"ಸಂಗಾತಿ ನೀನಾದೆ"... ಅಭಿಮಾನಿಗಳ ಮನಗೆದ್ದ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್
ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಇತ್ತೀಚೆಗೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದರು. ನೆಲಮಂಗಲ ಬಳಿಕ ರೆಸಾರ್ಟ್‌ವೊಂದರಲ್ಲಿ ಸ್ನೇಹಿತರ ಜೊತೆ ಭರ್ಜರಿ ಪಾರ್ಟಿ ಮಾಡಿದ್ದರು. ಕೇಕ್ ಕತ್ತರಿಸಿ, ಹಾಡು ಹಾಡಿ, ಒಟ್ಟಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದರು.
ಪತಿಯ ಜೊತೆ ಪಾರ್ಟಿಯಲ್ಲಿ ಕೇಕ್ ಕಟ್ಟಿ ಮಾಡಿದ ಫೋಟೊವನ್ನು ವಿಜಯಲಕ್ಷ್ಮಿ ದರ್ಶನ್ ಇದೀಗ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ. ಅದು ಅಭಿಮಾನಿಗಳ ಗಮನ ಸೆಳೆದಿದೆ. ಮೇ 19ಕ್ಕೆ ಇಬ್ಬರೂ ಮದುವೆಯಾಗಿ 22 ವರ್ಷ ಕಳೆದಿತ್ತು. ಧರ್ಮಸ್ಥಳದಲ್ಲಿ ಇಬ್ಬರ ಮದುವೆ ನಡೆದಿತ್ತು. ದಂಪತಿಗೆ ಒಬ್ಬ ಪುತ್ರನಿದ್ದಾನೆ.

ನಟ ದರ್ಶನ್ ಚಿತ್ರರಂಗದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲಿ ಕೂಡ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಈ ಹಿಂದೆ ಕೂಡ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೈಲು ಸೇರುವಂತಾಗಿತ್ತು. ವರ್ಷದ ಹಿಂದೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ 7 ತಿಂಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದರು. ಈ ವೇಳೆ ಪತ್ನಿ ವಿಜಯಲಕ್ಷ್ಮಿ ಬೆಂಬಲಕ್ಕೆ ನಿಂತಿದ್ದರು.
ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಬೆನ್ನುನೋವಿನ ಸಮಸ್ಯೆಗೆ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯುತ್ತಾ ಸಾಕಷ್ಟು ಸಮಯ ಕಳೆದಿದ್ದರು. ಇತ್ತೀಚೆಗೆ ನಿಧಾನವಾಗಿ ಎಂದಿನ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ. ದರ್ಶನ್ ಜೈಲಿನಿಂದ ಹೊರ ಬಂದ ದಿನದಿಂದಲೂ ಪತ್ನಿ ವಿಜಯಲಕ್ಷ್ಮಿ ನೆರಳಾಗಿ ನಿಂತಿದ್ದಾರೆ.
ಕಳೆದ ವರ್ಷ ದುಬೈನಲ್ಲಿ ಅಭಿಮಾನಿಗಳ ಜೊತೆ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಮದುವೆ ವಾರ್ಷಿಕೋತ್ಸವ ಆಚರಿಸಿದ್ದರು. ಈ ಬಾರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾರೆ. ನಟ ಚಿಕ್ಕಣ್ಣ ಮಾತ್ರ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇನ್ನುಳಿದಂತೆ ವಿಜಯಲಕ್ಷ್ಮಿ ಸ್ನೇಹಿತೆಯರು ಹಾಗೂ ಆಪ್ತರು ಮಾತ್ರ ಇದ್ದರು ಎನ್ನಲಾಗ್ತಿದೆ. ಪಾರ್ಟಿಯಲ್ಲಿ ಕ್ಲಿಕ್ಕಿಸಿದ ಫೋಟೊವನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದು 'ಸಕುಟುಂಬ ಸಮೇತ' ಚಿತ್ರದ 'ಸಂಗಾತಿ ನೀನಾದೆ' ಹಾಡನ್ನು ಹಿನ್ನೆಲೆಯಾಗಿ ಹಾಕಿ ಪೋಸ್ಟ್ ಮಾಡಿದ್ದಾರೆ.ಇ
ನ್ನು ದರ್ಶನ್ ಹಾಗೂ ಪವಿತ್ರಾ ಗೌಡ ರಿಲೇಷನ್‌ಶಿಪ್ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ವರ್ಷದ ಹಿಂದೆ ಸ್ವತಃ ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ನಮ್ಮಿಬ್ಬರ ರಿಲೇಷನ್‌ಶಿಪ್‌ಗೆ 10 ವರ್ಷ ಎಂದು ಬರೆದುಕೊಂಡಿದ್ದರು. ದರ್ಶನ್ ಜೊತೆಗಿನ ಒಂದಷ್ಟು ಫೋಟೊಗಳನ್ನು ಕೂಡ ಹಂಚಿಕೊಂಡಿದ್ದರು. ಈ ಬಗ್ಗೆ ವಿಜಯಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು. ಇದು ಇಬ್ಬರ ನಡುವೆ ಶೀತಲ ಸಮರಕ್ಕೆ ಕಾರಣವಾಗಿತ್ತು.
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ. ಆತನನ್ನು ಕರೆದುಕೊಂಡು ಬಂದು ಹೊಡೆದು ಬುದ್ಧಿ ಹೇಳುವ ಸಮಯದಲ್ಲಿ ಆತನ ಜೀವವೇ ಹೋಗಿತ್ತು ಎಂದು ವರದಿಯಾಗಿದೆ. ಇದೇ ಪ್ರಕರಣ ಸಂಬಂಧ ಎ1 ಆಗಿ ಪವಿತ್ರಾ ಗೌಡ ಹಾಗೂ ಎ2 ಆಗಿ ದರ್ಶನ್ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಇರುವಂತಾಗಿತ್ತು.
ಜಾಮೀನು ಪಡೆದು ದರ್ಶನ್ ಹಾಗೂ ಪವಿತ್ರಾ ಗೌಡ ಜೈಲಿನಿಂದ ಹೊರಬಂದ ಬಳಿಕ ಇಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ ಎನ್ನಲಾಗಿತ್ತು. ನಿನ್ನೆ(ಮೇ 20) ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಎಲ್ಲಾ 17 ಜನ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ದರು. ಇನ್ನು ವಿಚಾರಣೆ ಮುಗಿಸಿ ಹೊರ ಬರುವಾಗ ಲಿಫ್ಟ್‌ನಲ್ಲಿ ದರ್ಶನ್ ಬಳಿಕ ಪವಿತ್ರಾ ಗೌಡ ಫೋನ್ ನಂಬರ್ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕೋರ್ಟ್‌ನಿಂದ ಹೊರಗೆ ಬರುವಾಗ ಇಬ್ಬರೂ ಕೈ ಕೈ ಹಿಡಿದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.


Click it and Unblock the Notifications











