ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾ, ತಿರುಗೇಟು ಕೊಟ್ಟ ಪ್ರೇಮಾ..!
ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.
ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ಇದಕ್ಕೆ ರಶ್ಮಿಕಾ ಮಂದಣ್ಣ ಸದ್ಯದ ಉದಾಹರಣೆ. ಹೌದು.. ಕನ್ನಡದಿಂದ ತೆಲುಗು ಚಿತ್ರರಂಗಕ್ಕೆ ವಲಸೆ ಹೋಗಿ ಆ ನಂತರ ಅಲ್ಲಿಂದ ಕೂಡ ಕಾಲ್ಕಿತ್ತು ಹಿಂದಿ ಚಿತ್ರರಂಗಕ್ಕೆ ಹಾರಿ, ಅಲ್ಲಿ ಗೆಲುವು ಸಿಗುತ್ತಲೇ ಕುಂತಲ್ಲಿ .. ನಿಂತಲ್ಲಿ .. ಒಂದಿಲ್ಲೊಂದು ಕಿರಿಕ್ ಮೂಲಕವೇ ಸುದ್ದಿಯಾಗುತ್ತಾ ಬಂದ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಪ್ರಮಾದ ಎಸಗಿದ್ದಾರೆ. ಕೊಡವ ಸಮಾಜದಿಂದ ಚಿತ್ರರಂಗಕ್ಕೆ ಬಂದ ಅನೇಕ ನಾಯಕಿಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹೌದು, ಅಸಲಿಗೆ .. ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರಿಗೆ ರಶ್ಮಿಕಾ ಮಂದಣ್ಣ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ತಮ್ಮನ್ನು ತಾವು ಹೊಗಳಿಕೊಳ್ಳುವ ಭರದಲ್ಲಿ ರಶ್ಮಿಕಾ ಯಡವಟ್ಟು ಮಾಡಿದ್ದರು. ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದ ಏಕೈಕ ಮಹಿಳೆ ನಾನು ಎಂದು ರಶ್ಮಿಕಾ ಮಾತನಾಡಿದ್ದರು. ರಶ್ಮಿಕಾ ಅವರಾಡಿದ ಈ ಮಾತು ಈಗ ಹಲವರನ್ನು ಕೆರಳಿಸಿದೆ.
ಯಾಕೆಂದರೆ .. ಕೂರ್ಗ್‌ದಿಂದ ಇಲ್ಲಿಯವರೆಗೆ ಹಲವಾರು ಜನ ಚಿತ್ರರಂಗಕ್ಕೆ ಬಂದಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದ್ದಾರೆ. ಕೆಲವರು ಖ್ಯಾತಿಯ ತುತ್ತ ತುದಿಯನ್ನು ಕೂಡ ತಲುಪಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕಿ ಪ್ರೇಮಾ ಅವರಿಗಿಂತ ಉದಾಹರಣೆ ಬೇಕಾ ?
ಆದರೆ.. ಇದ್ಯಾವುದು ರಶ್ಮಿಕಾಗೆ ಪರಿವೆ ಇಲ್ಲ. ಹೀಗಾಗಿಯೇ ಹಲವರು ಈಗ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಟ್ರೋಲಿಗರು ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ರಿಪಬ್ಲಿಕ್ ಕನ್ನಡ'' ವಾಹಿನಿಗೆ ಪ್ರತಿಕ್ರಿಯೆಯನ್ನು ನೀಡಿರುವ ಪ್ರೇಮಾ ಎಲ್ಲ ವಿಚಾರ ಜನರಿಗೆ ಗೊತ್ತು, ಇನ್ನೇನು ನಾನು ಹೇಳುವುದು ಎಂದು ಹೇಳಿದ್ದಾರೆ. ನಯವಾಗಿಯೇ ಮಾತಿನ ಚಾಟಿ ಬೀಸಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರೇಮಾ, ಈಗಾಗಲೇ ಕಾಮೆಂಟ್‌ಗಳ ಮೂಲಕ ಜನ ಉತ್ತರ ಕೊಟ್ಟಿದ್ದಾರೆ. ಯಾರು ಬಂದಿದ್ದರು ಯಾರು ಬಂದಿಲ್ಲ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ ಎಂದು ಹೇಳಿರುವ ಪ್ರೇಮಾ, ನನಗಿಂತ ಮೊದಲು ಚಾಮರಾಜ್‌ಪೇಟೆಯಲ್ಲಿ ವಾಸ ಮಾಡುತ್ತಿದ್ದ ನಮ್ಮ ಕೂರ್ಗ್‌ನವಾರದ ಶಶಿಕಲಾ ಎನ್ನುವವರು ಚಿತ್ರರಂಗಕ್ಕೆ ಬಂದಿದ್ದರು, ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು.. ನಾನು ನಾಯಕಿಯಾಗಿ ಬೆಳೆದೆ ಅಷ್ಟೇ ಎಂದು ಹೇಳಿದ್ಧಾರೆ.
