ಉಪೇಂದ್ರ ಅತ್ಯಾಪ್ತ ಸ್ನೇಹಿತ ಮುರಳಿ ಮೋಹನ್‌ಗೆ ಬೇಕಿದೆ ಆರ್ಥಿಕ ನೆರವು, ಸಹಾಯಕ್ಕೆ ಅಂಗಲಾಚಿದ ಸಂತ ನಿರ್ದೇಶಕ..!
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಆದರೆ, ಕೆಲ ಒಮ್ಮೆ ಎಲ್ಲವೂ ಕೂಡಿ ಬಂದಾಗ, ಬದುಕು ಒಂದು ಹಂತಕ್ಕೆ ರೂಪಗೊಳ್ಳುತ್ತಿರುವಾಗ. ವಿಧಿಯ ಆಟ ಬೇರೆಯದ್ದೇ ಆಗಿರುತ್ತೆ. ಇದಕ್ಕೆ ಶ್ರೀಧರ್ ಅವರ ಬದುಕು ಮತ್ತೊಂದು ಉದಾಹರಣೆ.

ಹೌದು, ಮುರಳಿ ಮೋಹನ್.. ಸಂತ, ನಾಗರಹಾವು, ಮಲ್ಲಿಕಾರ್ಜುನ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಟ ಕಾಶಿನಾಥ್ ಅವರ ಶಿಷ್ಯ ಮತ್ತು ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಅವರ ಆಪ್ತ ಸ್ನೇಹಿತ.
ಇಂಥಾ ಮುರಳಿ ಮೋಹನ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆಯ ವೆಚ್ಚ ಭರಿಸಲಾಗದೇ ಒದ್ದಾಡುತ್ತಿದ್ದಾರೆ. ಅನ್ಯ ಮಾರ್ಗ ಇಲ್ಲದೇ ಸಹಾಯಕ್ಕೆ ಅಂಗಲಾಚಿದ್ದಾರೆ. ಮುರಳಿ ಮೋಹನ್ ಅವರ ಆರೋಗ್ಯದ ಸ್ಥಿತಿಯ ಕುರಿತು ಕನ್ನಡದ ಖ್ಯಾತ ಸಿನಿಮಾ ಪತ್ರಕರ್ತ ಗೌರಿಶ್ ಅಕ್ಕಿ ತಮ್ಮ ಗೌರಿಶ್ ಅಕ್ಕಿ ಸ್ಟುಡಿಯೋ ಪೇಜ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು ಅದರ ವಿವರ ಈ ಕೆಳಗಿನಂತೆ ಇದೆ.
ಗೌರಿಶ್ ಅಕ್ಕಿ ಅವರ ಮನವಿ
ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನ ಮೊದಲ ಅತಿಥಿಗಳಲ್ಲಿ ಒಬ್ಬರು - ನಿರ್ದೇಶಕ ಸಂತ ಮುರಳಿ ಮೋಹನ್. ನಿರ್ದೇಶಕರಾಗಿ, ನಟ, ಸಂಭಾಷಣೆಕಾರರಾಗಿ ಚಿತ್ರರಂಗದಲ್ಲಿ 36ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ತಮ್ಮ ಸುದೀರ್ಘ ಸಿನಿಜರ್ನಿಯ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿರುವ ವೀಡಿಯೋಗಳನ್ನು ನೀವೆಲ್ಲ ನೋಡಿ ಮೆಚ್ಚಿಕೊಂಡಿದ್ದೀರಿ ಕೂಡ. ಆದರೆ ನಾವೀಗ ತಿಳಿಸಲು ಹೊರಟಿರುವ ಮುಖ್ಯ ವಿಷಯ ಇಲ್ಲಿದೆ.
2018ರಿಂದ ಮುರಳಿ ಮೋಹನ್ ಅವರು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸಿತ್ತಿದಾರೆ.. ಮೂತ್ರಪಿಂಡ ವೈಫಲ್ಯವಾಗಿದ್ದು ವಾರಕ್ಕೆ 3 ದಿನಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದಾರೆ. ಇದೀಗ ಇವರು ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಒದಗಿದೆ. ಈ ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚ: ಸುಮಾರು ರೂ.25,00,000/- (ಇಪ್ಪತ್ತೈದು ಲಕ್ಷ ರೂಪಾಯಿಗಳು)
ಈಗಾಗಲೇ ಅವರು ಹೃದಯ ಶಸ್ತ್ರ ಚಿಕಿತ್ಸೆ ಹಾಗೂ ಇತರೆ ಚಿಕಿತ್ಸೆಗಳಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದು, ಈ ನಿಟ್ಟಿನಲ್ಲಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ..
ಗೌರೀಶ್ ಅಕ್ಕಿ ಸ್ಟುಡಿಯೋ ವೀಕ್ಷಕರಲ್ಲಿ ನಮ್ಮ ವಿನಂತಿ ಏನೆಂದರೆ, ಮುರಳಿ ಮೋಹನ್ ಅವರ ಚಿಕಿತ್ಸೆಗಾಗಿ ನಿಮ್ಮ ಕೈಲಾದಷ್ಟು ಧನಸಹಾಯವನ್ನು ಪ್ರತಿಯೊಬ್ಬರು ಮಾಡುವ ಮೂಲಕ ಅವರ ಸಂಕಷ್ಟ ಕಾಲದಲ್ಲಿ ಸಹಾಯಹಸ್ತ ಚಾಚಬೇಕು.
ಗೌರೀಶ್ ಅಕ್ಕಿ ಸ್ಟುಡಿಯೋ ಕೂಡ ಈ ಹೊತ್ತಿನಲ್ಲಿ ಮುರಳಿ ಅವರಿಗೆ ಅಗತ್ಯವಿರುವ ಸಹಾಯ ಮಾಡಲಿದೆ.ದಯವಿಟ್ಟು ಹೆಚ್ಚಿನ ಜನರಿಗೆ ಈ ವಿಷಯ ತಲುಪಿಸಿ, ನಿಮ್ಮ ಕೈಲಾದಷ್ಟು ಸಹಾಯ ಮಾಡಿ..
ಅವರ ಚಿಕಿತ್ಸೆಗೆ ಈ ಬ್ಯಾಂಕ್ ಖಾತೆ ಅಥವಾ ಸ್ಕಾನರ್ ಮೂಲಕ ಹಣ ವರ್ಗಾಯಿಸಬಹುದು..
UCO Bank .. ( KR Road Branch )
Name : Murali S
Ac number : 1641011025178
IFSC : UCBA0001641
ಹೀಗೆ ಗೌರಿಶ್ ಅಕ್ಕಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ ತಮ್ಮ ಗೌರಿಶ್ ಅಕ್ಕಿ ಸ್ಟುಡಿಯೋ ಪೇಜ್ ಮೂಲಕ ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುರಳಿ ಮೋಹನ್ ಅವರ ಈ ಕಷ್ಟಕ್ಕೆ ಕನ್ನಡಿಗರು ಮಿಡಿಯಲಿ, ಮುರಳಿ ಮೋಹನ್ ಶೀಘ್ರ ಗುಣಮುಖರಾಗಲಿ ಎನ್ನುವುದೇ ನಮ್ಮ ಪ್ರಾರ್ಥನೆ. ತಮ್ಮ ಸ್ನೇಹಿತನ ಕಷ್ಟಕ್ಕೆ ಉಪೇಂದ್ರ ಅವರು ಈಗ ನೆರವಾಗಬೇಕಿದೆ.


Click it and Unblock the Notifications











