'ವಿಕ್ರಾಂತ್ ರೋಣ'ನಿಗೆ ಕಿಡಿಗೇಡಿಗಳ ಗುನ್ನ! ಆನ್‌ಲೈನ್‌ನಲ್ಲಿ ಲೀಕ್
ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ವರವೂ ಹೌದು, ಶಾಪವೂ ಹೌದು. ಚಿತ್ರರಂಗದ ವಿಚಾರದಲ್ಲೂ ಇದು ಅಕ್ಷರಶಃ ಸತ್ಯ. ತಂತ್ರಜ್ಞಾನದ ಸಹಾಯದಿಂದ ಉತ್ಕೃಷ್ಟ ಸಿನಿಮಾಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಬಹುದು. ಆದರೆ ಅದೇ ತಂತ್ರಜ್ಞಾನ ಸಿನಿಮಾ ಪೈರಸಿಗೂ ಕಾರಣವಾಗುತ್ತಿರುವುದು ವಿಪರ್ಯಾಸ.
ಪೈರಸಿ ಹೊಡೆತಕ್ಕೆ ಚಿತ್ರರಂಗ ಕಂಗಾಲಾಗಿ ಹೋಗಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ರೂ, ಮೊದಲ ಶೋ ಮುಗಿತ್ತಿದ್ದಂತೆ ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ಸಿನಿಮಾ ಲೀಕ್ ಮಾಡುತ್ತಿದ್ದಾರೆ. ಸದ್ಯ ವಿಶ್ವದಾದ್ಯಂತ ತೆರೆಗಪ್ಪಳಿಸಿ, ಭರ್ಜರಿ ಸೌಂಡ್ ಮಾಡ್ತಿರೋ 'ವಿಕ್ರಾಂತ್ ರೋಣ' ಚಿತ್ರಕ್ಕೂ ಪೈರಸಿ ಕಾಟ ಶುರುವಾಗಿದೆ. ಪೈರಸಿ ವಿರುದ್ಧ ಹೋರಾಟಕ್ಕೆ ಪೈರಸಿ ನಿಗ್ರಹ ತಂಡ ನಿಯಮಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗಾಗಲೇ ಕೆಲ ಪೈರಸಿ ವೆಬ್‌ಸೈಟ್‌ಗಳಲ್ಲಿ ಚಿತ್ರದ ಥಿಯೇಟರ್ ಪ್ರಿಂಟ್ ಲಿಂಕ್‌ಗಳು ರಾರಾಜಿಸುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಪೈರಸಿ ಮಾಡಬೇಡಿ ಅಂತ ಮಾನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
ಸಿನಿಮಾ ರಿಲೀಸ್‌ಗೂ ಮೊದಲೇ ಪೈರಸಿ ಮಾಡುವಂತಹ ಕಾಲ ಇದು. ಎಷ್ಟೇ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿದ್ದರೂ ಮತ್ತೆ ಮತ್ತೆ ಅಪ್‌ಲೋಡ್ ಆಗ್ತಾನೇ ಇರುತ್ತೆ. ಯಾರೋ ಕೆಲ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ನೂರಾರು ಜನರ ನೂರಾರು ದಿನಗಳ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದ. ಹತ್ತಾರು ಕೋಟಿ ಬಂಡವಾಳ ಹಾಕಿರುವ ನಿರ್ಮಾಪಕರು ನಷ್ಟ ಎದುರಿಸುವಂತಾಗುತ್ತದೆ. ಸುದೀಪ್ ನಟನೆಯ ಈ ಹಿಂದಿನ ಕೆಲ ಸಿನಿಮಾಗಳಿಗೂ ಪೈರಸಿಯಿಂದ ಭಾರೀ ಹೊಡೆತ ಬಿದ್ದಿತ್ತು. ಪ್ರೇಕ್ಷಕರು ಪೈರಸಿಯಲ್ಲಿ ಉತ್ತೇಜಿಸಬಾರದು.

ಪೈರಸಿ ಕಂಡರೆ ಹೀಗೆ ಮಾಡಿ!
ಯಾವುದೇ ಸಿನಿಮಾ ಆದರೂ ಚಿತ್ರಮಂದಿರದಲ್ಲೇ ನೋಡಿ. ದಯವಿಟ್ಟು ಯಾರು ಕೂಡ ಚಿತ್ರದ ಕ್ಲಿಪ್‌ಗಳು ಅಥವಾ ದೃಶ್ಯಗಳನ್ನು ಎಲ್ಲೂ ಪೋಸ್ಟ್ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ. 'ವಿಕ್ರಾಂತ್ ರೋಣ' ಚಿತ್ರದ ವಿಚಾರದಲ್ಲಿ ಇಂತಹ ಚಟುವಟಿಕೆ ಕಂಡು ಬಂದರೆ, 8147824034 ವಾಟ್ಸಾಪ್ ಸಂಖ್ಯೆ ಅಥವಾ AntiPiracyAiPlex.com ಇಮೇಲ್ ವಿಳಾಸಕ್ಕೆ ವರದಿ ಮಾಡಿ. ಸಿನಿಮಾ ಪೈರಸಿ ಆಗುವುದನ್ನು ತಡೆಯಲು ಚಿತ್ರತಂಡದ ಜೊತೆ ಕೈಜೋಡಿಸಿ.

