ಘೋಸ್ಟ್ ಮೂಲಕ ಸ್ಯಾಂಡಲ್‌ವುಡ್‌ಗೆ ರಿಎಂಟ್ರಿ ಕೊಡ್ತಾರಾ ವಿಜಯ್ ಸೇತುಪತಿ? ಮೊದಲ ಕನ್ನಡ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ
ಕಳೆದ ವರ್ಷದ ಅಂತಿಮ ತಿಂಗಳಿನಲ್ಲಿ ತೆರೆಗೆ ಬಂದ ವೇದ ಚಿತ್ರದ ಮೂಲಕ ನಟ ಶಿವ ರಾಜ್‌ಕುಮಾರ್ ಅಗತ್ಯವಾಗಿದ್ದ ಯಶಸ್ಸನ್ನು ಪಡೆದು ಕಮ್‌ಬ್ಯಾಕ್ ಮಾಡಿದರು. ಈ ಚಿತ್ರ ಮುಖ್ಯ ಚಿತ್ರಮಂದಿರದಲ್ಲಿ ಮೂವತ್ತು ದಿನಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದು, ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಶಿವ ರಾಜ್‌ಕುಮಾರ್ ಸದ್ಯ ತಮ್ಮ ಮುಂದಿನ ಚಿತ್ರ ಘೋಸ್ಟ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಈ ಚಿತ್ರಕ್ಕೆ ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ಖ್ಯಾತಿಯ ಶ್ರೀನಿ ಆಕ್ಷನ್ ಕಟ್ ಹೇಳಿದ್ದು, ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿದಾಗ ದೊಡ್ಡ ಮಟ್ಟದ ಸದ್ದನ್ನೇನೂ ಮಾಡದ ಘೋಸ್ಟ್ ಚಿತ್ರ ನಿರೀಕ್ಷೆ ಹುಟ್ಟಿಸುವಲ್ಲಿ ವಿಫಲವಾಗಿರಲಿಲ್ಲ. ಆದರೆ ಚಿತ್ರತಂಡ ಯಾವಾಗ ಚಿತ್ರದ ಮೋಷನ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತೋ ಆಗಲೇ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತು.
ಅದರಲ್ಲೂ ಮೋಷನ್ ಪೋಸ್ಟರ್‌ಗೆ ಅರ್ಜುನ್ ಜನ್ಯಾ ನೀಡಿದ್ದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಿನಿ ರಸಿಕರನ್ನು ಹುಚ್ಚೆಬ್ಬಿಸಿತ್ತು. ಹೀಗೆ ಒಂದು ಮೋಷನ್ ಪೋಸ್ಟರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ ಘೋಸ್ಟ್ ಚಿತ್ರ ತನ್ನ ತಾರಾಗಣದಿಂದಲೂ ಸಹ ಕುತೂಹಲ ಕೆರಳಿಸಿತು. ಮೊದಲಿಗೆ ಮಲಯಾಳಂನ ಜಯರಾಮ್ ಅವರನ್ನು ಕರೆತಂಡ ಚಿತ್ರತಂಡ ನಂತರ ಬಾಲಿವುಡ್‌ನ ಅನುಪಮ್ ಖೇರ್ ಅವರನ್ನು ಕರೆತಂದು ಮತ್ತಷ್ಟು ಕುತೂಹಲ ಮೂಡಿಸಿತು. ಹೀಗೆ ಖ್ಯಾತಿ ಗಳಿಸಿರುವ ನಟರನ್ನು ಕರೆತಂದಿರುವ ಘೋಸ್ಟ್ ಚಿತ್ರತಂಡ ಈಗ ತಮಿಳಿನ ವಿಜಯ್ ಸೇತುಪತಿಯವರನ್ನೂ ಸಹ ತಾರಾಗಣಕ್ಕೆ ಸೇರಿಸಿಕೊಳ್ಳಲಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಮೋಷನ್ ಪೋಸ್ಟರ್ ನೋಡಿದ ಸೇತುಪತಿ
ವಿಜಯ್ ಸೇತುಪತಿ ಘೋಸ್ಟ್ ಚಿತ್ರದಲ್ಲಿ ನಟಿಸಲಿದ್ದಾರಾ ಎಂಬ ಕುತೂಹಲ ಉಂಟಾಗಲು ಚಿತ್ರದ ನಿರ್ಮಾಪಕರು ವಿಜಯ್ ಸೇತುಪತಿ ಅವರನ್ನು ಭೇಟಿಯಾಗಿ ಚಿತ್ರದ ಮೋಷನ್ ಪೋಸ್ಟರ್ ಅನ್ನು ತೋರಿಸಿರುವುದು ಹಾಗೂ ಈ ವಿಡಿಯೊವನ್ನು ಚಿತ್ರದ ನಿರ್ದೇಶಕ ಶ್ರೀನಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು 'ಆಮೇಲೆ ಏನಾಯಿತೆಂದರೆ...' ಎಂದು ಬರೆದುಕೊಂಡಿರುವುದು ಕಾರಣವಾಗಿವೆ. ಹೌದು ನಿರ್ದೇಶಕ ಶ್ರೀನಿ ಮಾಡಿರುವ ಟ್ವೀಟ್ ನೋಡಿದ ಪ್ರತಿಯೊಬ್ಬರೂ ಸಹ ವಿಜಯ್ ಸೇತುಪತಿ ಕನ್ನಡಕ್ಕೆ ಬರಲಿದ್ದಾರೆ ಎಂಬ ಊಹೆ ಮಾಡಿದ್ದಾರೆ. ಇನ್ನು ಈ ಭೇಟಿ ಚಿತ್ರದಲ್ಲಿ ನಟಿಸಲು ನಡೆಸಿದ್ದ ಅಥವಾ ಪ್ರಚಾರದ ಕುರಿತಾಗಿಯಾ ಎಂಬ ಮಾಹಿತಿಯನ್ನು ಚಿತ್ರತಂಡ ನೀಡುವವರೆಗೂ ಕುತೂಹಲ ಹಾಗೆಯೇ ಉಳಿದುಕೊಳ್ಳಲಿದೆ.

