ಮುಂಬೈ ಗಲ್ಲಿಗಳಲ್ಲೂ 'ವಿಕ್ರಾಂತ್ ರೋಣ'ನದ್ದೇ ಹವಾ
ನಟ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಈ ಸಿನಿಮಾದ ಕೆಲವು ಪೋಸ್ಟರ್‌ಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದ ಮೇಕೀಂಗ್, ಕತೆ, ನಿರೂಪಣೆ ಎಲ್ಲವೂ ಭಿನ್ನವಾಗಿರಲಿದೆ ಒಟ್ಟಾರೆಯಾಗಿ ಒಂದೊಳ್ಳೆಯ ಕುತೂಹಲಕಾರಿ ಸಿನಿಮಾ ಇದಾಗಿರಬಹುದೆಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಸಿನಿಮಾದ ಒಟ್ಟಾರೆ ಔಟ್‌ಕಮ್ ನಟ ಸುದೀಪ್‌ಗೆ ಬಹಳ ಹಿಡಿಸಿದೆ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕಾಗಿ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ಈಗಾಗಲೇ ನಿರ್ಧರಿಸಿದ್ದಾರೆ. ಸುದೀಪ್‌ರ ಅತ್ಯಾಪ್ತ ಜಾಕ್ ಮಂಜು ಅವರೇ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಕೋಟ್ಯಂತರ ಹಣ ಖರ್ಚು ಮಾಡಿರುವ ಚಿತ್ರತಂಡ ಇದೀಗ ಪ್ರಚಾರಕ್ಕಾಗಿ ಭಾರಿ ಮೊತ್ತವನ್ನು ವ್ಯಯಿಸುತ್ತಿದೆ. ಈ ಮೊದಲು ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಪೋಸ್ಟರ್ ಬಿಡುಗಡೆ ಮಾಡಿ ಅಬ್ಬರಿಸಿದ್ದ ಚಿತ್ರತಂಡ ಈಗ ಸಿನಿಮಾದ ಪೋಸ್ಟರ್‌ಗಳು ಮುಂಬೈನಲ್ಲೂ ರಾರಾಜಿಸುವಂತೆ ಮಾಡಿದೆ.

ಆರ್.ಚಂದ್ರು ಹಂಚಿಕೊಂಡಿರುವ ವಿಡಿಯೋ
ಮುಂಬೈನ ಹಲವೆಡೆ 'ವಿಕ್ರಾಂತ್ ರೋಣ' ಸಿನಿಮಾದ ದೊಡ್ಡ-ದೊಡ್ಡ ಹೋಲ್ಡಿಂಗ್ಸ್‌ಗಳನ್ನು ನಿಲ್ಲಿಸಲಾಗಿದೆ. ಮುಂಬೈಗೆ ತೆರಳಿದ್ದ ಕನ್ನಡ ನಿರ್ದೇಶಕ ಆರ್.ಚಂದ್ರು, ತಮಗೆ ರಸ್ತೆಯಲ್ಲಿ ಎದುರಾದ 'ವಿಕ್ರಾಂತ್ ರೋಣ' ಸಿನಿಮಾದ ದೊಡ್ಡ ಪೋಸ್ಟರ್‌ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ''ವಿಕ್ರಾಂತ ರೋಣ ಸಿನಿಮಾ ಮುಂಬೈನ ಬೀದಿಬೀದಿಗಳಲ್ಲೂ ಪ್ರಕಾಶಿಸುತ್ತಿದೆ. ಆಲ್ ದಿ ಬೆಸ್ಟ್ "ವಿಕ್ರಾಂತ ರೋಣ" ಎಂದು ಶುಭ ಹಾರೈಸಿದ್ದಾರೆ.

