twitter
    For Quick Alerts
    ALLOW NOTIFICATIONS  
    For Daily Alerts

    ವಿದೇಶಗಳಲ್ಲಿ ಕನ್ನಡ ಸಿನಿಮಾ ವೀಡಿಯೋ ಕ್ಯಾಸೆಟ್‌ಗಳ ಕತೆ

    By Super
    |

    ನಾನು ಈ ಲೇಖನ ಬರೆಯಬೇಕಾಗಿ ಬಂದದ್ದು, ಕೆಲವು ಉತ್ತಮ ಕನ್ನಡ ಚಲನ ಚಿತ್ರಗಳ ಮತ್ತು ನಾನು ನೋಡಿರದ ಕೆಲವು ಕನ್ನಡ ಚಿತ್ರಗಳನ್ನು ನೋಡಬೇಕೆಂದು ವೀಡಿಯೋ ಕ್ಯಾಸೆಟ್‌ಗಳನ್ನು ಇಲ್ಲಿ, ಹೊರದೇಶದಲ್ಲಿ ಹುಡುಕಿ ಹೊರಟಾಗ..........

    ಕನ್ನಡ ಚಲನಚಿತ್ರರಂಗ ಮಾರ್ಕೆಟಿಂಗ್‌ನಲ್ಲಿ ಹೇಗೆ ಹಿಂದೆ ಬಿದ್ದಿದೆ ಎಂಬುದಕ್ಕೆ ಹೊರ ದೇಶಗಳಲ್ಲಿ ಕನ್ನಡ ಚಲನ ಚಿತ್ರಗಳ ಕ್ಯಾಸೆಟ್‌ ಲೋಕವನ್ನು ನೋಡಿದರೆ ಸಾಕು. ಇಂದು ಅಮೇರಿಕಾದಲ್ಲಿ ಯಾವುದೇ ಒಂದು ಸಣ್ಣ ಭಾರತೀಯ ದಿನಸಿ ಅಂಗಡಿಗೆ ಹೋದರೂ ಅಲ್ಲಿ ಎಲ್ಲಾ ಹಳೆಯ ಮತ್ತು ಹೊಸ ತೆಲುಗು, ತಮಿಳು, ಮಲಯಾಳಂ ಚಿತ್ರಗಳ ಕ್ಯಾಸೆಟ್‌ಗಳು ಸಿಗುತ್ತವೆ. ಆದರೆ ಕನ್ನಡ ಚಿತ್ರಗಳ ಕ್ಯಾಸೆಟ್‌ಗಳು ಎಲ್ಲೋ ಕೆಲವು ಅಂಗಡಿಗಳಲ್ಲಿ ಮಾತ್ರ ಸಿಗುತ್ತವೆ.

    ಇನ್ನೂ ವಿಪರ್ಯಾಸದ ವಿಷಯವೇನೆಂದರೆ, ಕನ್ನಡದಿಂದ ಬೇರೆ ಭಾಷೆಗೆ ಡಬ್‌ ಆಗಿರುವ ಅಥವ ರಿಮೇಕ್‌ ಆಗಿರುವ ಚಿತ್ರಗಳ ಕ್ಯಾಸೆಟ್‌ಗಳು ಆಯಾ ಭಾಷೆಗಳಲ್ಲಿ ಲಭ್ಯವಿರುತ್ತದೆ. ಆದರೆ ಇವುಗಳ ಮೂಲ ಕನ್ನಡ ಚಿತ್ರಗಳ ಕ್ಯಾಸೆಟ್‌ಗಳೇ ಇರುವುದಿಲ್ಲ. ಇದಕ್ಕೆ ಕಾರಣ ಖಂಡಿತವಾಗಿಯೂ ಇಲ್ಲಿನ ಅಂಗಡಿಯವರಲ್ಲ. ಅಂಗಡಿಯವರು ಬಂದ ಕ್ಯಾಸೆಟ್‌ಗಳನ್ನು ಇಡುತ್ತಾರೆ ಅಷ್ಟೇ.

    ಒಂದು ಉದಾಹರಣೆ, ಕನ್ನಡದಲ್ಲಿ ಒಂದು ಇತಿಹಾಸವನ್ನೇ ಸೃಷ್ಠಿಸಿದ 'ಓಂ" ಚಿತ್ರದ ಕ್ಯಾಸೆಟ್‌ ಇನ್ನು ರಾಜ್‌ ಸಂಸ್ಥೆ ಮಾರುಕಟ್ಟೆಗೆ ಬಿಟ್ಟಿಲ್ಲ. ಈ ಚಿತ್ರ ಬಂದು ಈಗಾಗಲೇ 8 ವರ್ಷಗಳಾಗಿವೆ. ಕನ್ನಡದ ದೊಡ್ಡ ದೊಡ್ಡ ಸಂಸ್ಥೆಗಳೇ ಈ ರೀತಿ ಹೊರನಾಡ ಕನ್ನಡಿಗರನ್ನು ಮರೆತು ಕುಳಿತಿದ್ದರೆ, ಇನ್ನು ನಮ್ಮ ಕನ್ನಡ ಚಿತ್ರರಂಗ 'ವಿಶಾಲ ಮಾರುಕಟ್ಟೆ " ಯಾಗಿ ಬೆಳೆಯುವುದು ಯಾವಾಗ ? ಎಷ್ಟೋ ಉತ್ತಮ ಚಿತ್ರಗಳನ್ನು ನೋಡುವ ಅವಕಾಶವನ್ನು ಕಳೆದುಕೊಂಡಿರುವ ಕೆಲವು ಜನರಿಗೆ ವೀಡಿಯೋ ಕ್ಯಾಸೆಟ್‌ಗಳ ಮೂಲಕ ಆ ಚಿತ್ರಗಳನ್ನು ನೋಡುವ ಅವಕಾಶ ಮಾಡಿಕೊಡಬಹುದು. ಇದಕ್ಕೆ ಸಂಬಂಧ ಪಟ್ಟವರು ಉತ್ತರಿಸುವರೇ ? ಬಹುಶ ನಾನು ಮತ್ತೆ 'ಓಂ" ಚಿತ್ರ ನೋಡಬೇಕೆನಿಸಿದರೆ ಬೆಂಗಳೂರಿನಲ್ಲಿ ರಾಜ್‌ ಸಂಸ್ಥೆ 'ರೀ-ರಿಲೀಸ್‌" ಮಾಡುವ ತನಕ ಕಾದು, ಆಗ ಇಲ್ಲಿಂದ ಅಲ್ಲಿಗೆ ಬಂದು ನೋಡಬೇಕಾಗುತ್ತದೆ.