ಈ ಹಿಂದೆಯೇ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ರು ಮಕ್ಕಳ್ ಸೆಲ್ವನ್
ಸದ್ಯ ಸ್ಟಾರ್ ನಟನಾಗಿ, ಬಹು ಬೇಡಿಕೆಯ ವಿಲನ್ ಆಗಿ ಅಬ್ಬರಿಸುತ್ತಿರುವ ವಿಜಯ್ ಸೇತುಪತಿ ಈ ಹಿಂದೆಯೇ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದರು. ಹೌದು, ಕನ್ನಡದ ಅಖಾಡ ಎಂಬ ಚಿತ್ರದಲ್ಲಿ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ರು, ಈ ಚಿತ್ರ ಇಂದಿಗೂ ಬಿಡುಗಡೆಯಾಗಿಲ್ಲ. ಆದರೆ ವಿಜಯ್ ಸೇತುಪತಿ ಸ್ಟಾರ್ ಆಗುವ ಮೊದಲೇ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಇನ್ನು ತಮಿಳಿನ ಜಿಗರ್‌ಥಂಡ ಚಿತ್ರವನ್ನು ಕನ್ನಡದಲ್ಲಿಯೂ ಸಹ ಅದೇ ಶೀರ್ಷಿಕೆಯಲ್ಲಿ ನಿರ್ದೇಶಿಸಿದ್ದ ನಿರ್ದೇಶಕ ಶಿವ ಗಣೇಶ್ ಈ ಚಿತ್ರಕ್ಕೆ ಆಕ್ಚನ್ ಕಟ್ ಹೇಳಿದ್ದರು. ವಿಜಯ್ ಸೇತುಪತಿ ನಟನೆಯ ಮೊದಲ ಚಿತ್ರ ಎಂದೇ ಈ ಚಿತ್ರಕ್ಕೆ ಪ್ರಚಾರ ಮಾಡಲಾಯಿತಾದರೂ ಚಿತ್ರ ಮಾತ್ರ ಬಿಡುಗಡೆಯಾಗಿಲ್ಲ.

ಚಿತ್ರದಲ್ಲಿರಲಿದ್ದಾರೆ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್
ಇನ್ನು ಕೆಜಿಎಫ್ ಚಿತ್ರ ಸರಣಿಯಲ್ಲಿ ರಾಕಿ ಭಾಯ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದ ನಟಿ ಅರ್ಚನಾ ಜೋಯಿಸ್ ಘೋಸ್ಟ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಪತ್ರಕರ್ತೆಯಾಗಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದು, ಹೆಚ್ಚು ಸಮಯದವರೆಗೆ ಈ ಪಾತ್ರವಿರಲಿದೆ ಎಂಬ ಮಾಹಿತಿ ಇದೆ.


Click it and Unblock the Notifications











