ಅಬ್ಬಬ್ಬಾ.. 7 ನಿಮಿಷಗಳ 'ವಿಕ್ರಾಂತ್ ರೋಣ' ಕ್ಲೈಮ್ಯಾಕ್ಸ್‌ಗೆ 15 ದಿನ ಸರ್ಕಸ್
ಮೋಸ್ಟ್ ಎಕ್ಸ್‌ಪೆಕ್ಟೆಡ್ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆ. ಕಿಚ್ಚ ಸುದೀಪ್ ಅಂಡ್ ಟೀಂ ಕೊನೆ ಕ್ಷಣದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಹುಕೋಟಿ ವೆಚ್ಚದ ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರ್ ಡ್ರಾಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಸಿನಿಮಾ ಆಲ್ಬಂ ಸೂಪರ್ ಹಿಟ್ ಆಗಿದೆ. ಸಿನಿಮಾ ಟೀಸರ್, ಟ್ರೈಲರ್‌ಗೂ ಅತ್ಯತ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಪ್ರೇಕ್ಷಕರು ಕಾತರದಿಂದ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್‌ಗೆ ಸೆಲೆಬ್ರೇಷನ್ ಪ್ಲ್ಯಾನ್ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ, ಇಂಗ್ಲಿಷ್ ಸೇರಿದಂತೆ 6 ಭಾಷೆಗಳಲ್ಲಿ ಜುಲೈ 28ಕ್ಕೆ ತೆರೆಗಪ್ಪಳಿಸುತ್ತಿದೆ. 2D ಮಾತ್ರವಲ್ಲದೇ 3Dಯಲ್ಲೂ 'ವಿಕ್ರಾಂತ್ ರೋಣ' ಕಿಚ್ಚನ ಆರ್ಭಟ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಲೀಡ್ ರೋಲ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಫ್ಯಾಂಟಮ್ ಪ್ರಪಂಚಕ್ಕೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗಲು ಚಿತ್ರತಂಡ ಕಾಯ್ತಾ ಇದೆ. ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದು, ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತೆ 'ವಿಕ್ರಾಂತ್ ರೋಣ' ಸಿನಿಮಾ ಮೂಡಿಬಂದಿದೆ.
'ವಿಕ್ರಾಂತ್ ರೋಣ' ಚಿತ್ರದಲ್ಲಿ ಸುದೀಪ್ ರೋಲ್ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಪೊಲೀಸ್ ಆಫೀಸರ್ ರೋಲ್‌ನಲ್ಲಿ ನಟಿಸಿರೋ ಕಿಚ್ಚ ಗುಮ್ಮನಾಗಿಯೂ ಕಾಡೋಕೆ ಬರ್ತಿದ್ದಾರೆ. ಸದ್ಯ ಟ್ರೈಲರ್‌ನಲ್ಲಿ ಕಿಚ್ಚನ ಲುಕ್ಕು, ಖದರ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಜೊತೆಗೆ ಸಾಕಷ್ಟು ಇಂಟ್ರೆಸ್ಟಿಂಗ್ ಅಂಶಗಳು ಸಿನಿಮಾದಲ್ಲಿರೋದು ಗೊತ್ತಾಗ್ತಿದೆ. ಅದ್ರಲ್ಲೂ ಸಿನಿಮಾ ಕ್ಲೈಮ್ಯಾಕ್ಸ್ ಸಿಕ್ಕಾಪಟ್ಟೆ ಹೈಲೆಟ್ ಅಂತ ಚಿತ್ರತಂಡ ಹೇಳ್ತಾ ಬರ್ತಿದೆ. 7 ನಿಮಿಷಗಳ ಕ್ಲೈಮ್ಯಾಕ್ಸ್‌ಗಾಗಿ ಟೀಂ ಸತತ 15 ದಿನಗಳ ಕಾಲ ಕಸರತ್ತು ನಡೆಸಿದ ವಿಚಾರ ಈಗ ಬಹಿರಂಗವಾಗಿದೆ. ಈ ಬಗ್ಗೆ ಸಾಹಸ ನಿರ್ದೇಶಕ ವಿಜಯ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

7 ನಿಮಿಷಗಳ ಕ್ಲೈಮ್ಯಾಕ್ಸ್ ಒಂದೇ ಟೇಕ್
15 ದಿನಗಳ ಕಾಲ ನಿರಂತರ ತಯಾರಿಯ ನಂತರ ಚಿತ್ರತಂಡ ಒಂದೇ ಟೇಕ್‌ನಲ್ಲಿ 7 ನಿಮಿಷಗಳ ಕ್ಲೈಮ್ಯಾಕ್ಸ್ ಸೀಕ್ವೆನ್ಸ್ ಚಿತ್ರೀಕರಣ ಮಾಡಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದು, ಸಿಲ್ವರ್ ಸ್ಕ್ರೀನ್ ಮೇಲೆ 'ವಿಕ್ರಾಂತ್ ರೋಣ' ಕ್ಲೈಮ್ಯಾಕ್ಸ್ ಹೇಗಿರುತ್ತೋ ಅಂತ ಕಾತರದಿಂದ ಕಾಯುವಂತಾಗಿದೆ.

