ಯಶ್ 'ಟಾಕ್ಸಿಕ್' ಮುಂದೆ ಥಂಡಾ ಹೊಡೆದ ವಿಜಯ್ 'ಜನನಾಯಗನ್'
ತಮಿಳು ನಟ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಸಣ್ಣ ಝಲಕ್‌ನಲ್ಲಿ ದಳಪತಿ ಖಾಕಿ ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಜನ ನಾಯಗನ್' ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿ ಬರ್ತಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ. ಇದು ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾಗ್ತಿದೆ.

'ಜನ ನಾಯಗನ್' ಆಕ್ಷನ್ ಪ್ಯಾಕ್ಡ್ ಟೀಸರ್ ಅಭಿಮಾನಿಗಳಿಗೂ ಕಿಕ್ ಕೊಟ್ಟರೂ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿಲ್ಲ. ಇನ್ನು ಕೆವಿಎನ್ ಸಂಸ್ಥೆ ನಿರ್ಮಾಣದ 'ಟಾಕ್ಸಿಕ್' ಸಿನಿಮಾ ಟೀಸರ್ ಜೊತೆಗೆ ಹೋಲಿಕೆ ಮಾಡಿ ನೋಡುವವರು ಇದ್ದಾರೆ. ಅದಕ್ಕೆ ಕಾರಣವೂ ಇದೆ. 24 ಗಂಟೆಗಳಲ್ಲಿ ಯಾವ ಸಿನಿಮಾ ಟೀಸರ್ ಎಷ್ಟು ಕೋಟಿ ವೀವ್ಸ್ ಸಾಧಿಸಿದೆ ಎನ್ನುವ ಲೆಕ್ಕದಲ್ಲಿ 'ಜನ ನಾಯಗನ್' ಟೀಸರ್ ಬಹಳ ಹಿಂದೆ ಉಳಿದುಬಿಟ್ಟಿದೆ.
ಸ್ಟಾರ್ ನಟರ ಸಿನಿಮಾಗಳ ಟೀಸರ್, ಟ್ರೈಲರ್ ಬಂದಾಗ ವೀವ್ಸ್, ಲೈಕ್ಸ್ ವಿಚಾರದಲ್ಲಿ ಚರ್ಚೆ ನಡೆಯುತ್ತದೆ. ಯಾವ ಸಿನಿಮಾ ಟೀಸರ್ ಎಷ್ಟು ರೀಚ್ ಆಗಿದೆ ಎನ್ನುವುದನ್ನು ಆಧರಿಸಿ ಆ ಸಿನಿಮಾ ಕ್ರೇಜ್ ಲೆಕ್ಕ ಹಾಕಲಾಗುತ್ತದೆ. ಅಭಿಮಾನಿಗಳು ಈ ವಿಚಾರದಲ್ಲಿ ಬಹಳ ಮುಂದಿರುತ್ತಾರೆ. ಯಾವ ಸಿನಿಮಾ ಟೀಸರ್ ದಾಖಲೆಯನ್ನು ಯಾವ ಸಿನಿಮಾ ಮುರಿಯುತ್ತದೆ ಎಂದು ಕಾದು ನೋಡುತ್ತಾರೆ. 24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್ ಸಾಧಿಸಿದ ಟೀಸರ್ ಯಾವುದು ಎನ್ನುವ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತದೆ.
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ 'ಟಾಕ್ಸಿಕ್' ಟೀಸರ್ ಧೂಳೆಬ್ಬಿಸಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್‌ನಲ್ಲೇ ಆ ಟೀಸರ್ ಕೂಡ ಬಿಡುಗಡೆಯಾಗಿತ್ತು. 24 ಗಂಟೆಗಳಲ್ಲಿ 36 ಮಿಲಿಯನ್ ಅಂದರೆ 3 ಕೋಟಿ 60 ಲಕ್ಷ ವೀವ್ಸ್ ಗಳಿಸಿ ದಾಖಲೆ ಬರೆದಿತ್ತು. ಆ ಬಳಿಕ ಬಂದ ಯಾವುದೇ ಸಿನಿಮಾ ಟೀಸರ್ ಹತ್ತಿರಕ್ಕೂ ಹೋಗಿರಲಿಲ್ಲ. ರಾಮ್‌ಚರಣ್ ನಟನೆಯ 'ಪೆದ್ದಿ' ಟೀಸರ್ 'ಟಾಕ್ಸಿಕ್' ದಾಖಲೆ ಮುರಿದಿದೆ ಎನ್ನಲಾಗಿತ್ತು. ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ.

'ಪೆದ್ದಿ' ಟೀಸರ್ 3 ಕೋಟಿ 31.15 ಕೋಟಿ ವೀವ್ಸ್ ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಇನ್ನು ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಟೀಸರ್ ಕೂಡ ಬಹಳ ಹಿಂದೆಯೇ ಉಳಿದಿದೆ. ಕಳೆದ ವರ್ಷ ಬಂದಿದ್ದ 'ಪುಷ್ಪ'-2 ಟೀಸರ್ 2 ಕೋಟಿ 70 ಲಕ್ಷ ವೀವ್ಸ್, ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಟೀಸರ್ 2 ಕೋಟಿ 60 ಲಕ್ಷ ವೀವ್ಸ್ ಸಾಧಿಸಿತ್ತು. ಇದೀಗ ಸದ್ದು ಮಾಡುತ್ತಿರುವ 'ಜನ ನಾಯಗನ್' ಚಿತ್ರದ ಟೀಸರ್ 24 ಗಂಟೆಗಳಲ್ಲಿ 2 ಕೋಟಿ 20 ಲಕ್ಷ ವೀವ್ಸ್ ಸಾಧಿಸಿ 5 ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.
ಕೆಲವೊಮ್ಮೆ ಅಭಿಮಾನಿಗಳು ಯೂಟ್ಯೂಬ್ ಚಾನಲ್‌ಗಳನ್ನು ದೂಷಿಸುವುದು ಇದೆ. ಹೆಚ್ಚು ಸಬ್‌ಸ್ಕೈಬರ್ಸ್ ಇಲ್ಲದ, ಜನಪ್ರಿಯವಲ್ಲದ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ಬಿಡುಗಡೆ ಮಾಡಿದರೆ ರೀಚ್ ಆಗುವುದಿಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ 'ಟಾಕ್ಸಿಕ್' ಹಾಗೂ 'ಜನ ನಾಯಗನ್' ಎರಡೂ ಚಿತ್ರಗಳನ್ನು ಕೆವಿಎಲ್ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಎರಡೂ ಸಿನಿಮಾ ಟೀಸರ್ ಅವರದ್ದೇ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಒಟ್ಟಾರೆ 'ಜನ ನಾಯಗನ್' ಟೀಸರ್ ಅಷ್ಟೇನು ಸದ್ದು ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದೆ.


Click it and Unblock the Notifications











