ಏಕಾಏಕಿ ಚಿತ್ರರಂಗದಲ್ಲಿ ಫುಲ್ ಆಕ್ಟಿವ್ ಆದ ವಿಜಯಲಕ್ಷ್ಮಿ, ವಾಮನ ಬೆನ್ನ ಹಿಂದೆ ನಿಂತ ದರ್ಶನ್ ಪತ್ನಿ !
ತಮ್ಮ ಆಪ್ತ ವಲಯ ಮತ್ತು ಹೊಸಬರ ಚಿತ್ರಕ್ಕೆ ತಮ್ಮ ಚಿತ್ರಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ಸನ್ಮಾನ್ಯ ದರ್ಶನ್ ಅವರ ವಿಶೇಷತೆ. ಕೆಲ ಒಮ್ಮೆ ತಮ್ಮ ಚಿತ್ರಕ್ಕೆ ಕೊಡದಷ್ಟು ಮಹತ್ವವನ್ನು ಬೇರೆಯವರಿಗೆ ದರ್ಶನ್ ಕೊಡೋದಿದೆ.
ಆದರೆ, ರೇಣುಕಾ ಸ್ವಾಮಿ ಪ್ರಕರಣದಿಂದ ದರ್ಶನ್ ಅವರ ಈ ಉದಾರ ಮನೋಭಾವಕ್ಕೆ ಬ್ರೇಕ್ ಬಿದ್ದಂತಾಗಿದೆ. ತಮ್ಮ ಸಿನಿಮಾ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಕರೆಯುವ ಮನಸು ಇದ್ದರೂ ಕೂಡ ಹಲವರು ದರ್ಶನ್ ವರೆಗೆ ತಲುಪುವ ದಾರಿ ಗೊತ್ತಾಗದೇ ಸುಮ್ಮನಾದರೆ, ಇನ್ನೂ ಕೆಲವರು ದಾರಿ ಗೊತ್ತಿದ್ದರೂ ಸುಖಾ ಸುಮ್ಮನೆ ಯಾಕೆ ವಿವಾದ ಎಂದುಕೊಂಡು ತಮ್ಮಷ್ಟಕ್ಕೆ ತಾವೇ ತಮ್ಮ ಚಿತ್ರದ ಕಾರ್ಯಕ್ರಮಗಳನ್ನು ಮುಗಿಸಿಕೊಳ್ಳುತ್ತಿದ್ದಾರೆ.

ಇನ್ನು ಇದೆಲ್ಲದರ ನಡುವೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ತನ್ನ ಪತಿಯ ಸುತ್ತ ಮುತ್ತ ಇದ್ದವರನ್ನೆಲ್ಲ ಮನೆಗೆ ಕಳಿಸಿದ್ದಾರೆ. ದರ್ಶನ್ ಸುತ್ತ ಮುತ್ತ ವಿಜಯಲಕ್ಷ್ಮಿ ಅಷ್ಟದಿಗ್ಬಂಧನವನ್ನೇ ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿಜಯಲಕ್ಷ್ಮಿ ಈಗ ನಿಧಾನವಾಗಿ ಚಿತ್ರರಂಗದಲ್ಲಿ ಕೂಡ ಸಕ್ರಿಯವಾಗುತ್ತಿದ್ದಾರೆ. ಸಭೆ-ಸಮಾರಂಭ-ಕಾರ್ಯಕ್ರಮ ಎಂದೆಲ್ಲ ಓಡಾಡಲು ಶುರು ಮಾಡಿದ್ದಾರೆ. ವಾಮನ ಇದಕ್ಕೆ ಮತ್ತೊಂದು ಉದಾಹರಣೆ.
