ಕಾನೂನು ಹೋರಾಟದ ಎಚ್ಚರಿಕೆ: ಪವಿತ್ರಾ ಗೌಡ ನಿಜ ಬಣ್ಣ ಬಯಲು ಮಾಡಿದ ವಿಜಯಲಕ್ಷ್ಮಿ ದರ್ಶನ್
ಮತ್ತೊಮ್ಮೆ ನಟಿ ಪವಿತ್ರಾ ಗೌಡ ವಿರುದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೆಂಡಾಮಂಡಲವಾಗಿದ್ದಾರೆ. ಕಾನೂನು ಹೋರಾಟದ ಎಚ್ಚರಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದಾರೆ. ಪವಿತ್ರಾ ಗೌಡ ಯಾರು? ಆಕೆಯ ವೈಯಕ್ತಿಕ ಹಿನ್ನೆಲೆ ಏನು ಎನ್ನುವುದನ್ನು ಬಯಲು ಮಾಡುವ ಪ್ರಯತ್ನ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.
ಕಳೆದ ರಾತ್ರಿ ವಿಜಯಲಕ್ಷ್ಮೀ ದರ್ಶನ್ ತಮ್ಮ ಫ್ಯಾಮಿಲಿ ಫೋಟೊ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. "ಕುಟುಂಬವೇ ನನಗೆಲ್ಲಾ" ಎನ್ನು ಬರೆದುಕೊಂಡಿದ್ದರು. ಕೂಡಲೇ ಪವಿತ್ರಾ ಗೌಡ, ನಟ ದರ್ಶನ್ ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಪೋಸ್ಟ್ ಮಾಡಿ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದರು. ನಟ ದರ್ಶನ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು ತಮ್ಮಿಬ್ಬರ ರಿಲೇಷನ್‌ಶಿಪ್‌ಗೆ 10 ವರ್ಷಗಳ ಸಂಭ್ರಮ ಎಂದು ಕ್ಯಾಪ್ಷನ್ ಕೊಟ್ಟಿದ್ದರು.

ಪವಿತ್ರಾ ಗೌಡ ಪೋಸ್ಟ್‌ಗೆ ನೋಡಿ ಕೂಡಲೇ ವಿಜಯಲಕ್ಷ್ಮಿ ಮತ್ತೊಂದು ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ನೇರಾನೇರವಾಗಿಯೇ ಕಾನೂನೂ ಹೋರಾಟದ ಎಚ್ಚರಿಕೆ ನೀಡಿದ್ದಾರೆ. "ಈ ಮಹಿಳೆಗೆ ಪ್ರಜ್ಞೆ ಇದ್ದಿದ್ದರೆ ಮತ್ತೊಬ್ಬರ ಗಂಡನ ಫೋಟೊಗಳನ್ನು ಈ ರೀತಿ ಪೋಸ್ಟ್ ಮಾಡುತ್ತಿರಲಿಲ್ಲ. ಈ ಕಾರ್ಯ ಆಕೆಯ ನೈತಿಕತೆ ಹಾಗೂ ಆದರ್ಶ ಎಂಥಹದ್ದು ಅಂತ ತೋರಿಸುತ್ತದೆ. ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಕೂಡ ಈಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಹಾಗೂ ಲಾಭಕ್ಕಾಗಿ ಆತನಿಗೆ ಹತ್ತಿರವಾಗುತ್ತಾಳೆ. ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಎಂಬುದನ್ನು ಈ ಚಿತ್ರಗಳು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ."
"ಸಾಮಾನ್ಯವಾಗಿ ನಾನು ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ನನ್ನ ಫ್ಯಾಮಿಲಿ ಹಿತದೃಷ್ಟಿಯಿಂದ ಈಗ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನನಗೆ ಅನಿಸುತ್ತಿದೆ. ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ನೇರವಾಗಿ ಪವಿತ್ರಾ ಗೌಡಗೆ ಎಚ್ಚರಿಕೆ ನೀಡಿದ್ದಾರೆ. ಪವಿತ್ರಾ ಗೌಡ ಹಾಗೂ ಆಕೆಯ ಪತಿ ಸಂಜಯ್ ಸಿಂಗ್ ಜೊತೆಗಿರುವ ಫೋಟೊಗಳನ್ನು ವಿಜಯಲಕ್ಷ್ಮಿ ದರ್ಶನ್ ಹಂಚಿಕೊಂಡಿದ್ದಾರೆ.
ಈ ಹಿಂದೆ ಕೂಡ ನಟ ದರ್ಶನ್ ಜೊತೆಗಿನ ಫೋಟೊಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದರು. ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ದರ್ಶನ್ ಸಹೋದರಿ ಜೊತೆಗಿನ ಫೋಟೊಗಳು ಸಹ ವೈರಲ್ ಆಗಿತ್ತು. ಇನ್ನು 'ಕುರುಕ್ಷೇತ್ರ' ಸಿನಿಮಾ ಸೆಟ್‌ಗೂ ಪವಿತ್ರಾ ಗೌಡ ಭೇಟಿ ನೀಡಿದ್ದರು. ಆ ಫೋಟೊಗಳು ವೈರಲ್ ಆಗಿತ್ತು. ಪವಿತ್ರಾ ಗೌಡ ಹೀಗೆ ದರ್ಶನ್ ಜೊತೆಗಿನ ಫೋಟೊಗಳನ್ನು ಪೋಸ್ಟ್ ಮಾಡಿದ ಸಂದರ್ಭಗಳಲ್ಲಿ ಅದನ್ನು ಡಿಲೀಟ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡುತ್ತಲೇ ಇದ್ದರು.

ಕಳೆದ ವರ್ಷ ನಟಿ ಮೇಘಶೆಟ್ಟಿ ಹಾಗೂ ಪವಿತ್ರಾ ಗೌಡ ಸೇರಿ ನಟ ದರ್ಶನ್ ಹುಟ್ಟುಹಬ್ಬ ಆಚರಿಸಿದ್ದರು. ಆ ವಿಡಿಯೋವನ್ನು ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಇದಕ್ಕೆ ವಿಜಯಲಕ್ಷ್ಮಿ ಆಕ್ಷೇಪ ವ್ಯಕ್ತಪಡಿಸಿ ಗರಂ ಆಗಿದ್ದರು. ಕೂಡಲೇ ಮೇಘಾ ಪೋಸ್ಟ್ ಡಿಲೀಟ್ ಮಾಡಿದ್ದರು. ಬಳಿಕ ವಿಜಯಲಕ್ಷ್ಮಿ ಸಹ ತಮ್ಮ ಪೋಸ್ಟ್ ತೆಗೆದಿದ್ದರು.

ದರ್ಶನ್ ಹಾಗೂ ಪವಿತ್ರಾ ಗೌಡ ರಿಲೇಷನ್‌ಶಿಪ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇತ್ತು. ಇದೀಗ ಆ ಬಗ್ಗೆ ಸ್ವತಃ ಪವಿತ್ರಾ ಗೌಡ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ನೇರವಾಗಿಯೇ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











