ದೆಹಲಿಯಲ್ಲಿ ಸಂಸದರಿಗೆ 'ವಿಕ್ರಾಂತ್ ರೋಣ' ವಿಶೇಷ ಶೋ
ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಜುಲೈ 28 ರಂದು ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾದ ಟಿಕೆಟ್‌ಗಳು ಈಗಾಗಲೇ ಹಲವೆಡೆ ಮುಂಗಡವಾಗಿ ಬುಕ್ ಆಗಿದೆ.
ಸುದೀಪ್ ನಟನೆಯ ಸಿನಿಮಾದ ಮೊದಲ ದಿನದ ಟಿಕೆಟ್ ಧಕ್ಕುವುದು ಸುಲಭ ಸಾಧ್ಯವಲ್ಲ. ಆದರೆ ಕೆಲವು ಆಪ್ತರಿಗಾಗಿ, ವಿಶೇಷ ವ್ಯಕ್ತಿಗಳಿಗಾಗಿ ಇದೀಗ ಸುದೀಪ್ ತಮ್ಮ ಹೊಸ ಸಿನಿಮಾ 'ವಿಕ್ರಾಂತ್ ರೋಣ'ದ ವಿಶೇಷ ಶೋ ಆಯೋಜಿಸಿದ್ದಾರೆ.
'ವಿಕ್ರಾಂತ್ ರೋಣ' ಸಿನಿಮಾದ ವಿಶೇಷ ಶೋ ಅನ್ನು ದುಬೈನಲ್ಲಿ ಆಯೋಜಿಸಿದ್ದರು, ಅದಾದ ಬಳಿಕ ಇದೀಗ ದೆಹಲಿಯಲ್ಲಿಯೂ ಸಿನಿಮಾದ ವಿಶೇಷ ಶೋ ಆಯೋಜಿತವಾಗಿದೆ. ಕರ್ನಾಟಕದ ಸಂಸದರಿಗೆ, ಕೆಲವು ಉನ್ನತ ಅಧಿಕಾರಿಗಳಿಗೆಂದು ಸುದೀಪ್ 'ವಿಕ್ರಾಂತ್ ರೋಣ'ದ ವಿಶೇಷ ಆಯೋಜನೆ ಮಾಡಿದ್ದಾರೆ.

ಕರ್ನಾಟಕದಿಂದ ಆಯ್ಕೆಯಾದ ಸಂಸದರು ಮಾತ್ರವಲ್ಲದೆ ಇನ್ನೂ ಕೆಲವೇ ಜನಪ್ರಿಯ ಸಂಸದರು, ರಾಜ್ಯಸಭಾ ಸದಸ್ಯರು, ವಿಶೇಷ ಅಧಿಕಾರಿಗಳನ್ನು ಸುದೀಪ್ ಅವರು 'ವಿಕ್ರಾಂತ್ ರೋಣ' ಸಿನಿಮಾ ವೀಕ್ಷಿಸಲು ಆಹ್ವಾನಿಸಿದ್ದಾರೆ. ಪ್ರತಾಪ್ ಸಿಂಹ ಸೇರಿದಂತೆ ಹಲವು ಸಂಸದರು, ಸುದೀಪ್ ಅವರು ಕಳಿಸಿರುವ ಆಹ್ವಾನ ಪತ್ರಿಕೆಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸುದೀಪ್ ಆಯೋಜಿಸಿರುವ ಈ ವಿಶೇಷ ಪ್ರದರ್ಶನವು ಜುಲೈ 28 ರಂದು ರಾತ್ರಿ 8:15 ರಂದು ನವದೆಹಲಿಯ ಪಿವಿಆರ್ ಇಸಿಎಕ್ಸ್ ಚಾಣುಕ್ಯಪುರಿಯಲ್ಲಿ ನಡೆಯಲಿದೆ.
ನಟ ಸುದೀಪ್, 'ವಿಕ್ರಾಂತ್ ರೋಣ' ಸಿನಿಮಾದ ಪ್ರಚಾರಕ್ಕಾಗಿ ಹಲವು ದಿನ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿನ ಮಾಧ್ಯಮಗಳೊಟ್ಟಿಗೆ ಸಂದರ್ಶನಗಳನ್ನು ನೀಡಿದ್ದರು. ಈ ಸಂದರ್ಭದಲ್ಲಿ ಕರ್ನಾಟಕದ ಹಲವು ಸಂಸದರನ್ನು ದೆಹಲಿಯಲ್ಲಿ ಸುದೀಪ್ ಭೇಟಿಯಾಗಿದ್ದರು. ಪ್ರಹ್ಲಾದ್ ಜೋಶಿ ಸೇರಿದಂತೆ ಇನ್ನು ಕೆಲವರು ಸುದೀಪ್ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು.
'ವಿಕ್ರಾಂತ್ ರೋಣ' ಸಿನಿಮಾದ ವಿಶೇಷ ಶೋ ಇಂದು (ಜುಲೈ 27)ರಂದು ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ದುಬೈನಲ್ಲಿ ಹಲವು ಗಣ್ಯರು, ಸಿನಿಮಾ ಪ್ರೇಮಿಗಳಿಗಾಗಿ ಈ ಪ್ರೀಮಿಯರ್ ಶೋ ಅನ್ನು ಸುದೀಪ್ ಹಾಗೂ ಚಿತ್ರತಂಡ ಆಯೋಜಿಸಿತ್ತು. ಸ್ವತಃ ಸುದೀಪ್ ಈ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು.


Click it and Unblock the Notifications











