'ಕಾಟೇರ' ಚಿತ್ರಕ್ಕಾಗಿ 70ರ ದಶಕದ ಹಳ್ಳಿ ಸೆಟ್ ನಿರ್ಮಾಣ.. ಶೂಟಿಂಗ್ ಜೋರು: ಮೇಕಿಂಗ್ ಹಂತದಲ್ಲೇ 'ಕಾಟೇರ' ಕಾರುಬಾರು
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಹೊಸ ಶೆಡ್ಯೂಲ್ ಮತ್ತೆ ಶುರುವಾಗ್ತಿದೆ. ಇದೀಗ ಬೆಂಗಳೂರು, ಮೈಸೂರಿನಲ್ಲಿ ಸತತ 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕಾಗಿ ಹಳ್ಳಿ ಸೆಟ್ ನಿರ್ಮಾಣ ಮಾಡಿದ್ದು 70ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸುತ್ತಿದೆ. ಸದ್ಯ ಚಿತ್ರದ ಸೆಟ್‌ನ ಕೆಲ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
70ರ ದಶಕದಲ್ಲಿ ಹಂಪಿಯಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕ ತರುಣ್ ಸುಧೀರ್ ಹಾಗೂ ಜಡೇಶ್ ಹಂಪಿ ಕಥೆ ಮಾಡಿದ್ದಾರೆ. ತುಳಿತಕ್ಕ ಒಳಗಾದವರ ಪರ ನಿಲ್ಲುವ ನಾಯಕ 'ಕಾಟೇರ'ನಾಗಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ. ಮೊದಲ ಬಾರಿಗೆ ದರ್ಶನ್ ಬಹಳ ವಿಭಿನ್ನವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲುಂಗಿ ಉಟ್ಟು, ಮಚ್ಚು ಹಿಡಿದು ಬರ್ತಿದ್ದಾರೆ.

'ರಾಬರ್ಟ್' ಸಿನಿಮಾ ಮಾಡಿದ್ದ ತಂಡವೇ 'ಕಾಟೇರ' ಚಿತ್ರಕ್ಕಾಗಿ ಮತ್ತೆ ಜೊತೆಯಾಗಿದೆ. 'ಕ್ರಾಂತಿ' ನಂತರ 'ಕಾಟೇರ'ನಾಗಿ ಡಿ ಬಾಸ್‌ನ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು ತೆಲುಗು ನಟ ಜಗಪತಿ ಬಾಬು ಮುಖ್ಯವಾದ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಸ್ಟುಡಿಯೋದಲ್ಲಿ ಮೊದಲು ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ನಂತರ ಹೈದರಾಬಾದ್ ಹಾಗೂ ಕನಕಪುರದಲ್ಲಿ ಒಂದಷ್ಟು ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿತ್ತು.