ಹೌದು, ಜೈಲಲ್ಲಿ ದರ್ಶನ್ ರಾಜಾರೋಷವಾಗಿ ಒಂದು ಕೈಲಿ ಕಾಫಿ ಮಗ್ ಹಿಡಿದು, ಮತ್ತೊಂದು ಕೈಲಿ ಧಮ್ಮು ಎಳೀತಾ ಕುಂತ ದಿವ್ಯ ಗಳಿಗೆಯಿಂದ ಹಿಡಿದು ಬಿಡುಗಡೆಯಾಗುವರೆಗೆ ವಿಜಯಲಕ್ಷ್ಮಿ ದರ್ಶನ್ ಅವರನ್ನು ನೆರಳಿನಂತೆ ಹಿಂಬಾಲಿಸಿದ ಧನ್ವೀರ್, ವಾಮನ ಎಂಬ ಚಿತ್ರವನ್ನು ಮಾಡಿದ್ಧಾರೆ. ಮಾರ್ಚ್ 2022ರಲ್ಲಿ ಶುರುವಾದ ಈ ಚಿತ್ರ ಈಗ ಎರಡು ವರ್ಷದ ನಂತರ ಈ ಏಪ್ರಿಲ್ 10ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಕ್ಕೆ ಚಾಲನೆಯನ್ನು ನೀಡಿರುವ ಚಿತ್ರತಂಡಕ್ಕೆ ಈ ಬಾರಿ ದರ್ಶನ್ ಅಲ್ಲ ಬದಲಿಗೆ ದರ್ಶನ್ ಅವರ ಅಧಿಕೃತ ಧರ್ಮ ಪತ್ನಿ ವಿಜಯಲಕ್ಷ್ಮಿ ಸಾಥ್ ನೀಡುತ್ತಿದ್ದಾರೆ. ತಮ್ಮ ರಾಮನಂತಹ ಪತಿಗೆ ಲಕ್ಷ್ಮಣನಂತೆ ಇರುವ ಧನ್ವೀರ್ ಅಭಿನಯಿಸಿರುವ ವಾಮನ ಚಿತ್ರದ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ.
ವಾಮನ ಚಿತ್ರದ ಕಂದ ಕನಸ ರೂಪ ತಾಯಿ ಹಾಡನ್ನು ವಿಜಯಲಕ್ಷ್ಮಿ ಈ ಶನಿವಾರ ಅಂದರೆ ಮಾರ್ಚ್ 15ರಂದು ಬಿಡುಗಡೆ ಮಾಡಲಿದ್ದು ಸದ್ಯ ದರ್ಶನ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳು ಈ ಸುದ್ದಿಯನ್ನು ಕೇಳಿ ರಣ ಕೇಕೆ ಹಾಕುತ್ತಿದ್ದಾರೆ. ಅಣ್ಣ ಜೈಲಿಗೆ ಹೋದ ಬೆನ್ನಲ್ಲೇ ಅತ್ತಿಗೆ ಚಿತ್ರರಂಗದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಅಂದ್ಹಾಗೇ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ವಾಮನ ಚಿತ್ರ ಮೂಡಿ ಬಂದಿದ್ದು ಶಂಕರ್ ರಾಮನ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಹಿರಿಯ ನಟಿ ತಾರಾ ಚಿತ್ರದಲ್ಲಿ ಧನ್ವೀರ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕಿಯ ಪಾತ್ರಕ್ಕೆ ರೀಶ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಚೇತನ್ ಗೌಡ ಚಿತ್ರದ ನಿರ್ಮಾಪಕರು. ಭೂಗತಲೋಕದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಧನ್ವೀರ್, ರೀಶ್ಮಾ ಮತ್ತು ತಾರಾ ಅವರನ್ನು ಹೊರತು ಪಡಿಸಿದರೆ , ಸಂಪತ್ ರಾಜ್, ಅವಿನಾಶ್, ಅಚ್ಯುತ್ ಕುಮಾರ್, ಶಿವರಾಜ್ ಕೆಆರ್ ಪೇಟೆ ಮತ್ತು ಕಾಕ್ರೋಚ್ ಸುಧಿ ಸೇರಿದಂತೆ ಹಲವರು ಇದ್ದಾರೆ. ಸದ್ಯ ವಿಜಯಲಕ್ಷ್ಮಿ ದರ್ಶನ್ ವಾಮನ ಬೆನ್ನ ಹಿಂದೆ ನಿಂತಿದ್ದು ಪ್ರಚಾರಕ್ಕೆ ಕೈ ಜೋಡಿಸಿದ್ದಾರೆ. ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರ ಇದೇ ಏಪ್ರಿಲ್ 10ರಂದು ತೆರೆಗೆ ಬರಲಿದೆ.


Click it and Unblock the Notifications











