ಹೊಸ ಹುರುಪಲಿ ಬೀಸುತಿರುವ ಗಾಳಿಯೊಡನೆ ಹೂವಿನಂತೆ.. ಮಾತಾಡು ನೀ...
ರೇಣುಕಾಸ್ವಾಮಿ ಪ್ರಕರಣದಲ್ಲಿ ಸದ್ಯ ದರ್ಶನ್‌ಗೆ ರಿಲೀಫ್ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಾಲೇ ಟ್ರಯಲ್ ಆರಂಭವಾಗಿದ್ದರೂ ಸಾಕ್ಷಿಗಳ ವಿಚಾರಣೆ ನಡೆಯುತ್ತಲೇಯಿದೆ. ಇನ್ನೊಂದು ವರ್ಷದಲ್ಲಿ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ಮುಗಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ವಿಚಾರಣೆ ಪೂರ್ಣಗೊಳಿಸದಿದ್ದರೆ ಬಳಿಕ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಪತಿಯ ನೆನಪಿನಲ್ಲೇ ಪತ್ನಿ ವಿಜಯಲಕ್ಷ್ಮಿ ದರ್ಶನ್ ದಿನ ದೂಡುತ್ತಿದ್ದಾರೆ.
ಸದ್ಯಕ್ಕೆ ದರ್ಶನ್ ಅವರನ್ನು ಸಂಕಷ್ಟದಿಂದ ಪಾರು ಮಾಡಿ ಜೈಲಿನಿಂದ ಹೊರಗಡೆ ಕರೆದುಕೊಂಡು ಬರುವ ಎಲ್ಲಾ ಬಾಗಿಲು ಮುಚ್ಚಿದಂತಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವರ್ಷದ ನಂತರ ಜಾಮೀನು ಸಲ್ಲಿಸಲು ಮಾತ್ರ ಅವಕಾಶ ಸಿಕ್ಕಿದೆ. ಒಂದು ವರ್ಷ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ನೀಡಿದ ಆದೇಶವನ್ನು ಮಾರ್ಪಾಡು ಮಾಡುವಂತೆ ಇತ್ತೀಚೆಗೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ಪತಿ ನೆನಪಿನಲ್ಲಿ ವಿಜಯಲಕ್ಷ್ಮಿ ದರ್ಶನ್ ಫೋಟೊ ಹಂಚಿಕೊಂಡಿದ್ದಾರೆ. 'ತಾರಕ್' ಚಿತ್ರದ 'ಮಾತಾಡು ನೀ' ಹಾಡನ್ನು ಅದಕ್ಕೆ ಸೇರಿಸಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ.

ಪ್ರಕಾಶ್ ನಿರ್ದೇಶನದ 'ತಾರಕ್' ಚಿತ್ರದಲ್ಲಿ ದರ್ಶನ್, ಸಾನ್ವಿ, ಶ್ರುತಿ ಹರಿಹರನ್ ನಟಿಸಿದ್ದರು. 9 ವರ್ಷಗಳ ಹಿಂದೆ ಸಿನಿಮಾ ತೆರೆಗೆ ಬಂದಿತ್ತು. ಅರ್ಜುನ್ ಜನ್ಯಾ ಸಂಗೀತದಲ್ಲಿ 'ಮಾತಾಡು ನೀ' ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು. ಅರ್ಮಾನ್ ಮಲಿಕ್ ಹಾಗೂ ಶ್ರೇಯಾ ಘೋಷಾಲ್ ದನಿಯಾಗಿದ್ದರು. ವಿದೇಶದ ಕಲರ್‌ಫುಲ್ ಲೊಕೇಶನ್‌ಗಳಲ್ಲಿ ಹಾಡನ್ನು ಸೆರೆಹಿಡಿಯಲಾಗಿತ್ತು. ಶ್ರೀ ಚೌಡೇಶ್ವರಿ ಸಿನಿಮಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷಣ ದುಶ್ಯಂತ್ ಚಿತ್ರ ನಿರ್ಮಾಣ ಮಾಡಿದ್ದರು.
