ಸಾಲು ಸಾಲು ಚಿತ್ರಗಳಲ್ಲಿ ರಾಘು, "ಒಂದು ರಿದಂನಲ್ಲಿ ಎಲ್ಲಾ ನಡೀತಿದೆ"; ವಿಜಯ್ ರಾಘವೇಂದ್ರ
ಕನ್ನಡ ಸಿನಿರಸಿಕರ ನೆಚ್ಚಿನ 'ಚಿನ್ನಾರಿ ಮುತ್ತ' ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಸಂಭ್ರಮಾಚರಣೆ ಇಲ್ಲದೇ ಹುಟ್ಟುಹಬ್ಬ ಸರಳವಾಗಿಯೇ ಇದೆ ಎಂದಿದ್ದಾರೆ.
ಬಾಲನಟನಾಗಿ ಚಿತ್ರರಂಗಕ್ಕೆ ಬಂದಿದ್ದ ವಿಜಯ್ ರಾಘವೇಂದ್ರ ಮುಂದೆ ಹೀರೊ ಆಗಿಯೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ದಶಕಗಳ ಹಿಂದೆಯೇ 'ಕೊಟ್ರೆಶಿ ಕನಸು' ಚಿತ್ರಕ್ಕಾಗಿ ಅತ್ಯುತ್ತಮ ಬಾಲ ನಟ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. 46ನೇ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟನಿಗೆ ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿಜಯ್ ರಾಘವೇಂದ್ರ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. "ರಿಪ್ಪನ್ ಸ್ವಾಮಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ರುದ್ರಾಭಿಷೇಕಂ', 'ಕುರ್ಕ' ಹಾಗೂ 'ಮಹಾನ್' ಸಿನಿಮಾ ಕೆಲಸಗಳು ನಡೀತಿದೆ. 'ಸೀತಾರಾಮ್ ಬಿನೋಯ್' ಪಾರ್ಟ್-2 ಶೂಟಿಂಗ್ ಮುಗಿದಿದೆ. ಆ ಸಿನಿಮಾ ಕೂಡ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ" ಎಂದು ಹೇಳಿದ್ದಾರೆ.
ಹಿರಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿ ಕೂಡ ವಿಜಯ್ ರಾಘವೇಂದ್ರ ಗುರ್ತಿಸಿಕೊಂಡಿದ್ದಾರೆ. 'ಡಿಕೆಡಿ' ಹಾಗೂ 'ಮಹಾನಟಿ' ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾ ಬರ್ತಿದ್ದಾರೆ. ಸದ್ಯ 'ಮಹಾನಟಿ' ಸೀಸನ್-2 ಪ್ರೋಮೊ ಕೂಡ ಬಿಡುಗಡೆಯಾಗಿದೆ. "ಶೀಘ್ರದಲ್ಲೇ 'ಮಹಾನಟಿ'-2 ಶೋನಲ್ಲಿ ಕಾಣಿಸಿಕೊಳ್ಳುತ್ತೇನೆ. ಮುಂದೆ ಡಿಕೆಡಿ ಮತ್ತೊಂದು ಸೀಸನ್ ಪ್ಲ್ಯಾನ್ ನಡೀತಿದೆ. ಅದರಲ್ಲಿ ಕೂಡ ಭಾಗವಹಿಸುತ್ತೇವೆ" ಎಂದು ವಿಜಯ ರಾಘವೇಂದ್ರ ತಿಳಿಸಿದ್ದಾರೆ.
ಹುಟ್ಟುಹಬ್ಬದ ದಿನ ಪತ್ನಿ ಸ್ಪಂದನಾ ಅವರನ್ನು ನೆನಪಿಸಿಕೊಂಡು ವಿಜಯ್ ರಾಘವೇಂದ್ರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗಲೇ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದರು. "ಪ್ರತೀ ಜನುಮದಿನ... ಪ್ರತೀ ದಿನ... ನಿನ್ನ ನೆನೆಸಿದೆ ಮನ. ನೀನು ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸಿದೆ. ಐ ಲವ್ ಯು ಚಿನ್ನ" ಎಂದು ಬರೆದುಕೊಂಡಿದ್ದಾರೆ. "ನನ್ನ ಹುಟ್ಟುಹಬ್ಬ, ಹಾಗಾಗಿ ಆಕೆಯ ನೆನಪಾಯಿತು" ಎಂದು ರಾಘು ಹೇಳಿದ್ದಾರೆ.
"ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಲು ನನಗೆ ಇಷ್ಟ ಇಲ್ಲ. ಫ್ರೆಂಡ್ಸ್, ತಂದೆ-ತಾಯಿ ಎಲ್ಲರೂ ವಿಶ್ ಮಾಡಿದ್ರು. ಸಂಜೆ ಮಗನನ್ನು ಕರೆದುಕೊಂಡು ಹೊರಗಡೆ ಹೋಗುತ್ತೇನೆ. ಅಷ್ಟೇ. ಅದು ಬಿಟ್ಟು ಯಾವುದೇ ಪಾರ್ಟಿ, ಸೆಲೆಬ್ರೇಷನ್ ಇಲ್ಲ" ಎಂದು ವಿಜಯ ರಾಘವೇಂದ್ರ ಹೇಳಿದ್ದಾರೆ.
ಪಾರ್ವತಮ್ಮ ರಾಜ್‌ಕುಮಾರ್ ಸಹೋದರ ಚೆನ್ನೇಗೌಡ್ರು ಮಗ ವಿಜಯ್ ರಾಘವೇಂದ್ರ ಚಿಕ್ಕಂದಿನಿಂದ ಸಿನಿಮಾ ನೋಡಿಕೊಂಡು ಬೆಳೆದವರು. ಅಣ್ಣಾವ್ರ 'ಚಲಿಸುವ ಮೋಡಗಳು' ಚಿತ್ರದಲ್ಲಿ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ್ದರು. 'ಪರಶುರಾಮ್' ಚಿತ್ರದಲ್ಲಿ ಕೂಡ ಮಿಂಚಿದ್ದರು. 'ಅರಳಿದ ಹೂವುಗಳು', 'ಜಗಮೆಚ್ಚಿದ ಹುಡುಗ', 'ಕೊಲ್ಲೂರು ಶ್ರೀ ಮೂಕಾಂಬಿಕೆ', 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು', 'ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ' ಚಿತ್ರಗಳಲ್ಲಿ ಬಾಲನಟನಾಗಿ ಮಿಂಚಿದ್ದರು. 'ಸ್ವಾಮಿ ವಿವೇಕಾನಂದ' ಹಿಂದಿ ಬಯೋಪಿಕ್ ಚಿತ್ರದಲ್ಲಿ ಕೂಡ ರಾಘು ನಟಿಸಿದ್ದರು.
'ನಿನಗಾಗಿ' ನಾಯಕ ನಟನಾಗಿ ವಿಜಯ್ ರಾಘವೇಂದ್ರ ನಟಿಸಿದ ಚೊಚ್ಚಲ ಸಿನಿಮಾ. ಮುಂದೆ 'ಖುಷಿ', 'ರಿಷಿ', 'ಕಲ್ಲರಳಿ ಹೂವಾಗಿ', 'ಚೌಕ', 'ಸೀತಾರಾಮ್ ಬಿನೋಯ್' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಇತ್ತೀಚೆಗೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ರಾಘು ಹೆಚ್ಚು ನಟಿಸುತ್ತಿದ್ದಾರೆ. 'ಸೀತಾರಾಮ್ ಬಿನೋಯ್' ಅವರಿಗೆ ಹೊಸ ಇಮೇಜ್ ತಂದುಕೊಟ್ಟಿದೆ. ಗಾಯಕರಾಗಿಯೂ ಒಂದಷ್ಟು ಹಾಡುಗಳನ್ನು ಅವರು ಹಾಡಿ ಗೆದ್ದಿದ್ದಾರೆ. 1998ರಲ್ಲಿ 'ಅತ್ತಿಗೆ' ಎಂಬ ಕಿರುತೆರೆ ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್-1ರಲ್ಲಿ ಸ್ಪರ್ಧಿಸಿ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದರು.


Click it and Unblock the Notifications











