ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಅಶ್ಲೀಲ ಪೋಸ್ಟ್, ಕಾಮೆಂಟ್ಸ್, ಮೀಮ್ಸ್; ಕೆರಳಿದ ಡಿಬಾಸ್ ಫ್ಯಾನ್ಸ್
ಅಭಿಮಾನಿಗಳ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ವಿಷ ಕಕ್ಕುತ್ತಿದ್ದಾರೆ. ವೈಯಕ್ತಿಕ ವಾಗ್ದಾಳಿ, ಖಾಸಗಿ ವಿಷಯಗಳ ಬಗ್ಗೆ ತಿಳುವಳಿಕೆ ಇಲ್ಲದೇ ಕಾಮೆಂಟ್ಸ್ ಮಾಡುವುದು ಅವಾಚ್ಯ ಪದಗಳಿಂದ ನಿಂದಿಸುವುದು, ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್, ಕಾಮೆಂಟ್ಸ್, ಮೀಮ್ಸ್ ಮಾಡುವುದು ಅತಿಯಾಗುತ್ತಿದೆ.
ಈ ಹಿಂದೆ ನಿರ್ಮಾಪಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಿಡಿಗೇಡಿವೊಬ್ಬ ಮಾಡಿದ್ದ ಅವಹೇಳನಕಾರಿ ಪೋಸ್ಟ್ ಭಾರೀ ಸಂಚಲನ ಸೃಷ್ಟಿಸಿತ್ತು. ಈ ವಿಚಾರ ದೊಡ್ಮನೆ ಅಭಿಮಾನಿಗಳು ದೂರು ನೀಡುವ ಮಟ್ಟಕ್ಕೆ ಹೋಗಿತ್ತು. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದರು. ಅದೇ ಸಮಯದಲ್ಲಿ ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಬಗ್ಗೆಯೂ ಚರ್ಚೆ ಆಗಿತ್ತು. ಇತ್ತೀಚೆಗೆ ನಟಿ ರಮ್ಯಾ ಅವರಿಗೆ ಕಿಡಿಗೇಡಿಗಳು ಕೆಟ್ಟದಾಗಿ ಮೆಸೇಜ್ ಮಾಡಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.
ನಟಿ ರಮ್ಯಾ ತಮಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದವರ ವಿರುದ್ಧ ದೂರು ದಾಖಲಿಸಿದ್ದರು. ದರ್ಶನ್ ಅಭಿಮಾನಿಗಳೇ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ರಮ್ಯಾ ಆರೋಪಿಸಿದ್ದರು. ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ವಿಜಯಲಕ್ಷ್ಮಿ ದರ್ಶನ್ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡುವವರ ವಿರುದ್ಧ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿದೆ. ಜಾಮೀನು ರದ್ದಾಗಿ ವಿಚಾರಣಾಧೀನ ಖೈದಿಯಾಗಿ ದರ್ಶನ್ ಸೆರೆವಾಸ ಅನುಭವಿಸುತ್ತಿದ್ದಾರೆ. ಸದ್ಯ ಜಾಮೀನು ಸಿಗುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ವಿಚಾರ ಚರ್ಚೆ ಬಂದಿದೆ. ಕೆಲ ಕಿಡಿಗೇಡಿಗಳು ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟ ಕೊಳಕು ಪದಗಳಲ್ಲಿ ಟ್ರೋಲ್ ಮಾಡಿದ್ದಾರೆ. ಅದು ಏನು ಎನ್ನುವುದನ್ನು ಕೂಡ ಇಲ್ಲಿ ಬರೆಯಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಒಬ್ಬ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್, ಕಾಮೆಂಟ್ಸ್ ಮಾಡಿ ವೈರಲ್ ಮಾಡಲಾಗಿದೆ. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.
ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಮಾಡಿರುವ ಅಶ್ಲೀಕ ಟ್ವೀಟ್, ಕಾಮೆಂಟ್ಸ್ ಬಗ್ಗೆ ಸೈಬರ್ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಮನವಿ ಮಾಡುತ್ತಿದ್ದಾರೆ. ಮಹಿಳಾ ಇಲಾಖೆ ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಕೇಳುತ್ತಿದ್ದಾರೆ. ಫೇಕ್ ಅಕೌಂಟ್‌ಗಳನ್ನು ಕ್ರಿಯೇಟ್ ಮಾಡಿ ಕೆಲ ಕಿಡಿಗೇಡಿಗಳು ತಮ್ಮ ಕೊಳಕು ಮನಸ್ಥಿತಿಯನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಇದಕ್ಕೆಲ್ಲಾ ಸಂಬಂಧಪಟ್ಟವರು ಮೂಗುದಾರ ಹಾಕಬೇಕಿದೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಯಾವುದೋ ಮೂಲೆಯಲ್ಲಿ ಕೂತು ಮನಸ್ಸಿಗೆ ಬಂದಂತೆ ಕೆಲವರು ಕಾಮೆಂಟ್ ಮಾಡುತ್ತಾರೆ. ಅದನ್ನು ಕೆಲವರು ಬೆಂಬಲಿಸುತ್ತಾರೆ.
ದರ್ಶನ್ ಅಂಧಾಭಿಮಾನಿಗಳು ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಬೇರೆಯವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ ಎನ್ನುವ ಆರೋಪವೂ ಇದೆ. ದರ್ಶನ್ ಯಾಕೆ ಈ ಬಗ್ಗೆ ಅಭಿಮಾನಿಗಳಿಗೆ ತಿಳಿ ಹೇಳುವುದಿಲ್ಲ ಎನ್ನುವ ಪ್ರಶ್ನೆ ಕೂಡ ಕೇಳಿಬಂದಿತ್ತು. ನಟಿ ರಮ್ಯಾ ಕೂಡ ಇದೇ ಮಾತು ಹೇಳಿದ್ದರು. ಎಲ್ಲಾ ನಟ, ನಟಿಯರಿಗೂ ಒಳ್ಳೆ ಅಭಿಮಾನಿಗಳು ಇದ್ದಾರೆ. ಆದರೆ ಅಭಿಮಾನಿಗಳ ಹೆಸರಿನಲ್ಲಿ ಕೆಲ ಕಿಡಿಗೇಡಿಗಳ ಇಂತಹ ಹುಚ್ಚಾಟ ಸಾಕಷ್ಟು ಅನರ್ಥಗಳಿಗೆ ಕಾರಣವಾಗುತ್ತಿದೆ. ಇದು ನಿಜವಾದ ಅಭಿಮಾನಿಗಳಿಗೂ ಕೆಟ್ಟ ಹೆಸರು ತರುತ್ತಿದೆ.


Click it and Unblock the Notifications











