Star Politics; ವಿಜಯ್ ರೀತಿ ಕನ್ನಡ ಚಿತ್ರನಟ ಪಕ್ಷ ಕಟ್ಟಿ ಗೆಲ್ಲೋಕೆ ಸಾಧ್ಯವೇ? ಅಪ್ಪು ಡೈಲಾಗ್ ವೈರಲ್ ಆಗ್ತಿರೋದ್ಯಾಕೆ?
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಜಯಭೇರಿ ಬಾರಿಸಿದ್ದಾರೆ. ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳನ್ನು ಸೋಲಿಸಿ ಸಿಎಂ ಕುರ್ಚಿ ಏರಲು ಸಜ್ಜಾಗಿದ್ದಾರೆ. 234 ಕ್ಷೇತ್ರಗಳ ಪೈಕಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಗೆದ್ದಿದೆ. ಸ್ವಂತ ಪಕ್ಷ ಕಟ್ಟಿ ಎರಡೇ ವರ್ಷದಲ್ಲಿ ವಿಜಯ್ ಇತಿಹಾಸ ನಿರ್ಮಿಸಿದ್ದಾರೆ.
ರಾಜಕೀಯರಂಗದಲ್ಲಿ ನಟ ವಿಜಯ್ ಗೆಲುವಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ವಿಜಯ್ ರೀತಿ ಕರ್ನಾಟಕದಲ್ಲಿ ಯಾರಾದರೂ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಆರ್ಭಟಕ್ಕೆ ಬ್ರೇಕ್ ಹಾಕಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಭಾರೀ ಜನಪ್ರಿಯತೆ ಇರುವ ಸಿನಿಮಾ ಕಲಾವಿದರು ರಾಜಕೀಯರಂಗ ಪ್ರವೇಶಿಸಿ ವಿಜಯ್ ರೀತಿ ಜಾದೂ ಮಾಡ್ತಾರಾ ಎನ್ನುವ ಚರ್ಚೆ ಕೂಡ ಜೋರಾಗಿದೆ. ಕರ್ನಾಟಕದಲ್ಲಿ ಕೂಡ ಕೆಲ ತಾರೆಯರು ಪಾಲಿಟಿಕ್ಸ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ ಸ್ವಂತ ಪಕ್ಷ ಕಟ್ಟಿ ದೊಡ್ಡದಾಗಿ ಸದ್ದು ಮಾಡಲಿಲ್ಲ.

ನಟ ಉಪೇಂದ್ರ ಪ್ರಜಾಕೀಯ ಸಿದ್ಧಾಂತಕ್ಕೆ ಜೋತುಬಿದ್ದಿದ್ದಾರೆ. ಪ್ರಜಾಕೀಯ ಪಕ್ಷ ಸ್ಥಾಪಿಸಿದರೂ ಸಕ್ರಿಯ ರಾಜಕೀಯರಂಗ ಪ್ರವೇಶಿಸಿಲ್ಲ. ಇನ್ನುಳಿದಂತೆ ಅಂಬರೀಶ್, ಸುಮಲತಾ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕೆಲ ತಾರೆಯರು ರಾಜಕೀಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. ದಶಕಗಳ ಹಿಂದೆ ಡಾ. ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಸೆಳೆಯುವ ಪ್ರಯತ್ನ ನಡೆದಿತ್ತು. ಕೇಂದ್ರದ ರಾಜಕೀಯ ನಾಯಕರು ಅಣ್ಣಾವ್ರನ್ನು ತಮ್ಮ ಪಕ್ಷಗಳಿಗೆ ಸೇರಿಸಿಕೊಳ್ಳಲು ಮನಸ್ಸು ಮಾಡಿದ್ದರು. ಇಂದಿರಾ ಗಾಂಧಿ ಎದುರು ಮುತ್ತುರಾಜನನ್ನು ಚುನಾವಣೆ ಕಣಕ್ಕಿಳಿಸುವ ಪ್ರಯತ್ನಗಳು ನಡೆದಿತ್ತು.
