ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ಗೈರಾದ ವಿಜಯಲಕ್ಷ್ಮಿ ದರ್ಶನ್ ಹೋಗಿದ್ದು ಎಲ್ಲಿಗೆ ?
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮನೆ ಮಗನಂತೆ ಇದ್ದವರು ದರ್ಶನ್. ಆದರೆ ಈಗ ಅಮ್ಮ ಮತ್ತು ಮಗನ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಹಿರಿಯ ಮಗನ ಅನುಪಸ್ಥಿತಿಯಲ್ಲಿಯೇ ಸುಮಲತಾ ಅಂಬರೀಶ್ ಮನೆಯಲ್ಲಿ ಕಾರ್ಯಕ್ರಮ ನಡೆದಿದೆ. ಮರಿ ಅಂಬರೀಶ್ ಅಭಿಷೇಕ್ ಅವರ ಮುದ್ದಾದ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ.
ಇನ್ನು ದರ್ಶನ್ ಈ ಹಿಂದೆ ತಮ್ಮ ಮದರ್ ಇಂಡಿಯಾಗೋಸ್ಕರ ಹಾಳು ಬಾವಿಗೆ ಬೀಳಲು ಕೂಡ ರೆಡಿ ಇದ್ದರು, ದರ್ಶನ್ ಇಲ್ಲದೆ ನಮ್ಮ ಮನೆಯ ಕಾರ್ಯಕ್ರಮ ನಡೆಯಲ್ಲ ಎಂದು ಸುಮಲತಾ ಹೇಳಿದ್ದರು. ಆದರೂ ಕೂಡ ಕಾರ್ಯಕ್ರಮ ನಡೆದಿದೆ. ಹೀಗಾಗಿಯೇ ಹರಿದಾಡುತ್ತಿರುವ ಸುದ್ದಿಗಳಿಗೆ ಈಗ ರೆಕ್ಕೆ ಪುಕ್ಕಗಳು ಅಂಟಿಕೊಂಡಿವೆ. ಆದರೆ, ಕೆಲವರು ಈ ಮಾತುಗಳನ್ನು ಒಪ್ಪಲು ತಯಾರಿಲ್ಲ. ಸುಮಲತಾ ಮತ್ತು ದರ್ಶನ್ ನಡುವೆ ಸಂಬಂಧ ಹಳಿಸಿದೆ ಎಂದು ನಂಬಲು ರೆಡಿ ಇಲ್ಲ.

ಬದಲಿಗೆ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಬ್ಯುಸಿ ಇದ್ದಾರೆ ಈ ಹಿನ್ನೆಲೆ ನಾಮಕರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನುವ ವಾದ ಮಾಡುತ್ತಿದ್ದಾರೆ. ಆದರೆ, ಮತ್ತೊಂದೆಡೆ ದರ್ಶನ್ ಬರದೇ ಇದ್ದರೇನಂತೆ ಕೊನೆ ಪಕ್ಷ ದರ್ಶನ್ ಅವರ ಮಡದಿ ವಿಜಯಲಕ್ಷ್ಮಿ ಆದರೂ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಿತ್ತಲ್ವಾ ಎಂಬ ಪ್ರತಿವಾದವನ್ನು ಮತ್ತೊಂದು ವರ್ಗ ಮಾಡುತ್ತಿದೆ. ಈ ಪ್ರತಿವಾದಕ್ಕೆ ಈಗ ಬಲ ಸಿಕ್ಕಂತಾಗಿದೆ.
ಆ ಕಡೆ ನಾಮಕರಣ ನಡೆಯುತ್ತಿದ್ದ ಸಮಯದಲ್ಲಿ ಈ ಕಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಐಷಾರಾಮಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಫೋಟೋಗಳು ಈಗ ವೈರಲ್ ಆಗಿವೆ. ದರ್ಶನ್ ಮತ್ತು ಸುಮಲತಾ ನಡುವಿನ ಸಂಬಂಧ ಮುರಿದು ಬಿದ್ದಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂಬ ಮಾತು ಕೇಳಿ ಬರುತ್ತಿವೆ.