ನನ್ನ ಈ ಬೆಳವಣಿಗೆಗೆ ನನ್ನ ಕೊಡವ ಸಮುದಾಯದವರ ಬೆಂಬಲ, ನನ್ನ ತಂದೆ ತಾಯಿಯ ಆಶೀರ್ವಾದ, ನನ್ನ ಸಹೋದರರ ಪ್ರೀತಿ ಮತ್ತು ಅಭಿಮಾನಿಗಳ ಹಾರೈಕೆ ಕಾರಣ ಎಂದು ಹೇಳಿರುವ ಪ್ರೇಮಾ, ಯಾರು ಮೊದಲು ಬಂದರು ಎನ್ನುವುದು ಮುಖ್ಯ ಅಲ್ಲ ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಮುಖ್ಯ ಎಂದು ಕೂಡ ಪ್ರೇಮಾ ಹೇಳಿದ್ದಾರೆ.
ಮುಂದುವರೆದು ಜನ ನನಗೆ ಪ್ರಶಸ್ತಿ ನೀಡಿದ್ಧಾರೆ ಇದಕ್ಕಿಂತ ಇನ್ನೇನು ನನಗೆ ಬೇಕು ಎಂದಿರುವ ಪ್ರೇಮಾ, ಯಾರೋ ಏನೋ ಮಾತನಾಡಿದರು ಅಂತ ನಾನು ತಲೆ ಕೆಡಿಸಿಕೊಂಡು ಕೂರುವ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ. ರಾಜ್ ಕುಮಾರ್ ಸರ್.. ವಿಷ್ಣುವರ್ಧನ್ ಸರ್ ಅವರು 'ಎಷ್ಟೇ ಮೇಲೆ ಹೋದರು ನೀನು ಚಿಕ್ಕವನಾಗಿರು' ಎನ್ನುವ ಪಾಠವನ್ನು ನನಗೆ ಹೇಳಿ ಕೊಟ್ಟಿದ್ಧಾರೆ ನಾನು ಆ ಪಾಠ ಮರೆತಿಲ್ಲ ನನ್ನ ಜನ ಇಲ್ಲಿಯವರೆಗೆ ನೋಡಿದ್ದಾರೆ, ಮೆಚ್ಚಿದ್ದಾರೆ.. ಅವರು ಕೊಟ್ಟಿರುವ ಪ್ರಶಸ್ತಿ ಪ್ರೀತಿ ಪ್ರೋತ್ಸಾಹ ಎಲ್ಲ ಇದ್ದ ಮೇಲೆ ನನಗೆ ಇನ್ನೇನು ಬೇಡ ಎಂದು ಕೂಡ ಪ್ರೇಮಾ ಹೇಳಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ನ್ಯೂಸ್ ಫಸ್ಟ್ ಕನ್ನಡ'' ವಾಹಿನಿಗೆ ಕೂಡ ಪ್ರತಿಕ್ರಿಯೆಯನ್ನು ನೀಡಿರುವ ಪ್ರೇಮಾ ಜನರಿಗೆ ಇದರ ಬಗ್ಗೆ ಗೊತ್ತಿದೆ, ನಾನೆಂಥ ಹೇಳೋದು ಇದರಲ್ಲಿ, ಅವರ ಮಟ್ಟಿಗೆ ನಾವು ಮಾತನಾಡೋದಕ್ಕೆ ಆಗೋದಿಲ್ಲ. ನಾವು ನಾವೇ, ಅವರು ಅವರೇ ಎಂದು ಹೇಳಿದ್ದಾರೆ.
ಜನ ಹೇಗೆ ಮಾತನಾಡ್ತಾರೆ ಎನ್ನುವುದು ಕೂರ್ಗ್ ಜನಕ್ಕೆ ಗೊತ್ತು, ನಾವು ಮಾತನಾಡುವುದಕ್ಕಿಂತ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಕೂಡ ಪ್ರೇಮಾ ಹೇಳಿದ್ದಾರೆ. ನಾನು ಇಂಡಸ್ಟ್ರಿಯಲ್ಲಿ ಮಾತನಾಡೋದಕ್ಕಿಂತ ಕೆಲಸ ಮಾಡಿಕೊಂಡು ಹೋಗಿದ್ದೀನಿ. ನಾನು ಒಬ್ಬಳು ಕೆಲಸಗಾರರು. ಮುಂದೆ ಏನು ಮಾಡಬೇಕು ಅದರ ಬಗ್ಗೆ ಯೋಚನೆ ಮಾಡುತ್ತೇವೆ ಅಷ್ಟೇ ಎಂದಿರುವ ಪ್ರೇಮಾ ಅವರ ಮಾತುಗಳಿಗೆಲ್ಲಾ ಕಾಮೆಂಟ್ ಮಾಡೋವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಜನರೇ ನನಗೆ ಪ್ರಶಸ್ತಿ ಕೊಟ್ಟಿದ್ದಾರೆ ಅಷ್ಟೇ ಸಾಕು ಎಂದು ಕೂಡ ಹೇಳಿದ್ದಾರೆ.


Click it and Unblock the Notifications