ರವಿಶಂಕರ್ ಗುರೂಜಿ ಆಶ್ರಮದ ಬಳಿ ಹಳ್ಳಿ ಸೆಟ್ ನಿರ್ಮಿಸಿ ಚಿತ್ರದ ಕ್ರೂಷಿಯಲ್ ಸನ್ನಿವೇಶಗಳ ಚಿತ್ರೀಕರಣ ನಡೆಸಲಾಗುತ್ತಿದೆ. ಆರ್ಟ್ ಡೈರೆಕ್ಟರ್ ಗುಣ ಅಂಡ್ ಟೀಂ ಚಿತ್ರಕ್ಕಾಗಿ 50 ವರ್ಷಗಳ ಹಿಂದೆ ಇದ್ದಂತಹ ಹಳ್ಳಿಯ ಸೆಟ್ ಅನ್ನು ನಿರ್ಮಿಸಿದ್ದಾರೆ. ಅಲ್ಲೇ ಸದ್ದಿಲ್ಲದೇ 'ಕಾಟೇರ' ಸಿನಿಮಾ ಚಿತ್ರೀಕರಣ ನಡೀತಿದೆ. ಗುಡಿಸಲು, ಹಂಚಿನ ಮನೆಗಳು, ಹಳ್ಳಿಯ ಬೀದಿಗಳು, ಸೇದು ಬಾವಿ ಹೀಗೆ ನಿಜವಾಗಿಯೂ ಹಳ್ಳಿಗೆ ಹೋದಂತಹ ಅನುಭವ ಆ ಸೆಟ್ ನೀಡುತ್ತಿದೆ. ಇದೇ ಸೆಟ್‌ನಲ್ಲಿ ಚಿತ್ರೀಕರಣ ನಡೆಸಲಾಗ್ತಿದೆ.
ಬ್ಲಾಕ್ ಬ್ಲಾಕ್ ಆಗಿ 'ಕಾಟೇರ' ಚಿತ್ರದ ಚಿತ್ರೀಕರಣವನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಹಳ್ಳಿಯ ಜನರಂತೆ ಸಾಕಷ್ಟು ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಸಿನಿಮಾ ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಅವರ ವೇಷ ಭೂಷಣ, ಬಾಡಿ ಲಾಂಗ್ವೇಜ್ ಎಲ್ಲವೂ 50 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಲಿದೆ. ಬರೀ ಸೆಟ್ ನೋಡುತ್ತಿದ್ದರೆ ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲ ಮೂಡುತ್ತದೆ. ತರುಣ್ ಅಂಡ್ ಟೀಂ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡು ಸಿನಿಮಾ ಚಿತ್ರೀಕರಣಕ್ಕೆ ಇಳಿದಿರೋದು ಗೊತ್ತಾಗುತ್ತಿದೆ.
'ಕಾಟೇರ' ಚಿತ್ರವನ್ನು ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಸೆರೆಹಿಡಿಯುತ್ತಿದ್ದು ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಕೆ. ಎಂ ಪ್ರಕಾಶ್ ಸಂಕಲನ ಹಾಗೂ ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಈಗಾಗಲೇ ಚಿತ್ರದ 40% ಚಿತ್ರೀಕರಣ ಪೂರ್ಣಗೊಂಡಿದ್ದು ನಾಯಕ, ನಾಯಕಿಯರ ಲುಕ್ ರಿವೀಲ್ ಆಗಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಟೈಟಲ್ ಸಮೇತ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಯುಗಾದಿ ಹಬ್ಬದ ಸಂಭ್ರಮದಲ್ಲಿ ನಾಯಕಿ ಪ್ರಭಾವತಿಯ ದರ್ಶನ ಫಸ್ಟ್ ಲುಕ್ ರಿವೀಲ್ ಆಗಿತ್ತು.
ದರ್ಶನ್ ಜೊತೆಗೆ ರಾಕ್‌ಲೈನ್ ವೆಂಕಟೇಶ್ ರಾಜಾ ವೀರ ಮದಕರಿ ಸಿನಿಮಾ ಆರಂಭಿಸಿದ್ದರು. ಆದರೆ ಕೊರೊನಾ ಹಾವಳಿಯಿಂದ ಚಿತ್ರಕ್ಕೆ ಹಿನ್ನಡೆಯಾಗಿತ್ತು. ಹಾಗಾಗಿ ಆ ಸಿನಿಮಾ ಬದ್ಲು 'D56' ಸಿನಿಮಾ ಶುರು ಮಾಡಿದ್ದರು. ಆ ಚಿತ್ರದಲ್ಲಿ 'ಕಾಟೇರ' ಟೈಟಲ್ ಫೈನಲ್ ಆಗಿದ್ದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ದೀಪಾಳಿ ಹಬ್ಬದ ಸಂಭ್ರಮದಲ್ಲಿ ತೆರೆಮೇಲೆ 'ಕಾಟೇರ'ನ ಆರ್ಭಟ ಶುರುವಾಗುವ ಸಾಧ್ಯತೆಯಿದೆ.


Click it and Unblock the Notifications











