಗುರುತು ಪರಿಚಯವಿಲ್ಲದರ ಲೈಕ್ಸ್‌ಗಾಗಿ ನಿಮ್ಮ ಭವಿಷ್ಯಗಳನ್ನು ನೀವೇ ಚಿವುಟಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾದ ಲೇಖನವನ್ನು ಬರೆದುಕೊಂಡಿರುವ ಮಾಳವಿಕಾ ಅವಿನಾಶ್, ''ಉತ್ತರ ಭಾರತದವರು ಇಲ್ಲಾ ಅಂದರೆ ಪಿಜಿ ಮತ್ತು ಪಬ್ ಗಳು ಖಾಲಿಯಾಗಿರುತ್ತವೆ, ನಮ್ಮಂದನೇ ನಿಮಗೆ ವರಮಾನ, ನಾವಿಲ್ಲದ್ದಿದೆದರೆ ಬೆಂಗಳೂರು ನಿಶ್ಶಬ್ಧವಾಗಿರುತ್ತೆ" ಅಂತ ಒಬ್ಬಾಕೆ ಬೊಬ್ಬೆ ಹೊಡಿಯುತ್ತಿದ್ದುದ್ಜನ್ನು ನೋಡಿದೆ. ಎಂತಾ ದಾರ್ಷ್ಟ್ಯ ನೋಡಿ. ಬೆಂಗಳೂರಿಗೆ ಅಂತ ಒಂದು ಆತ್ಮ ಅಸ್ಮಿತೆ ಎರಡೂ ಇದೆ. ಅದು ಬರಿಯ ಪಬ್ಬಿಗೆ, ಪಿಜಿಗೆ ಸೀಮಿತ ಎಂದುಕೊಳ್ಳವವರನ್ನು ಕಂಡು ಮರುಕ ಬರುತ್ತದೆ. ಬಂದಲ್ಲಿ ಸ್ಥಳೀಯರೊಂದಿಗೆ ಬೆರೆತು ಗೌರವದಿಂದ ಬದುಕುವುದನ್ನು ಬಿಟ್ಟು'' ಎಂದಿದ್ದಾರೆ.
ಮುಂದುವರೆದು ಮತ್ತೊಂದು ಫೋಸ್ಟ್ ಹಂಚಿಕೊಂಡಿರುವ ಮಾಳವಿಕಾ ಅವಿನಾಶ್, ''ಈ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಎಂಬ ಹೊಸ ಬಗೆಯ ಜನ ಜನಿಸಿರುವುದು, ಮಾನವ ಸಮಾಜಕ್ಕೆ ದೊರಕಿರುವ ಮತ್ತೊಂದು ಆಯಾಮ. ಅವರು, ಅಡುಗೆಯ ಬಗೆ, ಬಟ್ಟೆಯ ಬಗೆ, ಒಡವೆಯ ಬಗೆ, ಬೇರೆ ಬೇರೆ ವಸ್ತುಗಳ ಬಗೆ, ಕಸದಿಂದ ರಸ, ಆರೋಗ್ಯಕ್ಕೆ ಸಲಹೆ, ಟೆಕ್ನಲೋಜಿಕಲ್ ಅಡ್ವಾನ್ಸ್ಮೆಂಟ್, ಸೋಷಿಯಲ್ ಮೀಡಿಯಾವನ್ನೇ ಹೇಗೆ ಇನ್ಮಷ್ಟು ಸಮರ್ಥವಾಗಿ ಬಳಸುವುದು, ಹೀಗೆ ಹತ್ತು ಹಲವು ಬಗೆಯ ವಿಚಾರವನ್ನು ತಿಳಿಸಿವುದು ತುಂಬಾ ಸೂಕ್ತ ಮತ್ತು ನಮ್ಮ ಬದುಕಿಗೆ ಉಪಯುಕ್ತ'' ಎಂದಿದ್ದಾರೆ.

''ಆದರೆ ಕೆಲವು ತರುಣಿಯರು, ಯಾವುದೊ ಒಂದು ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುವುದನ್ನೇ ತಮ್ಮ ಪುಟಗಳಲ್ಲಿ ಸದಾ ಸರ್ವದಾ ಹಾಕಿಕೊಳ್ಳುತ್ತಾರಲ್ಲಾ...? ಇವರನ್ನು ಕಂಡರೆ ನನಗೆ ಮರುಕ ಮತ್ತು ಆಶ್ಚರ್ಯ ಒಟ್ಟೊಟ್ಟಿಗಾಗುತ್ತೆ. ಇದೆಂತಹ ವೃತ್ತಿ? ಕಲಾವಿದರಲ್ಲಾ, ಎಂದೂ ಸಿನಿಮಾ ಟಿವಿಗಳಲ್ಲಿ ಅಭಿನಯಿಸಿಲ್ಲ, ಅಥವಾ ಯಾವುದೊ ಒಂದೆರಡು ರಿಯಾಲಿಟಿ ಶೋಗಳಲ್ಲಿ, social media influencers ಅಂತಾನೆ ತಲೆ ತೋರಿಸುವುದು, ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು, ಮತ್ತದೇ ಸಿನಿಮಾ ಹಾಡುಗಳಿಗೆ ಮೈ ಕುಣಿಸುವುದು... ಹೋಗಲಿ ಯಾವುದೋ ಪ್ರಭುದೇವರಂತೆಯೊ, ಮಾಧುರಿಯಂತೆಯೊ ಒಳ್ಳೆಯ ಡ್ಯಾನ್ಸಾದರೂ ಮಾಡ್ತಾರಾ? ಇಲ್ಲ...ಕ್ಯಾಮರಾವನ್ನು ಅತ್ಯಂತ ಸಮೀಪದಲ್ಲಿ ಇಟ್ಟುಕೊಂಡು, ಪುರುಷರನ್ನು ಪ್ರಚೋದಿಸುವ ರೀತಿಯಲ್ಲಿ, ಮೈ ಕೈ ಆಡಿಸುವುದು, ಮುಖ ಭಾವನೆ ಮಾಡುವುದು. ಯಾವ ಪುರುಷಾರ್ಥಕ್ಕಾಗಿ? ಎಂಬುದು ನನ್ನಲ್ಲಿ ಮೂಡುವ ಪ್ರಶ್ನೆ'' ಎಂದು ಮಾಳವಿಕಾ ಬರೆದುಕೊಂಡಿದ್ಧಾರೆ.