ಇತ್ತೀಚೆಗೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪರ ವಕೀಲರು ಬದಲಾಗಿದ್ದರು. ಸುನೀಲ್ ಕುಮಾರ್ ಬದಲಿಗೆ ಹಿರಿಯ ಕ್ರಿಮಿನಲ್ ವಕೀಲ ಹಶ್ಮತ್ ಪಾಷಾ ವಕಾಲತ್ತು ವಹಿಸಿದ್ದು ಮುಂದೆ ವಾದ ಮಂಡನೆ ಮುಂದುವರೆಸಲಿದ್ದಾರೆ. ದರ್ಶನ್ ಮಾತ್ರವಲ್ಲ ಇದೇ ಪ್ರಕರಣದ ಆರೋಪಿಗಳಾದ ಲಕ್ಷ್ಮಣ್ ಹಾಗೂ ನಾಗರಾಜ್ ಪರ ಕೂಡ ಸುನೀಲ್ ವಕಾಲತ್ತು ವಹಿಸುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಇನ್ನು ಬೆಂಗಳೂರಿನ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ಹಶ್ಮತ್ ಪಾಷಾ ಸಕ್ರಿಯರಾಗಿದ್ದು ಸಾಕಷ್ಟು ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸಿರುವ ಅನುಭವ ಅವರಿಗಿದೆ.
ಕನ್ನಡದಲ್ಲಿ 'ಬಾಸ್' ಎಂಬ ಸಿನಿಮಾ ನಿರ್ಮಾಣವಾಗಿ ಬಿಡುಗಡೆಗೆ ಸಜ್ಜಾಗಿದೆ. ರೇಣುಕಾಸ್ವಾಮಿ ಪ್ರಕರಣವನ್ನು ಆಧರಿಸಿ ಸಿನಿಮಾ ನಿರ್ಮಿಸಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆ ತಡೆಯಲು ವಿಜಯಲಕ್ಷ್ಮಿ ದರ್ಶನ್ ಮುಂದಾಗಿದ್ದಾರೆ. ಈ ಹಿಂದೆ ಸಿನಿಮಾ ತೆರೆಗೆ ಬರದಂತೆ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಾತ್ಕಾಲಿಕ ಆದೇಶ ಪಡೆದಿದ್ದರು. ಆದರೆ ಬಳಿಕ ತಾತ್ಕಾಲಿಕ ತಡೆಯಾಜ್ಞೆಯನ್ನು ರದ್ದುಪಡಿಸಿ, ಸಿನಿಮಾ ಬಿಡುಗಡೆಗೆ ಕೋರ್ಟ್ ಅನುಮತಿ ನೀಡಿತ್ತು. ಸಿನಿಮಾ ಬಿಡುಗಡೆ ಮಾಡದಂತೆ ಹೈಕೋರ್ಟ್‌ನಲ್ಲಿ ವಿಜಯಲಕ್ಷ್ಮಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಸಿನಿಮಾ ಬಿಡುಗಡೆ ಪದೇ ಪದೆ ಮುಂದಕ್ಕೆ ಹೋಗ್ತಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಬಂಧನವಾದಾಗ ವಿಜಯಲಕ್ಷ್ಮಿ ಬೆಂಬಲವಾಗಿ ನಿಲ್ಲುತ್ತಾ ಬಂದಿದ್ದಾರೆ. ದೇವಸ್ಥಾನಗಳಿಗೆ ಸುತ್ತಾಡಿ, ಕಾನೂನು ಹೋರಾಟ ಮಾಡಿ ಪತಿಯನ್ನು ಸಂಕಷ್ಟದಿಂ ಪಾರು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಆದರೆ ಈ ಬಗ್ಗೆ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ ಎಲ್ಲಾ ಆರೋಪಿಗಳು ಮತ್ತೆ ಜೈಲು ಸೇರುವಂತಾಯ್ತು. 10 ತಿಂಗಳಿನಿಂದ ಮತ್ತೆ ಎಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.


Click it and Unblock the Notifications