ಕ್ರೈಂ.. ಫ್ಯಾಮಿಲಿ.. ಆನ್‌ಲೈನ್ ಗೇಮಿಂಗ್ ಹಿನ್ನೆಲೆಯುಳ್ಳ ಸಿನಿಮಾ 'ಗ್ರೇ ಗೇಮ್ಸ್': ಕಿಕ್ ಕೊಡ್ತಿದೆ ಟೀಸರ್
ಹೊಸ ಹೊಸ ಆಲೋಚನೆಯುಳ್ಳ ಸಿನಿಮಾ ಬರಬೇಕು. ಕಂಟೆಂಟ್ ವಿಭಿನ್ನವಾಗಿದ್ದರೆ, ಪ್ರೇಕ್ಷಕರಿಗೆ ಇಷ್ಟ ಆಗೋದು ಖಚಿತ. ಅದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳೂ ಕೂಡ ಸಿಕ್ಕಿವೆ. ಈಗ ಮತ್ತೊಂದು ಸಿನಿಮಾ ಹೊಸ ಆಲೋಚನೆಯನ್ನು ಹೊತ್ತು ಬರುತ್ತಿದೆ. ಅದುವೇ 'ಗ್ರೇ ಗೇಮ್ಸ್'.
'ಗ್ರೇ ಗೇಮ್ಸ್ ಕನ್ನಡ ಚಿತ್ರರಂಗಕ್ಕೆ ಹೊಸ ತರಹದ ಸಿನಿಮಾ ಅಂತ ಅನಿಸುತ್ತಿದೆ. ಹೀಗನಿಸೋಕೆ ಕಾರಣ ಇತ್ತೀಚೆಗೆ ರಿಲೀಸ್ ಆಗಿರೋ ಟೀಸರ್. ಈ ಟೀಸರ್ ನೋಡಿದ್ರೆ, ಬೇರೆ ಏನೋ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಅಂತ ಅನಿಸುತ್ತೆ.

ಈ ಸಿನಿಮಾದಲ್ಲಿ ಮನಶ್ಶಾಸ್ತ್ರಜ್ಞನಾಗಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಗಾಳಿಪಟ ಖ್ಯಾತಿಯ ಭಾವನಾ ರಾವ್, ಬಿಗ್ ಬಾಸ್ ಶ್ರುತಿ ಪ್ರಕಾಶ್ ಸಿನಿಮಾ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂವರ ಪಾತ್ರಗಳು ಕಥೆಗೆ ಹೊಸ ಆಯಾಮವನ್ನೇ ಕೊಡುತ್ತೆ ಅನ್ನೋದನ್ನು ಗೆಸ್ ಮಾಡಬಹುದು.
ಹೊಸ ಮುಖ ಜೈ, ಆನ್‌ಲೈನ್ ಗೇಮರ್ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ ರಾಘವೇಂದ್ರ ಲೀಡ್ ರೋಲ್‌ನಲ್ಲಿ ನಟಿಸಿರುವ 'ಗ್ರೇ ಗೇಮ್ಸ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾ ಟೀಸರ್ ಸಿನಿಪ್ರೇಮಿಗಳಿಗೆ ಹೊಸ ಅನುಭವವನ್ನು ಕೊಟ್ಟಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
'ಗ್ರೇ ಗೇಮ್ಸ್'ನಲ್ಲಿ ಕ್ರೈಂ, ಥ್ರಿಲ್ಲರ್ ಜೊತೆಗೆ ರೊಮ್ಯಾಂಟಿಕ್ ಕೌಟುಂಬಿಕ ಕಥೆ ಕೂಡ ಇದೆ. ಈ ಕಥೆಯು ಸತ್ಯ, ಸುಳ್ಳು, ಅದರ ನಡುವಿನ ಅಂತರ, ವಾಸ್ತವ, ವ್ಯಕ್ತಿಯ ಗ್ರಹಿಕೆ ಇವೆಲ್ಲವನ್ನೂ ಪರೀಕ್ಷೆ ಓಳಪಡಿಸುವ ಕಥೆ ಎಂದು ಚಿತ್ರತಂಡ ಹೇಳಿಕೊಂಡಿದೆ.
'ಗ್ರೇ ಗೇಮ್ಸ್' ಇದು ತಂತ್ರಜ್ಞಾನ ಯುಗದಲ್ಲಿ ನಮ್ಮ ನಿಮ್ಮ ಮೇಲಾಗುವ ಮಾನಸಿಕ ಒತ್ತಡವನ್ನು ಹೇಳಲು ಹೊರಟಿದೆ. ಈ ಸಿನಿಮಾದಲ್ಲಿ ಮೂರು ಹಾಡುಗಳಿವೆ. ಹಾಗೇ ಹೊಸ ಕಥೆಯೊಂದಿಗೆ ಎಮೋಷನಲ್ ಟಚ್ ಕೊಡುತ್ತಾ, ಟ್ವಿಸ್ಟ್ ಅಂಡ್ ಟರ್ನ್‌ನೊಂದಿಗೆ ಸೆಳೆಯಲಿದೆ ಅನ್ನೋದು ಚಿತ್ರತಂಡದ ಭರವಸೆ.

ಈ ಸಿನಿಮಾವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಂಗಾಧರ ಸಾಲಿಮಠ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಒಂದು ರೋಚಕ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದು ವರುಣ ಡಿಕೆ. ಆನಂದ ಹೆಚ್.ಮುಗದ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.


Click it and Unblock the Notifications