ಹಲವು ಹಿಂದಿ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ
ಮುಂಬೈನ ಬೀದಿಗಳಲ್ಲಿ ಹಾಕಲಾಗಿರುವ 'ವಿಕ್ರಾಂತ್ ರೋಣ' ಪೋಸ್ಟರ್‌ಗಳಲ್ಲಿ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರಗಳಿವೆ. ಜಾಕ್ವೆಲಿನ್ ಫರ್ನಾಂಡೀಸ್ ಹಿಂದಿ ಸಿನಿಮಾ ತಾರೆಯಾಗಿದ್ದು ಪರಿಚಿತವಾದ ಮುಖವನ್ನು ಮುಂಬೈನಲ್ಲಿ ಹಾಕಲಾದ ಪೋಸ್ಟರ್‌ಗಳಲ್ಲಿ ಬಳಸಿಕೊಂಡಿದೆ. ಸುದೀಪ್ ಸಹ ಮುಂಬೈ ಜನರಿಗೆ ಹೊಸಬರಲ್ಲ. ಈ ಹಿಂದೆ 'ರಣ್', 'ಫೂಂಕ್', 'ಫೂಂಕ್ 2' , 'ದಬಂಗ್ 3' ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರಕ್ತ ಚರಿತ್ರ' ಸೇರಿದಂತೆ ಸುದೀಪ್ ನಟನೆಯ ಹಲವು ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆ ಆಗಿವೆ.

ಹಲವು ನಟ-ನಟಿಯರು ಮುಖ್ಯ ಪಾತ್ರದಲ್ಲಿ
ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಹಾಡೊಂದರಲ್ಲಿ ನರ್ತಿಸಿದ್ದಾರೆ. ಜೊತೆಗೆ ನಿರುಪ್ ಭಂಡಾರಿ, ರವಿಶಂಕರ್, ನೀತಾ ಅಶೋಕ್, ಶ್ರದ್ಧಾ ಶ್ರೀನಾಥ್ ಇನ್ನೂ ಹಲವು ಪ್ರಮುಖ ನಟ-ನಟಿಯರು ನಟಿಸಿದ್ದಾರೆ. ಸಿನಿಮಾವನ್ನು 'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸುದೀಪ್ ಆಪ್ತ ಜಾಕ್ ಮಂಜು. ಸಿನಿಮಾವನ್ನು ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗುತ್ತದೆ.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ
'ವಿಕ್ರಾಂತ್ ರೋಣ' ಸಿನಿಮಾದ ಪೋಸ್ಟರ್‌ಗಳು ಈಗಾಗಲೇ ಬಹಳಷ್ಟು ಗಮನ ಸೆಳೆದಿವೆ. ಸಿನಿಮಾವು ಆಕ್ಷನ್ ಥ್ರಿಲ್ಲರ್ ಕತೆಯನ್ನು ಹೊಂದಿರಲಿದೆ. ಸಿನಿಮಾಕ್ಕೆ ಫ್ಯಾಂಟಮ್ ಎಂಬ ಹೆಸರನ್ನು ಈ ಮೊದಲು ಇಡಲಾಗಿತ್ತು. ಆದರೆ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದ ಬಳಿಕ ಹೆಸರು ಬದಲಿಸಿ 'ವಿಕ್ರಾಂತ್ ರೋಣ' ಎಂದಿಡಲಾಯ್ತು. 'ಫ್ಯಾಂಟಮ್' ಹೆಸರಿನ ಸಿನಿಮಾ ಈಗಾಗಲೇ ಹಿಂದಿ ಹಾಗೂ ಇತರ ಕೆಲವು ಭಾಷೆಗಳಲ್ಲಿ ಇರುವ ಕಾರಣ ಈ ನಿರ್ಧಾರವನ್ನು ಚಿತ್ರತಂಡ ಮಾಡಿತು.

'ಕೋಟಿಗೊಬ್ಬ 3' ಬಿಡುಗಡೆಗೆ ತಯಾರು
'ವಿಕ್ರಾಂತ್ ರೋಣ' ಚಿತ್ರತಂಡವು ಪ್ರಚಾರ ಕಾರ್ಯಕ್ಕೆ ಸಾಕಷ್ಟು ಹಣ ವ್ಯಯಿಸುತ್ತಿದೆ. ಚಿತ್ರೀಕರಣ ನಡೆಯುವ ವೇಳೆಯಲ್ಲಿಯೇ ಸಿನಿಮಾದ ಪೋಸ್ಟರ್ ಅನ್ನು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಬಿಡುಗಡೆ ಮಾಡಿತ್ತು. 'ವಿಕ್ರಾಂತ್ ರೋಣ' ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಸುದೀಪ್ ಉಪೇಂದ್ರ ಜೊತೆಗೆ 'ಕಬ್ಜ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಈಗಾಗಲೇ ನಟಿಸಿರುವ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇದೆ.


Click it and Unblock the Notifications











