ಇಬ್ಬರು ನಾಯಕಿಯರೊಂದಿಗೆ 'ಒಂದು ಸರಳ ವಿರಳ ಪ್ರೇಮಕಥೆ'ಯಲ್ಲಿ ವಿನಯ್ ರಾಜ್‌ಕುಮಾರ್!
ಸಿಂಪಲ್ ಸುನಿ ನಿರ್ದೇಶನ ಅಂದ್ರೆ, ಆ ಸಿನಿಮಾದಲ್ಲಿ ಒಂದು ಕಾಮಿಡಿ ಫಿಕ್ಸ್. ಇಲ್ಲಾ ರೊಮ್ಯಾಂಟಿಕ್ ಲವ್‌ಸ್ಟೋರಿ ಗ್ಯಾರಂಟಿ. ಈ ಬಾರಿ ರೊಮ್ಯಾಂಟಿಕ್ ಕಾಮಿಡಿ ಕಥೆಯೊಂದಿಗೆ 'ಒಂದು ಸರಳ ಪ್ರೇಮಕಥೆ'ಯನ್ನು ಹೇಳುವುದಕ್ಕೆ ಹೊರಟಿದ್ದಾರೆ.
ಈ ಬಾರಿ ಸಿಂಪಲ್ ಸುನಿಗೆ ಜೊತೆಯಾಗಿರೋದು ವಿನಯ್ ರಾಜ್‌ಕುಮಾರ್. ಕಮಲ್ ಹಾಸನ್ ಅಭಿನಯದ 'ವಿಕ್ರಮ್' ಸಿನಿಮಾ ನಟಿ ಸ್ವಾತಿಷ್ಠ ಕೃಷ್ಣನ್ ಹಾಗೂ 'ರಾಧಾ ಕೃಷ್ಣ' ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಜೋಡಿಯಾಗಿ ನಟಿಸುತ್ತಿದ್ದಾರೆ. ಸ್ವಾತಿಷ್ಠ ಕೃಷ್ಣನ್ ಕನ್ನಡದ ನಟಿಯೇ ಅನ್ನೋದು ಇನ್ನೊಂದು ವಿಶೇಷ.

'ಒಂದು ಸರಳ ಪ್ರೇಮಕಥೆ' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮೈಸೂರಿನಲ್ಲಿ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ.
"ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ನನಗೆ ಮೊದಲಿನಿಂದಲೂ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ತುಂಬಾ ಇಷ್ಟ. ಜೊತೆಗೆ ಸುನಿ ಅವರ ನಿರ್ದೇಶನದ ಶೈಲಿ ಕೂಡ ತುಂಬಾ ಇಷ್ಟ. ಸುನಿ ಅವರು ಈ ಸಿನಿಮಾ ಕಥೆ ಹೇಳಲು ಬಂದಾಗ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು. ಈ ಚಿತ್ರದಲ್ಲಿ ಅತಿಶಯ್ ಅನ್ನೋ ಪಾತ್ರದಲ್ಲಿ ನಟಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತೆ ಇದು ಸಿನಿಮಾದ ಒಂದು ಎಳೆ" ಎಂದು ವಿನಯ್ ರಾಜ್‌ಕುಮಾರ್ ಮಾಹಿತಿ ನೀಡಿದ್ದಾರೆ.
"ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಗೆ ಇಟ್ಟ ಮೊದಲ ಟೈಟಲ್ ಒಂದು ಸರಳ ಪ್ರೇಮಕಥೆ'. ಯಾವುದಾದರೂ ಸಿನಿಮಾಗೆ ಈ ಟೈಟಲ್ ಇಡೋಣ ಎಂದು ಹತ್ತು ವರ್ಷದಿಂದ ಟೈಟಲ್ ರಿನಿವಲ್ ಮಾಡಿಕೊಂಡು ಬಂದಿದ್ದೆ. ಈ ಚಿತ್ರದ ಕಥೆ ಕೇಳಿ ವಿನಯ್ ರಾಜ್ ಕುಮಾರ್ ಒಕೆ ಮಾಡಿದ್ರು, ಚಿತ್ರಕ್ಕೆ ಪ್ರಸನ್ನ ಅವರು ಕಥೆ ಬರೆದಿದ್ದಾರೆ. ಜನವರಿ 23ರಂದು ಸಿನಿಮಾ ಮುಹೂರ್ತ ಆಗಿತ್ತು, ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ಶೇಕಡಾ 50ರಷ್ಟು ಚಿತ್ರೀಕರಣ ಮುಗಿದಿದೆ" ಎನ್ನುತ್ತಾರೆ ವಿನಯ್ ರಾಜ್‌ಕುಮಾರ್.
ಮಲ್ಲಿಕಾ ಸಿಂಗ್,ಸ್ವಾತಿಷ್ಠ ಕೃಷ್ಣನ್ ಜೊತೆ ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ನಟಿಸಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