ಅಣ್ಣಾವ್ರ ಜನಪ್ರಿಯತೆ ನೋಡಿದ್ರೆ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಗೆದ್ದು ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಆದರೆ ಯಾಕೋ ಅವರು ಮನಸ್ಸು ಮಾಡಲೇ ಇಲ್ಲ. ಆ ಬಳಿಕ ಕನ್ನಡ ಚಿತ್ರರಂಗದಲ್ಲಿ ಕೂಡ ಅಂತಹ ಜನಪ್ರಿಯತೆ ಗಳಿಸಿದ ಕಲಾವಿದರು ಕಂಡುಬರಲಿಲ್ಲ. ತಮಿಳುನಾಡಿನಲ್ಲಿ ವಿಜಯ್ ಗೆಲ್ಲುತ್ತಿದ್ದಂತೆ ಕರ್ನಾಟಕದಲ್ಲಿ ಯಾರಾದರೂ ಸಿನಿಮಾ ನಟರು ರಾಜಕೀಯರಂಗ ಪ್ರವೇಶಿಸುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಯಶ್, ಧನಂಜಯ್ ಜನಸೇವೆಗೆ ಮುಂದಾಗುತ್ತಾರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಜೈಲಿನಲ್ಲಿರುವ ದರ್ಶನ್ ಮುಂದೊಂದು ದಿನ ರಾಜಕೀಯರಂಗ ಪ್ರವೇಶಿಸಬಹುದು ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ವಾಸ್ತವದ ಚಿತ್ರಣ ಆ ರೀತಿ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆಂಧ್ರ ಹಾಗೂ ತಮಿಳುನಾಡಿನಲ್ಲಿ ಸಿನಿಮಾ ಕಲಾವಿದರನ್ನು ಆರಾಧಿಸುವ ಮಟ್ಟಕ್ಕೆ ಕರ್ನಾಟಕದಲ್ಲಿ ಜನ ಸಿನಿಮಾ ನಟರನ್ನು ಮೆರೆಸುವುದಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳ ಹಿಂದೆ ಎನ್‌ಟಿಆರ್ ಟಿಡಿಪಿ ಪಕ್ಷ ಸ್ಥಾಪಿಸಿ ಗೆದ್ದು ಆಂಧ್ರದ ಮುಖ್ಯಮಂತ್ರಿ ಆಗಿದ್ದರು. ಆದರೆ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಈ ಪ್ರಯತ್ನ ಮಾಡಿ ಸೋತಿದ್ದರು. ಕೊನೆಗೆ ಮೈತ್ರಿ ಮಾಡಿಕೊಂಡು 18 ಕ್ಷೇತ್ರಗಳನ್ನು ಗೆದ್ದು ಪವನ್ ಈಗ ಆಂಧ್ರದ ಡಿಸಿಎಂ ಆಗಿದ್ದಾರೆ.
ಕಾಂಗ್ರೆಸ್, ಬಿಜೆಪಿ ಬಿಟ್ಟು ಕರ್ನಾಟಕದಲ್ಲಿ ಜೆಡಿಎಸ್ ರೀತಿಯ ಪ್ರಾದೇಶಿಕ ಪಕ್ಷ ಇದೆ. ಹೆಚ್. ಡಿ ಕುಮಾರಸ್ವಾಮಿ ರೀತಿಯ ಒಳ್ಳೆ ನಾಯಕ ಕೂಡ ಇದ್ದಾರೆ. ಆದರೆ ಬೇರೆ ಬೇರೆ ಕಾರಣಗಳಿಂದ ಜೆಡಿಎಸ್ ಕರ್ನಾಟಕದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿಲ್ಲ. ಹಾಗಾಗಿ ಈಗ ಹೊಸ ಪಕ್ಷ ಸ್ಥಾಪಿಸಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕಷ್ಟದ ಮಾತು ಎನ್ನಲಾಗ್ತಿದೆ. ಇಷ್ಟೆಲ್ಲಾ ಚರ್ಚೆಗಳ ನಡುವೆ 'ಪೃಥ್ವಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹೇಳಿದ್ದ ಡೈಲಾಗ್ ವೈರಲ್ ಆಗುತ್ತಿದೆ.
15 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ಪೃಥ್ವಿ' ಚಿತ್ರದಲ್ಲಿ ಪುನೀತ್ ಹಾಗೂ ಸಾಧು ಕೋಕಿಲ ನಡುವಿನ ಸಂಭಾಷಣೆಯ ದೃಶ್ಯವೊಂದಿದೆ. "ನಮ್ಮ ಜನಕ್ಕೆ ಹಂದಿ ಜ್ವರಕ್ಕಿಂತ ಅಭಿಮಾನದ ಜ್ವರ ಜಾಸ್ತಿ.. ಹಂದಿ ಜ್ವರದಿಂದ 30 ಜನ ಹೋದ್ರೆ, ಆಂಧ್ರ ಸಿಎಂ ಜೊತೆ 300 ಜನ ಹೋಗ್ಬಿಟ್ರಂತೆ.. ಇದು ಪರಿಸ್ಥಿತಿ" ಎಂದು ತಿರುಪತಿ (ಸಾಧು ಕೋಕಿಲ) ಹೇಳುವ ಡೈಲಾಗ್ ಇದೆ. ಅದಕ್ಕೆ ಪ್ರತಿಯಾಗಿ ಪೃಥ್ವಿ(ಪುನೀತ್ ರಾಜ್‌ಕುಮಾರ್) "ಸಿನ್ಮಾ ಸ್ಟಾರ್‌ಗಳಿಗೆ ಸ್ಟ್ಯಾಚು ಮಾಡೋಕೆ ಇದು ತಮಿಳುನಾಡು ಅಲ್ಲ.. ಸಿಎಂಗೋಸ್ಕರ ಸೂಸೈಡ್ ಮಾಡ್ಕೊಳ್ಳೊಕೆ ಆಂಧ್ರ ಪ್ರದೇಶ ಅಲ್ಲ.. ಇದು ಕರ್ನಾಟಕ.. ನಮ್ಮ ಜನ ಯಾವತ್ತೂ ಒಳ್ಳೆಯದನ್ನು ಒಪ್ಪಿಕೊಳ್ತಾರೆ.. ಕೆಟ್ಟದ್ದನ್ನು ರಿಜೆಕ್ಟ್" ಮಾಡ್ತಾರೆ ಎಂದಿದ್ದರು. ಪುನೀತ್ ಹೇಳಿದ ಈ ಸಿನಿಮಾ ಡೈಲಾಗ್ ನಿಜ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.


Click it and Unblock the Notifications