ಪದ್ಮಭೂಷಣ ಪ್ರಶಸ್ತಿಯನ್ನು ಅನಂತ್ ನಾಗ್ ಅರ್ಪಿಸಿದ್ದು ಯಾರಿಗೆ ?
ಅನಂತ್ ನಾಗ್ ಕನ್ನಡ ಚಿತ್ರರಂಗದ ದಂತಕಥೆ. 50 ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿರುವ ಅನಂತ್ ನಾಗ್ ಕನ್ನಡ ಚಿತ್ರರಂಗದ ಅತ್ಯಂತ ಸುರದ್ರೂಪಿ ನಾಯಕ ಕೂಡ ಹೌದು. ಬಯಲು ದಾರಿ, ನಾ ನಿನ್ನ ಬಿಡಲಾರೆ, ಬೆಂಕಿಯ ಬಲೆ, ಚಂದನದ ಗೊಂಬೆ, ಹೀಗೆ ಅನೇಕ ಚಿತ್ರಗಳ ಮೂಲಕ ಹೆಣ್ಣು ಮಕ್ಕಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಅನಂತ್ ನಾಗ್ ಅವರಿಗೆ ಹಾಗೇ ನೋಡಿದರೆ ಪದ್ಮ ಪ್ರಶಸ್ತಿಯನ್ನು ಯಾವತ್ತೋ ಕೊಡಬೇಕಿತ್ತು. ಆದರೆ, ದುರ್ದೈವ ಅನಂತ್ ನಾಗ್ ಅವರ ಸಾಧನೆ ಕೇಂದ್ರ ಸರ್ಕಾರದ ಕಣ್ಣಿಗೆ ಯಾವತ್ತು ಕಾಣಿಸಲಿಲ್ಲ.
ಹೀಗಾಗಿಯೇ ಕಳೆದ ಕೆಲ ವರ್ಷಗಳಿಂದ ಪದ್ಮ ಪ್ರಶಸ್ತಿಯ ವಿಚಾರದಲ್ಲಿ ಕನ್ನಡಿಗರು ಅನಂತ್ ನಾಗ್ ಅವರ ಪರ ವಕಾಲತ್ತು ವಹಿಸಿದ್ದರು. ಅನಂತ್ ನಾಗ್ ಅವರಂತಹ ದಿಗ್ಗಜರಿಗೆ ಪದ್ಮ ಪ್ರಶಸ್ತಿ ಕೊಡದಿದ್ದರೆ ಆ ಪ್ರಶಸ್ತಿಗೆ ಇರುವ ಗೌರವ ಕಡಿಮೆಯಾಗುತ್ತೆ ಎಂದು ಕಿಡಿ ಕಾರಲು ಶುರು ಮಾಡಿದ್ದರು. ಪುನೀತ್ ರಾಜ್ ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹೀಗೆ ಕನ್ನಡ ಚಿತ್ರರಂಗದ ಅನೇಕರು ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಬೇಕು ಎಂದು ಅಭಿಯಾನವನ್ನು ಮಾಡಿದ್ದರು. ಇದೆಲ್ಲದರ ಪರಿಣಾಮ ಎಂಬಂತೆ ಈಗ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ. ಈ ಹಿನ್ನೆಲೆ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಅನಂತ್ ನಾಗ್ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಹರಸಿ ಹಾರೈಸಿದ, ಬೆಂಬಲಿಸಿದ ಎಲ್ಲರಿಗೆ ಧನ್ಯವಾದ ಹೇಳಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನಂತ್ ನಾಗ್ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ನನಗೆ ಖುಷಿ ಇದೆ ಎಂದು ಹೇಳಿದ್ದಾರೆ. ಕನ್ನಡಿಗರು ವಿಶೇಷವಾಗಿ ಈ ಪ್ರಶಸ್ತಿ ನನಗೆ ಬರಬೇಕು ಎಂದು ತುಂಬಾ ಆಸೆ ಪಟ್ಟಿದ್ದರು ಆ ಆಸೆ ಇಂದಿ ಈಡೇರಿದೆ ಎಂದಿರುವ ಅನಂತ್ ನಾಗ್ ನಮ್ಮ ದೇಶದಲ್ಲಿ ಹಿಂದಿನಿಂದ ಪದ್ಮ ಪ್ರಶಸ್ತಿ ಕೊಡುವ ವ್ಯವಸ್ಥೆ ಬೇರೆ ಇತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಪದ್ಮ ಪ್ರಶಸ್ತಿಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕು ಎಂದು ಘೋಷಣೆ ಮಾಡಿದ್ದರು, ಬಳಿಕ ಕನ್ನಡಿಗರು ನನ್ನ ಹೆಸರನ್ನು ಸೂಚಿಸಿದ್ದರು ಎಂದು ಹೇಳಿದ್ದಾರೆ. ಆ ವರ್ಷ ನನಗೆ ಪ್ರಶಸ್ತಿ ಬರಲಿಲ್ಲ ಕಳೆದ ಮೂರು ವರ್ಷಗಳಿಂದ ಹೀಗೆ ಆಗ್ತಿತ್ತು ಎಂದು ಮಾತನಾಡಿದ್ದಾರೆ.
ಮುಂದುವರೆದು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ನನಗೆ ಪದ್ಮ ಪ್ರಶಸ್ತಿ ಬರಲಿ ಎಂದು ಅಭಿಯಾನ ನಡೆಸಿದ್ದರು, ಕನ್ನಡಿಗರಿಗೆ, ಅಭಿಮಾನಿಗಳಿಗೆ ಈಗ ಸಂತೋಷವಾದಂತೆ ನನಗೂ ಕೂಡ ಸಂತೋಷವಾಗಿದೆ ಎಂದಿರುವ ಅನಂತ್ ನಾಗ್ ಈ ಪ್ರಶಸ್ತಿಯನ್ನು ನಾನು ಕನ್ನಡದ ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ, ನನ್ನ ಗುರುಗಳಿಗೆ ಮತ್ತು ರಂಗಭೂಮಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದವನ್ನು ಹೇಳಿದ್ದಾರೆ.
ಇನ್ನುಳಿದಂತೆ 2025ರಲ್ಲಿ 139 ಗಣ್ಯರು ಪದ್ಮ ಪ್ರಶಸ್ತಿಗಳಿಂದ ಪುರಸ್ಕ್ರತಗೊಂಡಿದ್ದಾರೆ. ಆ ಪೈಕಿ 07 ಪದ್ಮ ವಿಭೂಷಣ ಪ್ರಶಸ್ತಿಗಳಿದ್ದರೆ 19 ಪದ್ಮಭೂಷಣ ಪ್ರಶಸ್ತಿಗಳಿವೆ. 113 ಪದ್ಮಶ್ರೀ ಪ್ರಶಸ್ತಿಗಳು ಇದರಲ್ಲಿ ಸೇರಿವೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.


Click it and Unblock the Notifications











