ಅಪ್ಪು-ಸೂರಿ 'ಅಣ್ಣಾಬಾಂಡ್' ಚಿತ್ರದಲ್ಲಿ ತಪ್ಪಾಗಿದ್ದೇನು? ಈ ಕಥೆಗೂ ಸೇತುಪತಿ ಚಿತ್ರಕ್ಕೂ ಲಿಂಕ್ ಇದ್ಯಾ?
'ಜಾಕಿ' ಬಳಿಕ ಪುನೀತ್ ರಾಜ್‌ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಅಣ್ಣಾಬಾಂಡ್'. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿರಲಿಲ್ಲ. ಆದರೆ ಅಪ್ಪು ಸಿಕ್ಸ್‌ಪ್ಯಾಕ್ ಖದರ್, ಸ್ಕೆಲಿಟನ್ ಬೈಕ್, ಚಿತ್ರದ ಸಾಂಗ್ಸ್ ಅಭಿಮಾನಿಗಳು ಇನ್ನು ಮರೆತ್ತಿಲ್ಲ.
2012ರಲ್ಲಿ 'ಅಣ್ಣಾಬಾಂಡ್' ಸಿನಿಮಾ ತೆರೆಮೇಲೆ ಬಂದಿತ್ತು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಪಾವರ್ತಮ್ಮ ರಾಜ್‌ಕುಮಾರ್ ಚಿತ್ರವನ್ನು ನಿರ್ಮಿಸಿದ್ದರು. ನಿಧಿ ಸುಬ್ಬಯ್ಯ ಹಾಗೂ ಪ್ರಿಯಾಮಣಿ ನಾಯಕಿಯರಾಗಿ ನಟಿಸಿದ್ದರು. ಸತ್ಯಾ ಹೆಗ್ಡೆ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿತ್ತು. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ರಂಗಯಣ ರಘು, ಅವಿನಾಶ್, ನೀನಾಸಂ ಸತೀಶ್, ಅಚ್ಯುತ್ ಕುಮಾರ್ ಕೂಡ ತಾರಾಗಣದಲ್ಲಿದ್ದರು.

ಲವ್, ಆಕ್ಷನ್, ಸೆಂಟಿಮೆಂಟ್, ಥ್ರಿಲ್ಲರ್ ಹೀಗೆ ಎಲ್ಲಾ ಅಂಶಗಳನ್ನು ಹದವಾಗಿ ಬೆರಸಿ ಸೂರಿ 'ಅಣ್ಣಾಬಾಂಡ್' ಸಿನಿಮಾ ಕಟ್ಟಿಕೊಟ್ಟಿದ್ದರು. ಡ್ರಗ್ಸ್ ಮಾಫಿಯಾ ಬಗ್ಗೆ ಕೂಡ ಚಿತ್ರದಲ್ಲಿ ಚರ್ಚಿಸಲಾಗಿತ್ತು. 'ಅಣ್ಣಾಬಾಂಡ್' ಎನ್ನುವ ಟೈಟಲ್ಲೇ ಎಲ್ಲೋ ಒಂದು ಕಡೆ ಚಿತ್ರಕ್ಕೆ ಹಿನ್ನಡೆಯಾಗಿಬಿಟ್ಟಿತ್ತು. ಆದರೆ ಚಿತ್ರದಲ್ಲಿ ಟೈಟಲ್‌ಗೆ ಎಲ್ಲೂ ನ್ಯಾಯ ದೊರಕಿರಲಿಲ್ಲ. ಅತಿಯಾದ ನಿರೀಕ್ಷೆಯ ಭಾರಕ್ಕೆ ಸಿನಿಮಾ ಕುಸಿದುಬಿಟ್ಟಿತ್ತು ಎಂದರೆ ತಪ್ಪಾಗಲ್ಲ.
ಅಷ್ಟಕ್ಕೂ 'ಅಣ್ಣಾಬಾಂಡ್' ಸಿನಿಮಾ ಸೋಲಿಗೆ ಕಾರಣವೇನು? 12 ವರ್ಷಗಳ ಬಳಿಕ ಇಂತಾದೊಂದು ಚರ್ಚೆ ಯಾಕೆ? ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಅದಕ್ಕೆ ಒಂದು ಕಾರಣವಿದೆ. ಸೂರಿ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ವಿಕ್ಕಿ ವರುಣ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಜಾಕಿ' ಹಾಗೂ 'ಅಣ್ಣಾಬಾಂಡ್' ಚಿತ್ರಗಳಿಗೆ ಅವರು ಸೂರಿ ಜೊತೆ ಕೆಲಸ ಮಾಡಿದ್ದರು. ಕೈರಂ ವಾಶಿ ಯೂಟ್ಯೂಬ್ ಸಂದರ್ಶನದಲ್ಲಿ ವಿಕ್ಕಿ ಸಾಕಷ್ಟು ಸಂಗತಿ ಬಿಚ್ಚಿಟ್ಟಿದ್ದಾರೆ.