ಪೈರಸಿಯಿಂದ 'ಪೈಲ್ವಾನ್' ಕಲೆಕ್ಷನ್‌ಗೆ ಪೆಟ್ಟು!
2019ರಲ್ಲಿ ಬಿಡುಗಡೆಯಾಗಿದ್ದ ಸುದೀಪ್ ನಟನೆಯ 'ಪೈಲ್ವಾನ್' ಚಿತ್ರಕ್ಕೂ ಪೈರಸಿ ದೊಡ್ಡ ಪೆಟ್ಟು ಕೊಟ್ಟಿತ್ತು. ಕೃಷ್ಣ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಸ್ವಪ್ನ ಕೃಷ್ಣ ನಿರ್ಮಾಣ ಮಾಡಿದ್ದರು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಪೈರಸಿ ವೆಬ್‌ಸೈಟ್‌ಗಳಲ್ಲಿ ದರ್ಶನ ಕೊಟ್ಟಿತ್ತು. ನಿರ್ಮಾಪಕರು ಸೈಬರ್ ಕ್ರೈಮ್‌ಗೆ ದೂರು ನೀಡಿ ದೊಡ್ಡ ರಾದ್ಧಾಂತವೇ ಆಗಿ ಹೋಗಿತ್ತು. ಆದರೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಭಾರೀ ನಷ್ಟ ಎದುರಿಸಬೇಕಾಯಿತು.

'ವಿಕ್ರಾಂತ್ ರೋಣ' ಪೈರಸಿ ಬಗ್ಗೆ ಕಿಚ್ಚನ ಮಾತು
ಇನ್ನು ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ 'ವಿಕ್ರಾಂತ್ ರೋಣ' ಪೈರಸಿ ಬಗ್ಗೆ ಸುದೀಪ್‌ಗೆ ಪ್ರಶ್ನೆ ಎದುರಾಗಿತ್ತು. 'ಅಷ್ಟು ಸುಲಭವಾಗಿ ಪೈರಸಿ ತಡೆಯೋಕೆ ಸಾಧ್ಯವಿಲ್ಲ. ಆಗಿದ್ದಾಗಲಿ, ಎಲ್ಲವನ್ನೂ ಸಮಾಜಕ್ಕೆ ಬಿಡ್ತೀನಿ' ಎಂದು ಅಭಿನಯ ಚಕ್ರವರ್ತಿ ಉತ್ತರ ಕೊಟ್ಟಿದ್ದರು.

ಪೈರಸಿಯನ್ನು ಸಂಪೂರ್ಣವಾಗಿ ತಡೆಯಬೇಕು!
ಬರೀ ಸುದೀಪ್ ಸಿನಿಮಾಗಳು ಅಂತ ಅಲ್ಲ. 'ಪೈಲ್ವಾನ್','ವಿಕ್ರಾಂತ್ ರೋಣ' ಕೆಲ ಉದಾಹರಣೆಗಳಷ್ಟೆ. ಈಗ ರಿಲೀಸ್ ಆಗುವ ಎಲ್ಲಾ ಸಿನಿಮಾಗಳಿಗೂ ಪೈರಸಿ ಸಮಸ್ಯೆ ಮಾಮೂಲು. ಅದರಲ್ಲೂ ಸ್ಟಾರ್‌ಗಳ ಹೈ ಬಜೆಟ್ ಚಿತ್ರಗಳಿಗೆ ಪೈರಸಿ ಶಾಪವಾಗಿ ಪರಿಣಮಿಸಿದೆ. ಪ್ರೇಕ್ಷಕರು ಇಂತಹ ಪೈರಸಿ ಕಾಪಿಗಳನ್ನು ನೋಡುವುದು ನಿಲ್ಲಿಸಿದರೆ ಸಹಜವಾಗಿಯೇ ಪೈರಸಿ ಸಮಸ್ಯೆ ಕಮ್ಮಿ ಆಗುತ್ತದೆ. ಏನೇ ಪೈರಸಿ ಸಿನಿಮಾ ನೋಡಿದರೂ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ.

'ವಿಕ್ರಾಂತ್ ರೋಣ'ನಿಗೆ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ
ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ 'ವಿಕ್ರಾಂತ್ ರೋಣ' ಸಿನಿಮಾ ಕೊನೆಗೂ ತೆರೆಗಪ್ಳಳಿಸಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿದೆ. ಸುದೀಪ್ ಪರ್ಫಾರ್ಮೆನ್ಸ್, ಅನೂಪ್ ನಿರ್ದೇಶನ, ಸಿನಿಮಾಟೋಗ್ರಫಿ, ಗ್ರಾಫಿಕ್ಸ್ ಎಲ್ಲದರ ಬಗ್ಗೆಯೂ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರಕ್ಕೆ ಫಸ್ಟ್ ಡೇ ಸಿಗುತ್ತಿರುವ ರೆಸ್ಪಾನ್ಸ್ ನೋಡಿದ್ರೆ, ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸ್ತಿದೆ.


Click it and Unblock the Notifications











