ಅಭಿಮಾನಿಗಳ ಗಮನ ಸೆಳೆಯುತ್ತಿದೆ 'ವಿಕ್ರಾಂತ್ ರೋಣ' ಗಣಪತಿ
ಇಂದು (ಸೆಪ್ಟಂಬರ್ 10) ದೇಶದಾದ್ಯಂತ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಕೊರೊನಾ ಹಾವಳಿಯಿಂದಾಗಿ ಗಣೇಶೋತ್ಸವದ ಸಂಭ್ರಮ, ಸಡಗರಕ್ಕೆ ಕೊಂಚ ಹಿನ್ನಡೆ ಆಗಿರಬಹುದು. ಆದರೆ ಜನರ ಉತ್ಸಾಹ ಕಮ್ಮಿ ಆಗಿಲ್ಲ. ಪ್ರತಿವರ್ಷದಂತೆ ಈ ವರ್ಷ ಕೂಡ ಗಣೇಶನ ಹಲವು ಬಗೆಯ ವಿಗ್ರಹಗಳು ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿವೆ.
ವಿಶೇಷ ಎಂದರೆ ಬಾರಿ ಗಣೇಶ ಹಬ್ಬಕ್ಕೆ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ಗೆಟಪ್‌ನ ಗಣಪತಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಕ್ರಾಂತ್ ರೋಣ ಗೆಟಪ್‌ನಲ್ಲಿರುವ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಕಿಚ್ಚನ ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಮಾಡಿದೆ. ಇದೀಗ ಸಿನಿಮಾ ಗೆಟಪ್‌ನ ಗಣೇಶನ ಮೂರ್ತಿಗಳು ಬಂದಿರುವುದು ಅಭಿಮಾನಿಗಳಿಗೆ ಎಷ್ಟು ಕ್ರೇಜ್ ಇದೆ ಎಂಬುದು ಗೊತ್ತಾಗುತ್ತಿದೆ.
ಈಗಾಗಲೇ ವಿಕ್ರಾಂತ್ ರೋಣನ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಸುದೀಪ್ ಹೇಗೆ ಪೋಸ್ ನೀಡಿದ್ದಾರೋ ಅದೇ ರೀತಿಯಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದ್ದು ವಿಶೇಷ. ಸಿನಿಮಾ ಗೆಟಪ್‌ಗಳಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುವುದು ಹೊಸದೇನಲ್ಲ. ಈ ಹಿಂದೆಯೂ ಅಂಥ ನಾನಾತರಹದ ಗಣಪತಿಗಳನ್ನು ತಯಾರಿಸಿದ ಉದಾಹರಣೆಗಳಿವೆ.

ಈ ಬಾರಿ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಚಿತ್ರದ ಗಣಪ ಬಂದಿರುವುದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕಲಾವಿದ ಯಶವಂತ ಅವರ ಕೈಚಳಕದಲ್ಲಿ ಈ ಮೂರ್ತಿಗಳು ಮೂಡಿಬಂದಿವೆ. ಇದಲ್ಲದೇ ಇನ್ನೂ ಅನೇಕ ಬಗೆಯ ಮೂರ್ತಿಗಳನ್ನು ತಯಾರಿಸಲಾಗಿದೆ. ಕೊರೊನಾ ಲಸಿಕೆ ಹೊತ್ತ ಗಣಪ, ಬಾಡಿ ಬಿಲ್ಡರ್ ಗಣಪ, ಬೈಕ್ ಸವಾರಿ ಮಾಡುತ್ತಿರುವ ಗಣಪ ಸೇರಿದಂತೆ ತರಹೇವಾರಿ ಗೆಟಪ್‌ಗಳಲ್ಲಿ ಗಣೇಶನ ಮೂರ್ತಿಗಳು ಕಂಗೊಳಿಸುತ್ತಿವೆ.
ಅಂದಹಾಗೆ ಈಗಾಗಲೇ 'ವಿಕ್ರಾಂತ್ ರೋಣ' ಭಾರಿ ನಿರೀಕ್ಷೆ ಹುಟ್ಟುಹಾಕಿದ ಸಿನಿಮಾವಾಗಿದೆ. ಇತ್ತೀಚಿಗಷ್ಟೆ ಅಂದರೆ ಸುದೀಪ್ ಹುಟ್ಟುಹಬ್ಬದ ದಿನ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಕ್ರಾಂತ್ ರೋಣ ಪ್ಯಾನ್ ಮಟ್ಟದಲ್ಲಿ ತಯಾರಾಗುತ್ತಿದ್ದು, ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲೂ ಈ ಚಿತ್ರ ರಿಲೀಸ್ ಆಗಲಿದೆ.
ಡಿಫರೆಂಟ್ ಗೆಟಪ್ನಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಆರಂಭದಿಂದಲೂ ಸಿನಿಮಾದ ಬಗ್ಗೆ ವಿಭಿನ್ನ, ವಿನೂತನ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಟೈಟಲ್ ಲಾಂಚ್ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿತ್ತು. ಅಂದಹಾಗೆ ವಿಕ್ರಾಂತ್ ರೋಣ ಚಿತ್ರಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಚಿತ್ರದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಜಾಕ್ವೆಲಿನ್ ಮೊದಲು ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಈಗಾಗಲೇ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣ ಯಾವಾಗ ತೆರೆಮೇಲೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