ಅಂದ್ಹಾಗೇ ವಿಜಯಲಕ್ಷ್ಮಿ ದರ್ಶನ್ ಹೋದ ಈ ರೆಸ್ಟೋರೆಂಟ್‌ನ ಹೆಸರು ಬಾಸ್ಟಿಯನ್ ಗಾರ್ಡನ್ ಸಿಟಿ. ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಈ ರೆಸ್ಟೋರೆಂಟ್ ಬೆಂಗಳೂರಿನ ದುಬಾರಿ ರೆಸ್ಟೋರೆಂಟ್ ಗಳಲ್ಲಿ ಒಂದು. ಈ ಹೋಟೆಲ್‌ಗೆ ಒಬ್ಬ ವ್ಯಕ್ತಿ ಹೋಗಬೇಕು ಅಂದರೆ ಜೇಬಿನಲ್ಲಿ 2000 ಹಣ ಇರಲೇಬೇಕು. ವೆಜ್ ನಾನ್ ವೆಜ್ ಮಾತ್ರವಲ್ಲದೇ ಈ ರೆಸ್ಟೋರೆಂಟ್ ನಲ್ಲಿ ಚೈನೀಸ್ ಫುಡ್ ಕೂಡ ಸಿಗುತ್ತೆ. 400 ಜನ ಏಕಕಾಲಕ್ಕೆ ಕುಳಿತುಕೊಳ್ಳುವಷ್ಟು ವಿಶಾಲವಾದ ಈ ರೆಸ್ಟೋರೆಂಟ್‌ಗೆ ಬಾಲಿವುಡ್‌ನ ಸ್ಟಾರ್ ನಾಯಕಿ ಶಿಲ್ಪಾ ಶೆಟ್ಟಿ ಒಡತಿ. ಶೇಕಡಾ 50 % ರಷ್ಟು ಹಣವನ್ನು ಶಿಲ್ಪಾ ಶೆಟ್ಟಿ ಈ ರೆಸ್ಟೋರೆಂಟ್ ಗೆ ಹೂಡಿದ್ದಾರೆ.
ಇಂತಹ ಬಾಸ್ಟಿಯನ್ ಗಾರ್ಡನ್ ಸಿಟಿಯಲ್ಲಿ ವಿಜಯಲಕ್ಷ್ಮಿ ಭೋಜನ ಸವಿದು ಬಂದಿದ್ದಾರೆ. ನಿಜಾ, ಈ ರೆಸ್ಟೋರೆಂಟ್ ಗೆ ವಿಜಯಲಕ್ಷ್ಮಿ ಭೇಟಿ ನೀಡಿದ್ದು ಯಾವಾಗ ಎನ್ನುವುದಕ್ಕೆ ಉತ್ತರ ಇಲ್ಲ. ಕೇವಲ ಫೋಟೊಗಳನ್ನು ಮಾತ್ರ ವಿಜಯಲಕ್ಷ್ಮಿ ಹಂಚಿಕೊಂಡಿದ್ಧಾರೆ. ಆದರೆ, ಈ ಫೋಟೊ ನೋಡಿದ ನಂತರ ಅನೇಕರು ನಿನ್ನೆ ಸುಮಲತಾ ಅಂಬರೀಶ್ ಅವರ ಮೊಮ್ಮಗನ ನಾಮಕರಣಕ್ಕೆ ಗೈರಾದ ವಿಜಯಲಕ್ಷ್ಮಿ ಈ ರೆಸ್ಟೋರೆಂಟ್‌ಗೆ ಹೋಗಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಭಾನುವಾರದ ಕಾರಣ ರೆಸ್ಟೋರೆಂಟ್ ಗೆ ತೆರಳಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ದರ್ಶನ್ ಮತ್ತು ಸುಮಲತಾ ಅಂಬರೀಶ್ ನಡುವೆ ಭಿನ್ನಾಭಿಪ್ರಾಯ ಮೂಡಿದೆಯಾ ? ಉತ್ತರ ಅವರಿಬ್ಬರಿಗೆ ಗೊತ್ತು.


Click it and Unblock the Notifications











