'ಕೆಂಡಸಂಪಿಗೆ' ವಿಕ್ಕಿ ವರುಣ್ ನಟನೆಯ 'ಕಾಲಾಪತ್ಥರ್' ಫಸ್ಟ್ ಲುಕ್ ರಿಲೀಸ್
'ಕೆಂಡಸಂಪಿಗೆ' ಹಾಗೂ 'ಕಾಲೇಜ್ ಕುಮಾರ' ಚಿತ್ರಗಳ ಯಶಸ್ಸಿನ ನಂತರ ನಟ ವಿಕ್ಕಿ ವರುಣ್ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ 'ಕಾಲಾಪತ್ಥರ್' ಎಂದು ಹೆಸರಿಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಮೊದಲೇ ಹೇಳಿದಂತೆ ಇದು ಕಂಪ್ಲೀಟ್ ಕಮರ್ಷಿಯಲ್ ಹಾಗೂ ಮಾಸ್ ಸಿನಿಮಾ. ಟೈಟಲ್ ನಲ್ಲೇ ಆ ಗತ್ತು ಕಾಣುತ್ತಿದೆ. ಕಥೆಯಲ್ಲೂ ಅಷ್ಟೇ ಕಿಕ್ ಇರುವ ಸೂಚನೆಯನ್ನು ಈ ಫಸ್ಟ್ ಲುಕ್ ಪೋಸ್ಟರ್ ಕೊಡ್ತಿದೆ.
ಮೊದಲೆರಡು ಚಿತ್ರಗಳಲ್ಲಿ ಕೂಲ್ ಆಗಿ ಕಾಣಿಸಿಕೊಂಡಿದ್ದ ವಿಕ್ಕಿ ಈ ಚಿತ್ರದಲ್ಲಿ ರಗಡ್ ಆಗಿ ನಟಿಸಲಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕೆ ಚೇತನ್ ಎಸಿ ನಿರ್ದೇಶನ ಮಾಡುತ್ತಿದ್ದು, ಎಚ್‌ಪಿ ನವೀನ್ ನಿರ್ಮಾಣ ಮಾಡುತ್ತಿದ್ದಾರೆ.

ಇದಕ್ಕೂ ಮುಂಚೆ 'ರಂಗ ಬಿಇ, ಎಂಟೆಕ್' ಎಂಬ ಚಿತ್ರದಲ್ಲಿ ವಿಕ್ಕಿ ವರುಣ್ ನಟಿಸಿದ್ದಾರೆ. ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಈಗ ನಾಯಕನಾಗಿ ನಟಿಸುತ್ತಿರುವ ನಾಲ್ಕನೇ ಪ್ರಾಜೆಕ್ಟ್ ಆರಂಭಿಸಿದ್ದಾರೆ.
ಸದ್ಯಕ್ಕೆ ಫಸ್ಟ್ ಲುಕ್ ಪೋಸ್ಟರ್ ಮಾತ್ರ ಬಹಿರಂಗಪಡಿಸಿರುವ ಚಿತ್ರತಂಡ ಉಳಿದ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಕಾಲಾಪತ್ಥರ್ ಚಿತ್ರದಲ್ಲಿ ನಾಯಕಿ ಯಾರಾಗಬಹುದು, ಪ್ರಮುಖ ಪಾತ್ರಗಳಲ್ಲಿ ಯಾರು ನಟಿಸಬಹುದು ಎಂಬ ಕುತೂಹಲವನ್ನು ಹಾಗೆ ಉಳಿಸಿಕೊಂಡಿದ್ದಾರೆ.
'ಕಾಲೇಜು ಕುಮಾರ' ಸಿನಿಮಾ 2017ರಲ್ಲಿ ತೆರೆಕಂಡಿತ್ತು. ಮೂರು ವರ್ಷದವರೆಗೂ ವಿಕ್ಕಿ ಚಿತ್ರ ತೆರೆಗೆ ಬಂದಿಲ್ಲ. ಹಾಗಾಗಿ, ಕಾಲಾಪತ್ಥರ್ ಸಿನಿಮಾದ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ.


Click it and Unblock the Notifications











