»   » ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ವಿಜಯಭಾಸ್ಕರ್‌ ವಿಧಿವಶ

ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ವಿಜಯಭಾಸ್ಕರ್‌ ವಿಧಿವಶ

Posted By: Staff
Subscribe to Filmibeat Kannada

ಬೆಂಗಳೂರು : ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಇನ್ನಿತರ ಭಾಷೆಯ 600ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ವಿಜಯಭಾಸ್ಕರ್‌ ಭಾನುವಾರ ಬೆಳಗ್ಗೆ 9.30ರಲ್ಲಿ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

'ಬೆಳ್ಳಿಮೋಡ", 'ನಾಗರಹಾವು", 'ಉಯ್ಯಲೆ", 'ಸಂತತುಕಾರಾಮ", 'ನಾಂದಿ", 'ಮಲಯಮಾರುತ", 'ಗೆಜ್ಜೆಪೂಜೆ", 'ಶರಪಂಜರ", 'ಮಾನಸಸರೋವರ", 'ಪಡುವಾರಹಳ್ಳಿ ಪಾಂಡವರು", 'ನಂದಗೋಕುಲ", 'ಮುಕ್ತಿ", 'ಎಲ್ಲಿಂದಲೋ ಬಂದವರು" ಮೊದಲಾದ 350ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದ್ದ ವಿಜಯಭಾಸ್ಕರ್‌ ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ

1935ರಲ್ಲಿ 'ಶ್ರೀರಾಮ ಪೂಜಾ" ಚಿತ್ರಕ್ಕೆ ಸಂಗೀತ ನೀಡಲು ಬಾಂಬೆಯಿಂದ ಬೆಂಗಳೂರಿಗೆ ಬಂದ ವಿಜಯಭಾಸ್ಕರ್‌ ಅವರ ಅತ್ಯುತ್ತಮ ಸಾಧನೆಯನ್ನು ಗಮನಿಸಿ ರಾಜ್ಯ ಸರಕಾರ ಡಾ. ರಾಜ್‌ಕುಮಾರ್‌ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. 'ಮಲಯಮಾರುತ" ಮತ್ತು 'ಮುರಳಿಗಾನ ಅಮೃತಪಾನ" ಸಂಗೀತ ಪ್ರಧಾನ ಚಿತ್ರಗಳಿಗೆ ಸಂಗೀತ ನೀಡಿ, ಕೇಂದ್ರ ಸರಕಾರದ 'ಸುರ್‌ ಸಿಂಗಾರ್‌" ಪುರಸ್ಕಾರ ಗಳಿಸಿದ್ದರು.

ವಿಜಯ ಭಾಸ್ಕರ್‌ ಸಂಗೀತ ನೀಡಿದ 'ಸಂತತುಕಾರಾಮ" ಚಿತ್ರದ 'ಜಯತು ಜಯ ವಿಠಲ", 'ನಾಂದಿ" ಚಿತ್ರದ 'ಹಾಡೊಂದ ಹಾಡುವೆ ನೀ ಕೇಳು ಮಗುವೆ..", 'ಬೆಳ್ಳಿ ಮೋಡದ" 'ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ" ಮೊದಲಾದ ಗೀತೆಗಳು ದಶಕಗಳ ನಂತರವೂ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ.

'ಕೆಂಪಾದವೋ ಎಲ್ಲ ಕೆಂಪಾದವೊ", 'ಉತ್ತರ ಧ್ರುವದಿಂ.. ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ", 'ಇವಳು ಯಾರು ಬಲ್ಲೆಯೇನು", 'ಕಾಳಿದಾಸನ ಕಾವ್ಯ ಲಹರಿಗೆ", 'ಹೆಜ್ಜೆ ಹೆಜ್ಜೆಗೂ ಹೊನ್ನೇ.. ಸುರಿಯಲಿ.. ಗೆಜ್ಜೆ ಪೂಜೆಯ.." 'ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ, ನೋಟವೇ ಹೂ ಬಾಣ", 'ಏನೊ ಕುರುಡು ಭಾವನೆ", 'ಪಂಚಮ ವೇದ ಪೇಮದ ನಾದ" ಮೊದಲಾದ ಗೀತೆಗಳು ವಿಜಯಭಾಸ್ಕರ್‌ರ ನೆನಪನ್ನು ಸದಾ ಹಸುರಾಗಿಸಿವೆ.

ವಿಜಯಭಾಸ್ಕರ್‌ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಕಲಾವಿದರು, ಜೆ.ಪಿ. ನಗರದ ಅವರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು,

ಸಂತಾಪ : ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ವಾರ್ತಾ ಸಚಿವ ಎಂ. ಶಿವಣ್ಣ ಮೊದಲಾದವರು ವಿಜಯಭಾಸ್ಕರ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸಂಗೀತ ಸಾರ್ವಭೌಮರೆನಿಸಿದ್ದ ಭಾಸ್ಕರ್‌ ನಿಧನದಿಂದ ಚಿತ್ರರಂಗ ಅಸಾಧಾರಣ ವ್ಯಕ್ತಿತ್ವದ ಪ್ರತಿಭಾವಂತನನ್ನು ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕಲಾತ್ಮಕ ಚಿತ್ರಗಳು ಹಾಗೂ ಕಮರ್ಷಿಯಲ್‌ ಚಿತ್ರಗಳೆರಲ್ಲೂ ಕೆಲಸ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡ ವಿಜಯಭಾಸ್ಕರ್‌ ಅವರು ಸಂಗೀತ ನೀಡಿದ ಕೊನೆಯ ಚಿತ್ರ'ಶ್ರಾವಣ ಸಂಭ್ರಮ" ಇನ್ನೂ ಬಿಡುಗಡೆ ಆಗಬೇಕಿದೆ.(ಇನ್‌ಫೋ ವಾರ್ತೆ)

English summary
Senior music director VijayaBhaskar no more
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada