"ದೇವರು ನಮ್ಮ ಜೀವನದಲ್ಲಿ ಆಟ ಆಡುತ್ತಿದ್ದಾನೆ"; ಮನದ ನೋವು ತೋಡಿಕೊಂಡ ವಿಜಯಲಕ್ಷ್ಮಿ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟ ಪರಿಹಾರ ಆಗುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ದರ್ಶನ್ 2ನೇ ಬಾರಿ ಜೈಲು ಸೇರಿ 9 ತಿಂಗಳು ಕಳೆದಿದೆ. ಇತ್ತೀಚೆಗೆ ವಕೀಲರ ಮೂಲ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದಾರೆ. ತಮ್ಮ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.
ಪತಿಯನ್ನು ಸಂಕಷ್ಟದಿಂದ ಪಾರು ಮಾಡಲು ವಿಜಯಲಕ್ಷ್ಮಿ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಈ ದೇವರ ಮೇಲೆ ಭಾರ ಹಾಕಿ ಕೂರುವಂತಾಗಿದೆ. 2024ರಲ್ಲಿ ದರ್ಶನ್ ಜೈಲು ಸೇರಿದಾಗ ಪತ್ನಿ ವಿಜಯಲಕ್ಷ್ಮಿ ದೇವಸ್ಥಾನಗಳಿಗೆ ಸುತ್ತಾಡಿ ಪ್ರಾರ್ಥಿಸಿದ್ದರು. ಕಾನೂನು ಹೋರಾಟ ನಡೆಸಿದ್ದರು. ಅದೆಲ್ಲದರ ಪ್ರತಿಫಲ ಎನ್ನುವಂತೆ ಹೈಕೋರ್ಟ್‌ನಲ್ಲಿ ಜಾಮೀನು ಮಂಜೂರಾಗಿತ್ತು. ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಬಂದು 9 ತಿಂಗಳ ಕಾಲ ಹೊರಗಿದ್ದರು. ಈ ನಡುವೆ 'ಡೆವಿಲ್' ಚಿತ್ರೀಕರಣ ಮುಗಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಆದೇಶ ಎಲ್ಲದ್ದಕ್ಕೂ ಬ್ರೇಕ್ ಹಾಕಿತ್ತು.

ಸುಪ್ರೀಂ ಕೋರ್ಟ್‌ನಲ್ಲೇ ಜಾಮೀನು ರದ್ದಾದ ಬಳಿಕ ಮುಂದೇನು ಎಂದು ಗೊತ್ತಾಗದೇ ವಿಜಯಲಕ್ಷ್ಮಿ ಕುಗ್ಗಿ ಹೋದರು. ದೇವರಲ್ಲಿ ಪ್ರಾರ್ಥನೆ ನಿಂತಿಲ್ಲ. ದೇವರೇ ಎಲ್ಲದಕ್ಕೂ ಪರಿಹಾರ ನೀಡಬೇಕು ಎಂದು ಕಾದು ಕೂತಿದ್ದಾರೆ. ಸದ್ಯ ಮೀಮ್ ವೀಡಿಯೋ ಶೇರ್ ಮಾಡಿ ದೇವರ ಮೇಲಿನ ಕೋಪವನ್ನು ಪರೋಕ್ಷವಾಗಿ ವಿಜಯಲಕ್ಷ್ಮಿ ವ್ಯಕ್ತಪಡಿಸಿದ್ದಾರೆ. "ದೇವರ ಅಡ್ರೆಸ್ ಕಂಡುಹಿಡಿದು, ಅವ್ರಿಗೆ ಒಂದು ಆಂಡ್ರಾಯ್ಡ್ ಫೋನ್ ಕೊಡ್ಸಣ ಅಂತ.. ಅವಾಗ್ಲೆ ಸಾರ್ ಅವ್ರು ನಮ್ಮ ಜೀವನದಲ್ಲಿ ಆಟ ಆಡುವುದು ಬಿಟ್ಟು ಫೋನ್ ಅಲ್ಲಿ ಆಡ್ಕೊತ್ತಾರೆ" ಎಂದು ಹೇಳುವ ಎಐ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ಹಾಕಿದ್ದಾರೆ.
ಮೇಲ್ನೋಟಕ್ಕೆ ವಿಜಯಲಕ್ಷ್ಮಿ ದರ್ಶನ್ ಮೀಮ್ ವೀಡಿಯೋವನ್ನು ಹಂಚಿಕೊಂಡಂತೆ ಕಂಡರೂ ತಮ್ಮ ಮನದ ನೋವು, ದೇವರ ಮೇಲಿನ ನಂಬಿಕೆ ಹಾಗೂ ದೇವರೇ ಎಲ್ಲದಕ್ಕೂ ಪರಿಹಾರ ನೀಡಲು ಸಾಧ್ಯ ಎಂದು ಹೇಳಿರುವುದು ಗೊತ್ತಾಗುತ್ತಿದೆ. ಮೇ 4ರಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ವಕೀಲರ ವಾದವನ್ನು ಆಲಿಸಿದ್ದ ನ್ಯಾಯಾಧೀಶರು ಪ್ರಕರಣದ ಟ್ರಯಲ್ ಅಪ್‌ಡೇಟ್ ಹಾಗೂ ಜೈಲಿನಲ್ಲಿ ದರ್ಶನ್‌ಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ವರದಿ ನೀಡುವಂತೆ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಸುಪ್ರೀಂ ಸೂಚಿಸಿದೆ. ವರದಿ ಬಂದ ಬಳಿಕ ವಿಚಾರಣೆ ಮುಂದುವರೆಸಲು ತೀರ್ಮಾನಿಸಲಾಗಿದೆ.
ಜಾಮೀನು ಅರ್ಜಿಯಲ್ಲಿ ದರ್ಶನ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೈಲಿನಲ್ಲಿ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಿದ್ದಾರೆ. ಇದರಿಂದ ದೈಹಿಕವಾಗಿ, ಮಾನಸಿಕವಾಗಿ ಸಮಸ್ಯೆ ಎದುರಾಗಿದೆ. ಮಾಧ್ಯಮಗಳಲ್ಲಿ ನೆಗೆಟಿವ್ ಪ್ರಚಾರದಿಂದ ಸಮಸ್ಯೆ ಹೆಚ್ಚಾಗಿದೆ. ಸಹ ಕೈದಿಗಳಿಂದ ನಿಂದನೆ, ಪ್ರಚೋದನೆ ಎದುರಾಗಿದೆ. ಕುಟುಂಬದವರನ್ನು ಭೇಟಿ ಮಾಡಲು ಸರಿಯಾಗಿ ಸಮಯ ನೀಡ್ತಿಲ್ಲ. ಬೆನ್ನು ನೋವು ಇದ್ದರೂ ಫಿಸಿಯೋ ಥೆರಪಿ ಮಾಡ್ತಿಲ್ಲ. ಜೈಲಿನಲ್ಲಿ ಇರುವುದರಿಂದ ನನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ ಎಂದು ದರ್ಶನ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಈವರೆಗೆ 10-15 ಸಾಕ್ಷಗಳ ವಿಚಾರಣೆ ಮಾತ್ರ ನಡೆದಿದೆ. ನೂರಾರು ಸಾಕ್ಷಿಗಳನ್ನು ವಿಚಾರಣೆ ಮಾಡಬೇಕಿರುವುದರಿಂದ ಸಾಕಷ್ಟು ವರ್ಷಗಳೇ ಬೇಕಾಗಬಹುದು. ಕನಿಷ್ಠ ಸೌಲಭ್ಯಕ್ಕೆ ಬೇಡಿಕೆ ಇಟ್ಟು ಸೆಷನ್ ಕೋರ್ಟ್‌ಗೆ ಹೋದರೆ ಸುಪ್ರೀಂ ಕೋರ್ಟ್ ಆದೇಶ ಎನ್ನುತ್ತಿದ್ದಾರೆ. ನನ್ನ ಅನುಪಸ್ಥಿತಿಯಿಂದ ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಕೆಲಸಗಳು ನಿಂತು ಹೋಗಿದೆ. ಇದರಿಂದ ಬಹಳ ಸಮಸ್ಯೆ ಆಗುತ್ತಿದೆ ಎಂದು ದರ್ಶನ್ ಹೇಳಿದ್ದಾರೆ. ಇದನ್ನೆಲ್ಲಾ ಪರಿಗಣಿಸಿ ಜಾಮೀನು ನೀಡಿ ಎಂದು ದರ್ಶನ್ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು.


Click it and Unblock the Notifications