''ಕೆಳಗೆ ಅದೇ ಪುರುಷರು ನೋಡುವಷ್ಟು ಸಾರ್ತಿ ನೋಡಿ, ಅಶ್ಲೀಲ ಕಾಮೆಂಟುಗಳನ್ನು ಮಾಡುತ್ತಾರೆ. ಆ ಕಾಮೆಂಟ್ ಮಾಡುವ ಯಾರು ಇಂತಹವರಿಗೆ ಪರಿಚಿತರಿರಲು ಸಾಧ್ಯವಿಲ್ಲ! ಒಂದು ಲಕ್ಷ ಲೈಕ್ ಪಡೆಯುವುದರಿಂದ ಏನು ಲಾಭ? ಇನ್ಸ್ಟಾ/ಫೇಸ್ ಬುಕ್ಕಿನ ಲೈಕ್ಸನ್ನು ಮಾನಿಟೈಸ್ ಮಾಡಲಾಗುತ್ತದೆಯಾ? ಆಗುತ್ತದೆ ಅಂತಾನೆ ಇಟ್ಟುಕೊಳ್ಳೋಣ, ಎಷ್ಟು ದಿನ? ಇಂತಹವರ ಭವಿಷ್ಯವಾದರೂ ಏನು? ಎಷ್ಟು ವರ್ಷ ಜನ, ನಿಮ್ಮದೇ ರೀಲ್ಸನ್ನು ನೋಡುತ್ತಾರೆ? ಕಷ್ಟ ಪಟ್ಟು ಆಕ್ಟ್ ಮಾಡುವ ಹೀರೋಯಿನ್ ಗಳೇ 4-5ಸಿನಿಮಾಗಳಾದ ಮೇಲೆ ಕಾಣೆಯಾಗಿಬಿಡುತ್ತಾರೆ. ಇನ್ನು ಇವರ ಕತೆಯೇನು? ಇಂತಹವರು ಮದುವೆಯಾಗುವುದು, ವಿಚ್ಛೇದನೆ ಮಾಡಿಕೊಳ್ಳುವುದು ಎಲ್ಲವೂ ಸೋಷಿಯಲ್ ಮೀಡಿಯಾ ಬ್ರೇಕಿಂಗ್ ನ್ಯೂಸ್! But beyond that what? ಹೋಗಲಿ ಗಳಿಸಿದ ಜನಪ್ರಿಯತೆಯನ್ನು ಸಿನಿಮಾ/ಟೀವಿ ಅಭಿನಯದ ಮೂಲಕ ಅಧೀಕೃತವಾಗಿಸಿಕೊಳ್ಳಬಹುದಲ್ಲ. ಅಲ್ಲಿ ಕಷ್ಟ ಪಡಬೇಕು, ಅವಕಾಶಕ್ಕಾಗಿ ಕಾಯಬೇಕು, ಜನರಿಗೆ ಇಷ್ಟವಾಗಬೇಕು...ಇಲ್ಲಿ ಅದ್ಯಾವುದೂ ಇಲ್ಲವಲ್ಲ, ಮನಸೋಚ್ಛೆ ಬಟ್ಟೆ ಧರಿಸಿ, ತುಟಿ ಕಚ್ಚಿ, ಮೈ ಕುಣಿಸುವುದು...ತಾನೂ ಹೀಗೆ ಸೆಲೆಬ್ರಿಟಿಯಾಗಿಬಿಡುತ್ತೇನೆ, ಎಂದುಕೊಳ್ಳುವ ಮನೆಯಲ್ಲಿನ ಹೆಣ್ಣುಮಕ್ಕಳಿಗೆ ಇಂತಹವರು ಎಂತಾ ದಾರಿ ತೋರಿಸುತ್ತಿದ್ದಾರೆ? ಸಾಕು ಮಕ್ಕಳೇ, ಯಾರೋ ಗುರುತು ಪರಿಚಯವಿಲ್ಲದರ ಲೈಕ್ಸಿಗಾಗಿ ನಿಮ್ಮ ಭವಿಷ್ಯಗಳನ್ನು ನೀವೇ ಚಿವುಟಿಕೊಳ್ಳಬೇಡಿ. ನಿಮ್ಮ ಅಪ್ಪಾಮ್ಮ ಹೇಳುವ ಮಾತನ್ನು ಕೇಳಿ. Learn to start living in the real world! Virtual world is after all virtual... ಎಂದು ತಮ್ಮ ಬರಹವನ್ನು ಪೂರ್ಣಗೊಳಿಸಿದ್ದಾರೆ ಮಾಳವಿಕಾ ಅವಿನಾಶ್


Click it and Unblock the Notifications











