ಪತಿ ದರ್ಶನ್ ಜೊತೆಗಿನ ಅಪರೂಪದ ಫೋಟೊ ಹಂಚಿಕೊಂಡ ವಿಜಯಲಕ್ಷ್ಮಿ
ನಟ ದರ್ಶನ್ 3ನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿ 3 ತಿಂಗಳು ಕಳೆದಿದೆ. ರೇಣುಕಾಸ್ವಾಮಿ ಪ್ರಕರಣದಲ್ಲೇ ಜಾಮೀನು ರದ್ದಾಗಿ ಎರಡನೇ ಬಾರಿ ಕೇಂದ್ರ ಕಾರಾಗೃಹ ಸೇರುವಂತಾಗಿದೆ. ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ ಎನ್ನಲಾಗ್ತಿದ್ದು ಪತ್ನಿ ವಿಜಯಲಕ್ಷ್ಮಿ ದರ್ಶನ್ ಏನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ಮುಂದೇನು ಆಗುತ್ತದೆ ನೋಡೋಣ ಎಂದು ವಿಜಯಲಕ್ಷ್ಮಿ ದೇವರ ಮೇಲೆ ಭಾರ ಹಾಕಿದ್ದಾರೆ. ದರ್ಶನ್ ಕೂಡ ಆಗಿದ್ದೂ ಆಗಲಿ ನೋಡೋಣ ಎಂದು ಆಪ್ತರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗ್ತಿದೆ. ಸದ್ಯ ಪತಿಯ ನೆನಪಿನಲ್ಲಿ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಪರೂಪದ ಫೋಟೊ ಹಂಚಿಕೊಂಡಿದ್ದಾರೆ.

ಪತಿ ದರ್ಶನ್ ಜೊತೆ ಸೈಕಲ್ ಏರಿ ಸವಾರಿ ಮಾಡುವ ಕ್ಲಿಕ್ಕಿಸಿದ ಫೋಟೊವನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ. 'ಡಿಯರ್ ಕಾಮ್ರೇಡ್' ಚಿತ್ರದ 'ಕಡಲಂತೆ ಕಾದ ಕಣ್ಣು' ಹಾಡನ್ನು ಫೋಟೊಗೆ ಹಿನ್ನೆಲೆಯಾಗಿ ಬಳಸಿದ್ದಾರೆ. ನೋಡ ನೋಡುತ್ತಲೇ ಈ ಫೋಟೊ ವೈರಲ್ ಆಗ್ತಿದೆ. ಜಸ್ಟಿನ್ ಪ್ರಭಾಕರನ್ ಸಂಗೀತದ ಈ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ. ಸಿದ್ ಶ್ರೀರಾಮ್, ಐಶ್ವರ್ಯಾ ರವಿಚಂದ್ರನ್ ಹಾಡಿಗೆ ದನಿಯಾಗಿದ್ದಾರೆ.
ದರ್ಶನ ಅನುಪಸ್ಥಿತಿಯಲ್ಲೇ 'ಡೆವಿಲ್' ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ. 3ನೇ ಹಾಡು ಅನಾವರಣ ಮಾಡಲು ಚಿತ್ರತಂಡ ಮುಂದಾಗಿದೆ. ದರ್ಶನ್ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ವಿಜಯಲಕ್ಷ್ಮಿ ಹ್ಯಾಂಡಲ್ ಮಾಡುತ್ತಿದ್ದಾರೆ. 'ಡೆವಿಲ್' ಚಿತ್ರದ ಅಪ್‌ಡೇಟ್ ನೀಡುತ್ತಿದ್ದಾರೆ. ಮೊನ್ನೆಯಷ್ಟೆ ವಿಜಯಲಕ್ಷ್ಮಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಪ್ತರು, ಅಭಿಮಾನಿಗಳು ಶುಭಾಶಯ ಕೋರಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ವಿಜಯಲಕ್ಷ್ಮಿ ದರ್ಶನ್ ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ಬರೆದುಕೊಳ್ಳುತ್ತಾರೆ. ಆಪ್ತರ ಹುಟ್ಟುಹಬ್ಬ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪೋಸ್ಟ್ ಮಾಡುತ್ತಾರೆ. ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದ ಮಗ ವಿನೀಶ್, ನಟ ಧನ್ವೀರ್, ನಟಿ ರಕ್ಷಿತಾ ಹೀಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು.
ಕಳೆದ ವರ್ಷ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದಾಗ ಪತ್ನಿ ವಿಜಯಲಕ್ಷ್ಮಿ
ಜೊತೆಗೆ ನಿಂತರು. ಕಾನೂನು ಹೋರಾಟದ ಜೊತೆ ಜೊತೆಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ಹರೆಕೆ ಹೊತ್ತಿದ್ದರು. ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಪಡೆದುಬಂದ ಬಳಿಕ ಕೂಡ ಜೊತೆಯಾಗಿಯೇ ಇದ್ದರು. ಬೆನ್ನು ನೋವಿನ ಸಮಸ್ಯೆಗೆ ದರ್ಶನ್ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದರು. ಬಳಿಕ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆದಿದ್ದರು. ಕುಟುಂಬಸ್ಥರ ಜೊತೆ ಅಲ್ಲೇ ಸಂಕ್ರಾಂತಿ ಆಚರಿಸಿದ್ದರು.
ಬಳಿಕ ಚೇತರಿಸಿಕೊಂಡು 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ದರ್ಶನ್ ಭಾಗಿ ಆಗಿದ್ದರು. ಆಗ ಕೂಡ ಪತ್ನಿ ವಿಜಯಲಕ್ಷ್ಮಿ ಜೊತೆಗಿದ್ದರು. ಉದಯ್‌ಪುರ್, ಬ್ಯಾಂಕಾಕ್‌ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಪತಿ ಜೊತೆ ವಿಜಯಲಕ್ಷ್ಮಿ ಕೂಡ ಅಲ್ಲಿಗೆ ಹೋಗಿದ್ದರು. 'ಡೆವಿಲ್' ಚಿತ್ರದ ಮೇಕಿಂಗ್ ವಿಡಿಯೋಗಳಲ್ಲಿ ಕೂಡ ಅವರನ್ನು ನೋಡಬಹುದು.
ಇನ್ನು ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಆರಂಭವಾಗಬೇಕಿದೆ. ಇತ್ತೀಚೆಗೆ ಪ್ರಕರಣದ ಸಂಬಂಧ ಆರೋಪಿಗಳ ಮೇಲೆ ದೋಷಾರೋಪ ನಿಗದಿ ಪಡಿಸಲಾಗಿತ್ತು. ಎಲ್ಲರೂ ಆರೋಪಗಳನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಸಾಕ್ಷ್ಯಗಳನ್ನು ಕರೆಸಿ ವಿಚಾರಣೆ ಆರಂಭಿಸಬೇಕಿದೆ. 5 ಸಾವಿರ ಪುಟಗಳ ದೋಷಾರೋಪ ಪಟ್ಟಿ ಓದಿ ವಾದ ಮಂಡನೆಗೆ ಆರೋಪಿಗಳ ಪರ ವಕೀಲರು ಕಾಲಾವಕಾಶ ಕೇಳಿದ್ದಾರೆ. ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದೆ.


Click it and Unblock the Notifications