    'ಓಂ" ಚಿತ್ರದಂತೆ ಇನ್ನು ಎಷ್ಟೋ ಉತ್ತಮ ಹೊಸ ಕನ್ನಡ ಚಲನ ಚಿತ್ರಗಳ ಕ್ಯಾಸೆಟ್‌ಗಳು ಇಲ್ಲಿಗೆ ಇನ್ನೂ ಬಂದೇ ಇಲ್ಲ. ಹೊಸ ಚಿತ್ರಗಳದು ಒಂದು ಕತೆಯಾದರೆ, ಇನ್ನು ಕೆಲವು ಹಳೆಯ ಚಿತ್ರಗಳಾದ 'ನಾಗರಹೊಳೆ" ಒಂದು 'ಮುತ್ತಿನ ಕತೆ", 'ಸೀತಾರಾಮು" ಮತ್ತಿತರ ಚಿತ್ರಗಳ ವೀಡಿಯೋ ಕ್ಯಾಸೆಟ್‌ಗಳನ್ನು ಇಲ್ಲಿ ನಾನು ಹುಡುಕದಿರುವ ಅಂಗಡಿ ಇಲ್ಲ.

    ಇನ್ನು ಇಲ್ಲಿ ಸಿಗುವ ಕೆಲವೇ ಕೆಲವು ಕನ್ನಡ ಕ್ಯಾಸೆಟ್‌ಗಳ ಗುಣಮಟ್ಟ (ಕ್ವಾಲಿಟಿ)ದ ಕತೆ- ಒಂದು ದೊಡ್ಡ ವ್ಯಥೆ. ಕೆಲವು ಚಲನ ಚಿತ್ರಗಳನ್ನು ನೇರವಾಗಿ ಉದಯಟೀವಿಯಿಂದ ಜಾಹೀರಾತುಗಳ ಸಮೇತ ರೆಕಾರ್ಡ್‌ ಮಾಡಿ ಹೊರದೇಶಗಳಿಗೆ ಕಳುಹಿಸಿದ್ದಾರೆ. ಇನ್ನು ಕೆಲವು ಕ್ಯಾಸೆಟ್‌ಗಳು ಮೂಲಪ್ರತಿ ಎಂಬ ಹೆಸರಿನಲ್ಲಿ ಸಿಗುತ್ತವೆ. ಅವು ಸಹ ಯಾವುದೋ ಟೆಂಟ್‌ನಲ್ಲಿ ರೆಕಾರ್ಡ್‌ ಮಾಡಿ ಕಳಿಸಿದ ರೀತಿ ಇರುತ್ತದೆ. ನಾವು ಈ ಕ್ಯಾಸೆಟ್‌ಗೆ ಕೊಡುವ 'ಡಾಲರ್‌"ಗೆ ಬೆಲೆಯೇ ಇಲ್ಲ. ಹೊರ ದೇಶಗಳಿಗೂ ಸಹ ಈ ನಕಲಿ ವಿಡಿಯೋ ಕ್ಯಾಸೆಟ್‌ಗಳ ಕಳಿಸುತ್ತಿರುವವರನ್ನು ಅಲ್ಲಿ ಹಿಡಿಯುವವರು ಯಾರೂ ಇಲ್ಲವೇ ?

    ಯಾವುದೇ ಒಂದು ವಸ್ತು, ಅದು ಗುಣಮಟ್ಟದಲ್ಲಿ ಕೆಟ್ಟದಾಗಿರಲಿ ಅಥವ ಚೆನ್ನಾಗಿರಲಿ, ಅದನ್ನು 'ಮಾರ್ಕೆಟ್‌" ಮಾಡುವ ರೀತಿಯಿಂದಲೇ ಹೋಗುತ್ತದೆ. ಕನ್ನಡ ಚಿತ್ರರಂಗದವರು ಇಂದು ಎಡವುತ್ತಿರುವುದು ಇಲ್ಲೇ. ಆದಷ್ಟು ಬೇಗ ಇದರ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು. ಕನ್ನಡ ಚಿತ್ರರಂಗದ ವಿಡಿಯೋ ಕ್ಯಾಸೆಟ್‌ ಲೋಕದ ಹಂಚಿಕೆದಾರರು, ಹಕ್ಕುದಾರರು ನನ್ನ ವಿನಂತಿಯನ್ನು ಸ್ವಲ್ಪ ಗಮನಕ್ಕೆ ತೆಗೆದುಕೊಳ್ಳುವಿರಾ?

    English summary
    Kannada Edition of Oneindia- Plight of Kannda film video cassettes in foreign countries
    Monday, September 30, 2013, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X