ಈ ವರ್ಷವೇ ಹಿರಿಯ ನಟಿ ಶ್ರುತಿ ಪುತ್ರಿ ಗೌರಿ ಚಿತ್ರರಂಗ ಪ್ರವೇಶ
ಜನಪ್ರಿಯ ನಟ, ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸದೇನಲ್ಲ. ಗಂಡು ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವವರೇ ಹೆಚ್ಚು. ಆದರೆ ಇತ್ತೀಚೆಗೆ ಹೆಣ್ಣು ಮಕ್ಕಳನ್ನು ಕೂಡ ಬಣ್ಣದ ಪ್ರಪಂಚಕ್ಕೆ ಕರೆತರುವ ಪ್ರಯತ್ನ ನಡೀತಿದೆ. ಹಿರಿಯ ನಟಿ ಶ್ರುತಿ ಅವರ ಪುತ್ರಿ ಗೌರಿ ಕೂಡ ಚಿತ್ರರಂಗ ಪ್ರವೇಶಿಸುವ ಬಗ್ಗೆ ಚರ್ಚೆ ನಡೀತಿದೆ.
ಶ್ರುತಿ ಅವರ ಇಡೀ ಕುಟುಂಬ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿದೆ. ಗುಬ್ಬಿ ವೀರಣ್ಣ ಕಂಪನಿಯಲ್ಲಿ ಅವರ ತಂದೆ ಜಿ.ವಿ. ಕೃಷ್ಣ, ತಾಯಂದಿರು ರಾಧಾ ಮತ್ತು ರುಕ್ಮಿಣಿ ನಾಟಕಗಳಲ್ಲಿ ನಟಿಸುತ್ತಿದ್ದರು. ಶ್ರುತಿ ಹಾಗೂ ಸಹೋದರ ಶರಣ್ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ಇದೀಗ ಕುಟುಂಬದ 3ನೇ ಕುಡಿ ಬೆಳ್ಳಿಪರದೆ ಮೇಲೆ ರಾರಾಜಿಸಲು ಸಿದ್ಧತೆ ನಡೆಸಿದ್ದಾರೆ. ಸಾಕಷ್ಟು ಕಥೆಗಳನ್ನು ಕೇಳ್ತಿದ್ದು ಈ ವರ್ಷವೇ ಗೌರಿ ಆರಂಗೇಟ್ರಂ ಮಾಡ್ತಾರೆ ಎಂದು ಶ್ರುತಿ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಗೌರಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ್ಗೆ ಫೋಟೊಶೂಟ್ ಮಾಡಿ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಆದಷ್ಟು ಬೇಗ ಚಿತ್ರರಂಗಕ್ಕೆ ಬನ್ನಿ ಎಂದು ಕಾಮೆಂಟ್ ಮಾಡುತ್ತಿರುತ್ತಾರೆ. ಪದವಿ ಮುಗಿಸಿರುವ ಗೌರಿ ತೆರೆಮರೆಯಲ್ಲಿ ಚಿತ್ರರಂಗ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾರೆ. ನಾಯಕಿಯಾಗಿ ಒಂದೊಳ್ಳೆ ಪಾತ್ರದ ಮೂಲಕ ಮಗಳನ್ನು ಚಂದನವನಕ್ಕೆ ಪರಿಚಯಿಸಲು ಶ್ರುತಿ ಮುಂದಾಗಿದ್ದಾರೆ.
ಫಿಲ್ಮ್ ಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿರುವ ನಟಿ ಶ್ರುತಿ "ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ಒಂದು ಸ್ಕ್ರಿಪ್ಟ್ ಓಕೆ ಆಗುವ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಈ ವರ್ಷವೇ ಗೌರಿ ಚಿತ್ರರಂಗ ಪ್ರವೇಶ ಮಾಡ್ತಾಳೆ. ಕಥಕ್ ಡ್ಯಾನ್ಸ್ ಕಲಿಯುತ್ತಿದ್ದಾಳೆ. ರಂಗಭೂಮಿಯಲ್ಲಿ ನಟಿಸುತ್ತಿದ್ದಾಳೆ. ಸುರೇಶ್ ಮಾಸ್ಟರ್, ಜೋಸೆಫ್ ಜಾನ್ ಮಾಸ್ಟರ್ ಹಾಗೂ ಉಷಾ ಭಂಡಾರಿ ಬಳಿ ನಟನೆಯ ಪಟ್ಟುಗಳನ್ನು ಕಲಿತ್ತಿದ್ದಾಳೆ" ಎಂದು ಮಾಹಿತಿ ನೀಡಿದ್ದಾರೆ.