ಸಿನಿಮಾ ಕ್ಲೈಮ್ಯಾಕ್ಸ್ ಕುರಿತು ವಿಕ್ರಮ್ ಮೋರ್ ಹೇಳಿಕೆ!
'ವಿಕ್ರಾಂತ್ ರೋಣ' ಸಿನಿಮಾ ಕ್ಲೈಮ್ಯಾಕ್ ಚಿತ್ರೀಕರಣದ ಅನುಭವವನ್ನು ಬಿಚ್ಚಿಟ್ಟಿರುವ ವಿಕ್ರಮ್ ಮೋರ್, ಸುದೀಪ್ ವೃತ್ತಿಪರತೆಗೆ ಬಹುಪರಾಕ್ ಹೇಳಿದ್ದಾರೆ. 'ನಾನು ಭಾಗವಹಿಸಿದ ಬಹಳ ಚಾಲೆಂಜಿಂಗ್ ಚಿತ್ರೀಕರಣದ ಭಾಗ ಅದಾಗಿತ್ತು. ತಂಡದ ವಿಷನ್ ಮತ್ತು ದೃಢ ನಿರ್ಧಾರ ತಗೊಂಡು ಹೋದ ರೀತಿ ಶ್ಲಾಘನೀಯ. ಇನ್ನು ಸುದೀಪ್ ಸರ್ ಹಾಕಿದ ದೈಹಿಕ ಶ್ರಮ ಅಷ್ಟಿಷ್ಟಲ್ಲ. ಇಂತಹದ್ದು ಮತ್ತಷ್ಟು ಅವರಿಂದ ಸಾಧ್ಯವಾಗಬೇಕಿದೆ. ಸೂಪರ್ ಸ್ಟಾರ್‌ಗಳು ಇಷ್ಟರಮಟ್ಟಿಗೆ ನೈಜ ಅಭಿನಯಕ್ಕೆ ಮುಂದಾಗೋದು ಅಪರೂಪ. ಸದ್ಯ ಇರುವ ಅತ್ಯಂತ ವೃತ್ತಿಪರ ನಟರಲ್ಲಿ ಸುದೀಪ್ ಸರ್ ಕೂಡ ಒಬ್ಬರು.' ಎಂದು ವಿಕ್ರಮ್ ಮೋರ್ ಅಭಿಪ್ರಾಯಪಟ್ಟಿದ್ದಾರೆ.

ಕೊನೆಯ 20 ನಿಮಿಷ ಮಿಸ್ ಮಾಡಬೇಡಿ
ಕೆಲ ದಿನಗಳ ಹಿಂದೆ ನಟ ಕಿಚ್ಚ ಸುದೀಪ್ ಕೂಡ 'ವಿಕ್ರಾಂತ್ ರೋಣ' ಚಿತ್ರದ ಕೊನೆಯ 20 ನಿಮಿಷ ಮೈಂಡ್‌ಬ್ಲೋಯಿಂಗ್ ಅಂತ ಹೇಳಿದ್ದರು. ಸದ್ಯ ರಿಲೀಸ್ ಆಗಿರುವ 'ಗುಮ್ಮ ಬಂದ' ಸಾಂಗ್‌ನಲ್ಲಿರೋ ರೋಣನ ರಕ್ತಸಿಕ್ತ ಲುಕ್ ಕೂಡ ಕ್ಲೈಮ್ಯಾಕ್ಸ್‌ನಲ್ಲಿ ಬರಲಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಕ್ಲೈಮ್ಯಾಕ್ಸ್ ಇಡೀ ಚಿತ್ರದ ಜೀವಾಳ.

ಸುದೀಪ್ - ಅಪ್ಪು ಕಟೌಟ್ ನಿಲ್ಲಿಸಿ ಸೆಲೆಬ್ರೇಷನ್
ಸುದೀಪ್ ಅಭಿಮಾನಿಗಳು 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಸೆಲೆಬ್ರೇಷನ್ ವೇಳೆ ಪುನೀತ್ ರಾಜ್‌ಕುಮಾರ್‌ಗೂ ವಿಶೇಷವಾಗಿ ನಮನ ಸಲ್ಲಿಸಲು ತೀರ್ಮಾನಿಸಿದ್ದಾರೆ. ಕಿಚ್ಚ ಮತ್ತು ಅಪ್ಪು ಸ್ನೇಹದ ಬಗ್ಗೆ ಬಿಡಿಸಿ ಹೇಳೋದು ಬೇಕಾಗಿಲ್ಲ. 'ಪೈಲ್ವಾನ್' ಸಿನಿಮಾ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಇಬ್ಬರು ತಬ್ಬಿಕೊಂಡ ಪೋಸ್ ಕೊಟ್ಟಿದ್ದ ಫೋಟೊ ಸಖತ್ ವೈರಲ್ಲಾಗಿತ್ತು. ಅದೇ ಫೋಟೊವನ್ನು ಕಟೌಟ್ ಮಾಡಿ 4 ಥಿಯೇಟರ್‌ಗಳ ಅಂಗಳದಲ್ಲಿ ನಿಲ್ಲಿಸಲು ಅಭಿಮಾನಿಗಳು ತೀರ್ಮಾನಿಸಿದ್ದಾರೆ.


Click it and Unblock the Notifications











