ತಮ್ಮನ ಸಿನಿಮಾ ಬಗ್ಗೆ ಸುಳಿವು ಬಿಟ್ಟುಕೊಟ್ಟ ವಿಜಯ್ ರಾಘವೇಂದ್ರ
ನಟ ವಿಜಯ್ ರಾಘವೇಂದ್ರ ಅವರು ಇಂದು 'ಕನ್ನಡ ಫಿಲ್ಮೀಬೀಟ್' ಫೇಸ್‌ಬುಕ್ ಪೇಜ್ ಮೂಲಕ ಲೈವ್ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಎಂದಿನ ತಮ್ಮ ಹಸನ್ಮುಖದೊಂದಿಗೆ ಉತ್ತರಿಸಿದರು.
ಸಿನಿಮಾ, ಲಾಕ್‌ಡೌನ್ , ಕೊರೊನಾ ಸಂಕಷ್ಟಕ್ಕೆ ಸಹಾಯ, ಸಿನಿಮಾ ರಂಗದ ಭವಿಷ್ಯ, ಮುಂದಿನ ಸಿನಿಮಾಗಳು, ನೆಚ್ಚಿನ ನಾಯಕರೊಂದಿಗೆ ನಟಿಸಲು ಒತ್ತಾಯ, ಹಾಡು ಹೀಗೆ ಹಲವು ವಿಷಯಗಳ ಬಗ್ಗೆ ವಿಜಯ್ ರಾಘವೇಂದ್ರ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು.
ಎಲ್ಲಾ ಪ್ರಶ್ನೆಗಳಿಗೆ ವಿಜಯ್ ರಾಘವೇಂದ್ರ ಅವರು ವಿನಯಪೂರ್ವಕಾಗಿಯೇ ಉತ್ತರಿಸಿದರು. ತಮ್ಮ ಮುಂದಿನ ಸಿನಿಮಾಗಳು, ಹಿಂದೆ ಮಾಡಿದ ಸಿನಿಮಾಗಳು ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಇದರ ಮಧ್ಯೆ ತಮ್ಮ ಶ್ರೀಮುರಳಿ ಅವರ ಸಿನಿಮಾ ಒಂದರ ಬಗ್ಗೆ ಸುಳಿವನ್ನೂ ಅವರು ನೀಡಿದರು.

ಉಗ್ರಂ-2 ಸಿನಿಮಾ ಬರಲಿದೆ
'ಉಗ್ರಂ' ಶ್ರೀಮುರಳಿ ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖವಾದದ್ದು, ಅವರಿಗೆ ಮರುಜನ್ಮ ನೀಡಿದ ಸಿನಿಮಾ ಸಹ ಹೌದು. ಅದೇ ಸಿನಿಮಾದ ಎರಡನೇ ಭಾಗ ಬರುತ್ತಿದೆ ಎಂದು ಸುಳಿವು ಬಿಟ್ಟುಕೊಟ್ಟರು ವಿಜಯ್ ರಾಘವೇಂದ್ರ. ಇನ್ನೆರಡು ವರ್ಷದ ಒಳಗಾಗಿ ಉಗ್ರಂ 2 ಸಿನಿಮಾ ತೆರೆಗೆ ಬರಲಿದೆ ಎಂದರು ಅವರು.

ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತು
ತಮ್ಮ ಮುಂದಿನ ಸಿನಿಮಾ '3BHK' ಆಗಿದ್ದು, ಚಿತ್ರೀಕರಣ ಬಹುತೇಕ ಮುಗಿದಿದೆ. ಲಾಕ್‌ಡೌನ್ ಮುಗಿದ ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಶೀಘ್ರವಾಗಿಯೇ ಬಿಡುಗಡೆ ಮಾಡುತ್ತೇವೆ ಎಂದು ವಿಜಯ್ ರಾಘವೇಂದ್ರ ಅಭಿಮಾನಿಯೊಬ್ಬನ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಮನರಂಜಿಸುವುದೇ ಉದ್ದೇಶ
ಭವಿಷ್ಯದ ದಿನಗಳ ಬಗ್ಗೆ ಮಾತನಾಡಿದ ರಾಘವೇಂದ್ರ, ಜನರ ಮನರಂಜಿಸುವುದೇ ನನ್ನ ಕರ್ತವ್ಯ. ಅದು ರಿಯಾಲಿಟಿ ಶೋ ಆಗಿರಲಿ, ಸಿನಿಮಾ ಆಗಲಿ ಏನೇ ಆಗಲಿ ಮನರಂಜಿಸುತ್ತಲೇ ಇರುತ್ತೇನೆ. ಭವಿಷ್ಯದಲ್ಲಿ ವೆಬ್ ಸೀರೀಸ್ ಮಾಡುತ್ತೇನೋ, ಅಥವಾ ರಿಯಾಲಿಟಿ ಶೋ ಮಾಡುತ್ತೇನೋ ಏನೇ ಮಾಡಿದರೂ ಮನರಂಜಿಸುತ್ತೇನೆ ಎಂದರು.

ಅನ್ಯಭಾಷೆಗಳಿಂದ ಆಫರ್ ಬಂದಿದೆಯೇ?
ಅನ್ಯಭಾಷೆಗಳಿಂದ ಯಾವುದೇ ಆಫರ್ ಬಂದಿಲ್ಲ ಎಂದ ವಿಜಯ್ ರಾಘವೇಂದ್ರ, ಯಶ್, ದರ್ಶನ್ , ಶ್ರೀಮುರಳಿ ಅವರೊಟ್ಟಿಗೆ ನಟಿಸಲು ಬೇಡಿಕೆ ಇಟ್ಟ ಅಭಿಮಾನಿಗಳಿಗೆ ಪ್ರಶ್ನೆಗೆ ಉತ್ತರಿಸಿ, 'ಯಶ್ ಜೊತೆ ಹತ್ತು ವರ್ಷದ ಹಿಂದೆಯೇ ಗೋಕುಲ ಸಿನಿಮಾದಲ್ಲಿ ನಟಿಸಿದ್ದೆ. ಎಲ್ಲರೊಂದಿಗೂ ನಟಿಸುವ ಆಸೆ ಇದೆ. ಆದರೆ ಒಳ್ಳೆಯ ಕತೆ, ನಿರ್ಮಾಣ ಸಂಸ್ಥೆ ಸಿಗಲಿ' ಎಂದರು.

''ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿದ್ದೇವೆ''
ಕೊರೊನಾ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ಹೇಗೆ ಸಹಾಯ ಮಾಡಿದಿರಿ ಎಂಬ ಪ್ರಶ್ನೆ ಮತ್ತೆ-ಮತ್ತೆ ವಿಜಯ್ ಅವರಿಗೆ ಕೇಳಲಾಯಿತು. ಇದಕ್ಕೆ ಸೂಕ್ಷ್ಮವಾಗಿ ಉತ್ತರಿಸಿದ ರಾಘವೇಂದ್ರ, ನಾನು ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ, ಸಿನಿಮಾ ಛೇಂಬರ್ ಸಹ ಸಹಾಯ ಮಾಡಿದೆ. ಮಾಡಿದ ಸಹಾಯವನ್ನು ಹೇಳಿಕೊಳ್ಳುವುದು ಸರಿಯಲ್ಲ ಎಂದರು.


Click it and Unblock the Notifications