'ಅಣ್ಣಾಬಾಂಡ್' ಸಿನಿಮಾ ವಿಚಾರದಲ್ಲಿ ಏನು ತಪ್ಪಾಯಿತು ಎನ್ನುವ ಪ್ರಶ್ನೆಗೆ "ಅಣ್ಣಾಬಾಂಡ್ ಚಿತ್ರದ ಒನ್‌ಲೈನ್ ಸ್ಟೋರಿ ಏನು? ಅದು ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಚಿತ್ರದ ಕಥೆ. ಜಾಕಿಶ್ರಾಫ್(ಚಾರ್ಲಿ) ತಮ್ಮ ಮಗಳು ಅಲ್ಲ ಎಂದುಕೊಂಡು ತಮ್ಮ ಮಗಳನ್ನೇ ಸಾಯಿಸುತ್ತಾರೆ. ಬಳಿಕ ತಮ್ಮ ಮಗಳು ಎಂದು ಗೊತ್ತಾಗುತ್ತದೆ.
ಮಹಾರಾಜ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಮಾಡಿರುವ ಪಾತ್ರವನ್ನೇ 'ಅಣ್ಣಾಬಾಂಡ್' ಚಿತ್ರದಲ್ಲಿ ಜಾಕಿಶ್ರಾಫ್ ಮಾಡಿದ್ದರು ಅಷ್ಟೇ. ಎರಡೂ ಚಿತ್ರದ ಪ್ರಸೆಂಟೇಷನ್ ಬೇರೆ ಬೇರೆ. ಎರಡೂ ಚಿತ್ರಗಳ ಒನ್‌ಲೈನ್ ಸ್ಟೋರಿ ಒಂದೇ ಎಂದು ವಿಕ್ಕಿ ವಿವರಿಸಿದ್ದಾರೆ. 'ಓಲ್ಡ್ ಬಾಯ್' ಎನ್ನುವ ಕೊರಿಯನ್ ಚಿತ್ರದಲ್ಲಿ ಡೈರೆಕ್ಟ್ ಆಗಿ ಹೇಳಿದ್ದಾರೆ. ನಮ್ಮಲ್ಲಿ ಅದನ್ನು ಅರಗಿಸಿಕೊಳ್ಳೋಕೆ ಆಗಲ್ಲ ಎಂದು ಬದಲಿಸಿದ್ದಾರೆ.
ಸೂರಿ ಸರ್ ಸ್ಕ್ರಿಪ್ಟ್ ಮಾಡಿದಾಗ ಇದು ನೆಕ್ಸ್ಟ್ ಲೆವೆಲ್ ಟ್ವಿಸ್ಟ್ ಇದು ಕಥೆಯಲ್ಲಿ ಎಂದು ನಮಗೆ ಅನ್ನಿಸಿತ್ತು. ಆದರೆ ಅದು ಏನಾಯ್ತೋ ನಮಗೆ ಗೊತ್ತಾಗಲಿಲ್ಲ. ಯಾಕೋ ನಮ್ಮ ಜಡ್ಜ್‌ಮೆಂಟ್‌ಗೆ ಸಿಗಲಿಲ್ಲ. ಈಗ 'ಮಹಾರಾಜ' ಸಿನಿಮಾ ನೋಡಿದಾಗ ಎರಡೂ ಚಿತ್ರಗಳ ಒನ್‌ಲೈನ್ ಸ್ಟೋರಿ ಸೇಮ್ ಅನ್ನಿಸುತ್ತದೆ ಎಂದು ವಿಕ್ಕಿ ಹೇಳಿದ್ದಾರೆ.
ವಿಕ್ಕಿ ಹೀರೊ ಆಗಿ ನಟಿಸುತ್ತಿರುವ 'ಕಾಲಪತ್ಥರ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಸೂರಿ ನಿರ್ದೇಶನದ 'ಕೆಂಡ ಸಂಪಿಗೆ' ಚಿತ್ರದ ಮೂಲಕ ಅವರು ಹೀರೊ ಆಗಿದ್ದರು. ಬಳಿಕ 'ಕಾಲೇಜ್ ಕುಮಾರ' ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. ಇದೀಗ ಸಿನಿಮಾ 'ಕಾಲಪತ್ಥರ್' ತಕ್ಕಮಟ್ಟಿಗೆ ನಿರೀಕ್ಷೆ ಹುಟ್ಟಿಸಿದೆ. ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಶಿವಣ್ಣ ಚಿತ್ರದ ಟ್ರೈಲರ್ ಲಾಂಚ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರಕ್ಕೆ ಸ್ವತಃ ವಿಕ್ಕಿ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











