ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್
ವಿಜಯ್ ರಾಘವೇಂದ್ರ ನಟನೆಯ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದೆ. ಕನ್ನಡ ಮಾತ್ರವಲ್ಲದೇ ತಮಿಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಸೆಲೆಬ್ರೆಟಿ ಶೋ ಕೂಡ ಆಯೋಜಿಸಲಾಗಿತ್ತು. ತಮಿಳು ಪ್ರೇಕ್ಷಕರಿಂದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ದಿನಕ್ಕೆ ದಿನಕ್ಕೆ ತಮಿಳುನಾಡಿನಲ್ಲಿ ಶೋಗಳ ಸಂಖ್ಯೆ ಹೆಚ್ಚಿಸಿಕೊಂಡು ಈ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸದ್ದು ಮಾಡ್ತಿದೆ. ಮೌತ್ ಟಾಕ್ ಚೆನ್ನಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕರ್ನಾಟಕದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ. ಭಾನುವಾರ(ಮಾರ್ಚ್ 1) ಮತ್ತಷ್ಟು ಒಳ್ಳೆ ರೆಸ್ಪಾನ್ಸ್ ಸಿಗಬೇಕಿದೆ. ಆಗ ಮಾತ್ರ 2ನೇ ವಾರ ಸಿನಿಮಾ ಗಳಿಕೆ ಹೆಚ್ಚಲಿದೆ.

5 ವರ್ಷಗಳ ಹಿಂದೆ ಬಂದಿದ್ದ 'ಸೀತಾರಾಮ್ ಬಿನೋಯ್' ಚಿತ್ರದ ಮುಂದುವರೆದ ಭಾಗ ಇದು. ಆದರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಮಲೆನಾಡಿನ ಆನೆಗದ್ದೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸೀತಾರಾಮ್ ಹೊಸ ಪ್ರಕರಣವನ್ನು ಬೇಧಿಸುವ ಕಥೆಯನ್ನು ಈ ಚಿತ್ರದಲ್ಲಿ ನೋಡಬಹುದು. ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇನ್ನುಳಿದಂತೆ ಕರಾವಳಿ ಭಾಗದ ಕಲಾವಿದರನ್ನೇ ಚಿತ್ರದಲ್ಲಿ ಹೆಚ್ಚು ಬಳಸಿಕೊಳ್ಳಲಾಗಿದೆ. ದೇವಿ ಪ್ರಸಾದ್ ಶೆಟ್ಟಿ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಕಟ್ಟಿಕೊಟ್ಟು ಗೆದ್ದಿದ್ದಾರೆ.
ನಿರ್ದೇಶಕ, ನಿರ್ಮಾಪಕ ಪವನ್ ಒಡೆಯರ್ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ನೋಡಿ ಮೆಚ್ಚಿ ವಿತರಣೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಪವನ್ ಮಾತನಾಡಿದ್ದಾರೆ. "ತಮಿಳುನಾಡಿನಲ್ಲಿ ಪ್ರೇಕ್ಷಕರ ರೆಸ್ಪಾನ್ಸ್ ಚೆನ್ನಾಗಿದೆ. 2ನೇ ವಾರಕ್ಕೆ 3 ಪಟ್ಟು ಶೋಗಳ ಸಂಖ್ಯೆ ಹೆಚ್ಚಾಗಿದೆ. ಆ ಲೆಕ್ಕದಲ್ಲಿ ಬಹಳ ಒಳ್ಳೆ ಬೆಳವಣಿಗೆ. ಕನ್ನಡದಲ್ಲಿ ನಿರೀಕ್ಷಿತ ಮಟ್ಟಕ್ಕೆ ಪ್ರೇಕ್ಷಕರು ಸಿನಿಮಾ ಯಾಕೆ ನೋಡುತ್ತಿಲ್ಲ ಎನ್ನುವುದು ಗೊತ್ತಿಲ್ಲ. ನಿನ್ನೆ(ಶನಿವಾರ) ಕರ್ನಾಟಕದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇವತ್ತು ಹೇಗಿರುತ್ತದೆ ಕಾದು ನೋಡಬೇಕು" ಎಂದು ಹೇಳಿದ್ದಾರೆ.
ತಮಿಳುನಾಡಿನ ಚೆಂಗಲ್‌ಪೇಟ್, ನಾರ್ಥ್ ಆರ್ಕೊಟ್, ಸೌತ್ ಆರ್ಕೊಟ್, ಕೊಯಂಬತ್ತೂರ್, ಸೇಲಂ, ಟಿಕೆ ಏರಿಯಾದಲ್ಲಿ ಹಲವು ಕಡೆ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. "ತಮಿಳುನಾಡಿನಲ್ಲಿ ಪ್ರೇಕ್ಷಕರು ಸಿನಿಮಾವನ್ನು ಸ್ವಾಗತಿಸಿದ್ದಾರೆ. ಇದು ನನಗೆ ಹೊಸ ಅನುಭವ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ಅಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ತಮಿಳು ನಟ ಸಿಬಿರಾಜ್ ಸೇರಿದಂತೆ ಕೆಲ ನಿರ್ಮಾಪಕರು, ನಿರ್ದೇಶಕರು ತಮಿಳುನಾಡಿನಲ್ಲಿ ನಡೆದ ಸೆಲೆಬ್ರೆಟಿ ಶೋನಲ್ಲಿ ಭಾಗಿ ಆಗಿ ಸಾಥ್ ಕೊಟ್ರು" ಎಂದು ಪವನ್ ಒಡೆಯರ್ ತಿಳಿಸಿದ್ದಾರೆ.
ಹೇಮಂತ್ ಆಚಾರ್ಯ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರಕ್ಕಿದೆ. ಮೊದಲ ಭಾಗಕ್ಕಿಂತ 2ನೇ ಭಾಗ ಸಿನಿಮಾ ಸೊಗಸಾಗಿ ಮೂಡಿ ಬಂದಿದೆ. ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಿದೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ವಿಜಯ್ ಲೀನವಾಗಿಬಿಟ್ಟಿದ್ದಾರೆ. ಇಲ್ಲಿ ಹೀರೊ ಬಿಲ್ಡಪ್ ಇಲ್ಲ. ಕಥೆಗೆ ತಕ್ಕಂತೆ ಆ ಪಾತ್ರವನ್ನು ಕಟ್ಟಿಕೊಡಲಾಗಿದೆ.
ಬಹಳ ನೈಜವಾಗಿ ಚಿತ್ರವನ್ನು ತೆರೆಗೆ ತರಲಾಗಿದೆ. ಸುಖಾಸುಮ್ಮನೆ ಎಳೆದಾಡದೇ 2 ಗಂಟೆಯಲ್ಲಿ ಕಥೆ ಹೇಳಿ ಮುಗಿಸಿದ್ದಾರೆ. ಫಸ್ಟ್ ಹಾಫ್‌ಗಿಂತ ಸೆಕೆಂಡ್ ಹಾಫ್ ಹೆಚ್ಚು ಮಜವಾಗಿದೆ. ಛಾಯಾಗ್ರಹಣ, ಸಂಗೀತ ಎಲ್ಲವೂ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಮತ್ತಷ್ಟು ರೋಚಕವಾಗಿಸಿದೆ.


Click it and Unblock the Notifications