ತಾವೇ ಸಿನಿಮಾ ನಿರ್ಮಾಣ ಮಾಡಬೇಕು ಎನ್ನುವ ಆಲೋಷನೆ ಇಲ್ಲ. ಒಳ್ಳೆ ಪಾತ್ರಗಳಲ್ಲಿ ಗೌರಿ ನಟಿಸಬೇಕು. ಒಳ್ಳೆ ಅವಕಾಶಗಳು ಸಿಗಬೇಕು ಎಂದು ಶ್ರುತಿ ವಿವರಿಸಿದ್ದಾರೆ. ಹೊಸ ಪ್ರತಿಭೆಗಳು ಪ್ರತಿದಿನ ಚಿತ್ರರಂಗಕ್ಕೆ ಬರ್ತಿದ್ದಾರೆ. ಕೆಲವರು ತಮ್ಮ ಪ್ರತಿಭೆ ಹಾಗೂ ಅದೃಷ್ಟದಿಂದ ಬಣ್ಣದಲೋಕದಲ್ಲಿ ಮೆರೆಯುತ್ತಾರೆ. 90ರ ದಶಕದ ಆರಂಭದಲ್ಲಿ ಶ್ರುತಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಅಪ್ಪ, ಅಪ್ಪಂದಿರು ನಾಟಕಗಳಲ್ಲಿ ನಟಿಸುವುದನ್ನು ನೋಡಿ ಬೆಳೆದ ಶ್ರುತಿ 'ನಂಬಿದ್ರೆ ನಂಬಿ ಬಿಟ್ರೆ ಬಿಡಿ' ಎಂಬ ಚಿತ್ರದಲ್ಲಿ ಮೊದಲ ಬಾರಿ ಕ್ಯಾಮರಾ ಎದುರಿಸಿದ್ದರು. ಬಳಿಕ 'ಆಸೆಗೊಬ್ಬ ಮೀಸೆಗೊಬ್ಬ' ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು. ಗಿರಿಜಾ ಎನ್ನುವುದು ಅವರ ನಿಜವಾದ ಹೆಸರು. ಪ್ರಿಯದರ್ಶಿನಿ ಎಂದು ಹೆಸರು ಬದಲಿಸಿಕೊಂಡು ಮೊದಲ 2 ಚಿತ್ರಗಳಲ್ಲಿ ನಟಿಸಿದ್ದರು. ದ್ವಾರಕೀಶ್ ನಿರ್ಮಿಸಿ ನಿರ್ದೇಶಿಸಿದ 'ಶ್ರುತಿ' ಎಂಬ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಮುಂದೆ ಅದೇ ಶ್ರುತಿ ಎಂಬ ಹೆಸರಿನಲ್ಲೇ ನೇಮು ಫೇಮು ಗಳಿಸಿದರು.
ವಿಷ್ಣುವರ್ಧನ್, ಅಂಬರೀಶ್, ಶಿವರಾಜ್‌ಕುಮಾರ್ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಶ್ರುತಿ ಸೈ ಎನಿಸಿಕೊಂಡರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡಿದ್ದರು. ನಾಯಕಿಯಾಗಿ ಮಾತ್ರವಲ್ಲದೇ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಇವತ್ತಿಗೂ ಕನ್ನಡದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಶ್ರುತಿ ಮಗಳು ಚಿತ್ರರಂಗಕ್ಕೆ ಬರುತ್ತಿರುವುದು ವಿಶೇಷ.
ಗೌರಿ ನಟನೆಯ ಮೊದಲ ಸಿನಿಮಾ ಯಾವ್ದು? ಹೀರೊ ಯಾರು? ಎನ್ನುವ ಕುತೂಹಲ ಮೂಡಿದೆ. ಶೀಘ್ರದಲ್ಲೇ ಆ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ. ಗೌರಿ ಸಿನಿಜೀವನಕ್ಕೆ ಆಲ್ ದಿ ಬೆಸ್ಟ್.


Click it and Unblock the Notifications











