'ಜಲಗಾರ' ಹೆಸರಿನಲ್ಲಿ ಟಾರ್ಗೆಟ್ ಮಾಡಿ ಟ್ರೋಲ್; ಸೈಬರ್ ಕ್ರೈಂ ಮೊರೆಹೋದ ವಿಜಯಲಕ್ಷ್ಮಿ ದರ್ಶನ್
ನಟ-ನಟಿಯರಿಗೆ ಸೋಶಿಯಲ್ ಮೀಡಿಯಾ ಟ್ರೋಲ್ ಕಾಟ ಹೆಚ್ಚಾಗುತ್ತಲೇ ಇದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೂ ಕಿಡಿಗೇಡಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕೆಟ್ಟದಾಗಿ ಪೋಸ್ಟ್, ಕಾಮೆಂಟ್ ಮಾಡುವವರ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮತ್ತೆ ಆಕೆಯನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡಲಾಗ್ತಿದ್ದು ಈ ವಿಚಾರವನ್ನು ಅವರು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಅಸಭ್ಯ ಪದಗಳಿಂದ ನಿಂದಿಸಿ ಮಾನಹಾನಿ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೈಬರ್ ಕ್ರೈಂ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. 'ಜಲಗಾರ ಯೂನಿವರ್ಸಿಟಿ' ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದು ಕಿಡಿಗೇಡಿ ಹೀಗೆ ಅಶ್ಲೀಲವಾಗಿ ಪೋಸ್ಟ್ ಮಾಡುತ್ತಿರುವುದು ಗೊತ್ತಾಗಿದೆ. ವಿಜಯಲಕ್ಷ್ಮಿ ದರ್ಶನ್ ಸಿನಿಮಾ ನೋಡಲು ಚಿತ್ರೀಕರಣಕ್ಕೆ ಹೋಗಿರುವ ವೀಡಿಯೋ ಪೋಸ್ಟ್ ಮಾಡಿ ಕೆಟ್ಟದಾಗಿ ಕಾಮೆಂಟ್ ಮಾಡಲಾಗಿದೆ.

ಸ್ಕ್ರೀನ್ ಶಾಟ್ ಸಮೇತ ಈ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸದ್ಯ 'ಜಲಗಾರ ಯೂನಿವರ್ಸಿಟಿ' ಟ್ವಿಟ್ಟರ್ ಅಕೌಂಟ್ ಡಿಲೀಟ್ ಆಗಿದೆ. ಯಾವುದೇ ಪೋಸ್ಟ್ ಕಾಣುತ್ತಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಆ ಟ್ವಿಟರ್ ಅಕೌಂಟ್ ಐಪಿ ಅಡ್ರೆಸ್ ಟ್ರ್ಯಾಕ್ ಮಾಡಲು ಮುಂದಾಗಿದ್ದಾರೆ. ಕೂಡಲೇ ಆ ಕಿಡಿಗೇಡಿಯನ್ನು ವಶಕ್ಕೆ ಪಡೆದು ಕಠಿಣಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಇಂತಹ ಕಿಡಿಗೇಡಿಗಳಿಗೆ ತಕ್ಕಶಾಸ್ತಿ ಮಾಡಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.
ಅಶ್ಲೀಲ ಪದಗಳನ್ನು ಬಳಸಿ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಬಾಯಿಗೆ ಬಂದಂತೆ ಪೋಸ್ಟ್ ಮಾಡಿ ವಿಕೃತ ಆನಂದ ಅನುಭವಿಸುತ್ತಿದ್ದಾನೆ. ವಿಜಯಲಕ್ಷ್ಮಿ ವೈಯಕ್ತಿಕ ಬದುಕು ಹಾಗೂ ಚಾರಿತ್ರ್ಯದ ಮೇಲೂ ಬಹಳ ಕೀಳುಮಟ್ಟದಲ್ಲಿ ಕಾಮೆಂಟ್ ಮಾಡಲಾಗಿದೆ. ಮಿತಿ ಮೀರಿದ ಟ್ರೋಲ್ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹಿಂದೆ ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾರೆ ಎಂದು ನಟಿ ರಮ್ಯಾ ದೂರು ನೀಡಿದ್ದರು. ಈ ದೂರ ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಬುದ್ದಿ ಕಲಿಸಿದ್ದರು.
ರಮ್ಯಾ ಬಳಿಕ ವಿಜಯಲಕ್ಷ್ಮಿ ದರ್ಶನ್ ಕೂಡ ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್, ಪೋಸ್ಟ್ ಮಾಡಿದ್ದ 15 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ದೂರು ನೀಡಿದ್ದರು. 150 ಪೋಸ್ಟ್‌ಗಳನ್ನು ದೂರಿನಲ್ಲಿ ನಮೂದಿಸಿದ್ದರು. ಈ ದೂರಿನ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಬಂಧಿನ ಆರೋಪಿಗಳ ಪೈಕಿ ಕೆಲವರು ಕನ್ನಡದ ಮತ್ತೊಬ್ಬ ನಟನ ಅಭಿಮಾನಿ ಎಂದು ಹೇಳಿಕೊಂಡು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದು ಗೊತ್ತಾಗಿತ್ತು. ವಿಜಯಲಕ್ಷ್ಮಿ ಅವರನ್ನು ನಿಂದಿಸಬೇಕು ಎನ್ನುವ ಕಾರಣಕ್ಕೆ ಅವರೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದರು ಎಂದು ಗೊತ್ತಾಗಿತ್ತು.
ಮೊದಲಿಗೆ ವಿಜಯಲಕ್ಷ್ಮಿ ದರ್ಶನ್ ದೂರು ನೀಡಿ ಒಂದು ವಾರ ಕಳೆದರೂ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿ ಪೊಲೀಸ್ ಕಮೀಷನರ್ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ವಿಜಯಲಕ್ಷ್ಮಿ ಮಾತುಕತೆ ನಡೆಸಿದ್ದರು. ಪೊಲೀಸ್ ಕಮೀಷನರ್ ಸೂಚನೆ ಮೇರೆಗೆ ತನಿಖೆ ಚುರುಕುಗೊಳಿಸಿ ಚಿಕ್ಕಬಾಣಾವರದ ನಿವಾಸಿ, ಒಬ್ಬ ಆಟೋ ಚಾಲಕ ಹಾಗೂ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.


Click it and Unblock the Notifications