ಗ್ರಾಮಾಯಣ, ಸಿಟಿ ಲೈಟ್ಸ್ ನಂತರ ವಿನಯ್ ರಾಜ್ ಕುಮಾರ್ ಮುಂದಿನ ಚಿತ್ರ ಯಾವುದು ?
ಮೊದಲಿಂದ ತಾವೊಬ್ಬ ಕ್ಲಾಸ್ ಆಕ್ಟರ್ ಎನ್ನುವುದನ್ನು ರುಜುವಾತು ಮಾಡುತ್ತಾ ಬಂದವರು ವಿನಯ್ ರಾಜ್ ಕುಮಾರ್. ನಿಜಾ, ವಿನಯ್ ಅಭಿನಯದ ಮೊದಲ ಸಿನಿಮಾ ಸಿದ್ಧಾರ್ಥ ಆ ನಂತರ ಬಂದ ರನ್ ಆಂಟನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಟೆನ್ ವಿನಯ್‌ಗೆ ಬೇಕಿದ್ದ ಗೆಲುವುನ್ನು ತಂದು ಕೊಡಲಿಲ್ಲ. ಆದರೆ, ಈ ಚಿತ್ರಗಳ ಮೂಲಕ ವಿನಯ್ ರಾಜ್ ಕುಮಾರ್ ಅವರಲ್ಲೊಬ್ಬ ಕಲಾವಿದ ಇದ್ಧಾನೆ ಎನ್ನುವುದು ಬೆಳಕಿಗೆ ಬಂದಿತ್ತು. ಎಲ್ಲರಂತೆ ವಿನಯ್ ರಾಜ್ ಕುಮಾರ್ ಕಮರ್ಷಿಯಲ್ ಸಿದ್ಧ ಸೂತ್ರಕ್ಕೆ ಜೋತು ಬೀಳುವವರಲ್ಲ ಎಂಬ ವಿಚಾರ ಕೂಡ ಗೊತ್ತಾಗಿತ್ತು.
ಮುಂದುವರೆದು ಅನಂತು ವರ್ಸಸ್ ನುಸ್ರತ್, ಒಂದು ಸರಳ ಪ್ರೇಮ ಕಥೆ ಅಂತಹ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳಿಯುವುದಲ್ಲದೇ ತಮ್ಮ ಅಭಿನಯದಿಂದ ಅನೇಕರ ಹೃದಯವನ್ನು ಗೆದ್ದ ವಿನಯ್ ರಾಜ್ ಕುಮಾರ್ ತೀರಾ ಇತ್ತೀಚಿಗೆ ಪೆಪೆ ಚಿತ್ರದಲ್ಲಿ ತಮ್ಮ ಅಭಿನಯದಿಂದ ಎಲ್ಲರನ್ನು ಬೆಕ್ಕಸ ಬೆರಗಾಗಿಸಿದ್ದರು.

ಇಂಥಾ ವಿನಯ್ ರಾಜ್ ಕುಮಾರ್ ಸದ್ಯ ಗ್ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ದುನಿಯಾ ವಿಜಯ್ ನಿರ್ದೇಶನದ ಸಿಟಿ ಲೈಟ್ಸ್ ಕೂಡ ಈ ದೊಡ್ಮನೆಯ ಕುಡಿಯ ಕೈಯಲ್ಲಿದೆ. ಇದರ ನಡುವೆ ವಿನಯ್ ರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಸುದ್ದಿ ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಆ ಪ್ರಕಾರ ನೋಡುವುದಾದರೆ ಈ ಚಿತ್ರವನ್ನು ಬಿಎಸ್‌ಪಿ ವರ್ಮಾ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಮರ್ಫಿ ಚಿತ್ರದ ಮೂಲಕ ಎಲ್ಲರ ಗಮನವನ್ನು ಸೆಳೆದು, ಓಟಿಟಿಯಲ್ಲಿ ಚಿತ್ರ ಬಿಡುಗಡೆಗೊಂಡ ನಂತರ ಆನ್‌ಲೈನ್‌ನಲ್ಲಿ ಸದ್ಯ ಚರ್ಚೆಯಲ್ಲಿರುವ ಬಿಎಸ್‌ಪಿ ವರ್ಮಾಅವರ ಜೊತೆ ವಿನಯ್ ರಾಜ್ ಕುಮಾರ್ ಈಗಾಗಲೇ ಮಾತುಕಥೆಯನ್ನು ನಡೆಸಿದ್ದಾರೆ. ಶೀಘ್ರದಲ್ಲಿಯೇ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಣೆಯನ್ನು ಮಾಡಲಿದ್ದಾರೆ.
ಇನ್ನು ಸದ್ಯ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಚಿತ್ರ ಸಂಪೂರ್ಣ ಕಮರ್ಷಿಯಲ್ ಚಿತ್ರವಾಗಿದ್ದು, ವಿನಯ್ ರಾಜ್‌ಕುಮಾರ್ ಈ ಪಾತ್ರಕ್ಕೆ ತುಂಬಾನೇ ಸೂಕ್ತವಾಗಿರಲಿದ್ದಾರೆ. ವಿನಯ್ ವೃತ್ತಿ ಬದುಕಿನಲ್ಲಿಯೇ ಇಲ್ಲಿಯವರೆಗೆ ವಿನಯ್ ರಾಜ್ ಕುಮಾರ್ ಈ ರೀತಿಯ ಪಾತ್ರವನ್ನು ನಿರ್ವಹಿಸಿಲ್ಲ ಎನ್ನುವ ಮಾತು ಕೂಡ ಸದ್ಯ ಗಾಂಧಿನಗರದಲ್ಲಿ ಗುಲ್ಲಾಗಿದೆ. ಸದ್ಯ ಈ ಚಿತ್ರ ಪ್ರೀ -ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರದ ಕಥೆ-ಚಿತ್ರಕಥೆಯನ್ನು ತಿದ್ದಿ ತೀಡುವ ಕೆಲಸವನ್ನು ನಿರ್ದೇಶಕರಾದ ಬಿಎಸ್‌ಪಿ ವರ್ಮಾ ಮಾಡುತ್ತಿದ್ಧಾರೆ. ಮತ್ತೊಂದು ಕಡೆ ನಾಯಕಿಯ ಹುಡುಕಾಟವನ್ನು ಕೂಡ ನಡೆಸಿದ್ದಾರೆ. ಇನ್ನು ಚಿತ್ರದ ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದಕ್ಕೆ ಸದ್ಯ ಉತ್ತರ ಇಲ್ಲ.
ಇನ್ನುಳಿದಂತೆ ವಿನಯ್ ರಾಜ್ ಕುಮಾರ್ ಸದ್ಯ ಸಿಟಿ ಲೈಟ್ಸ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಲಗ ವಿಜಯ್ ಕುಮಾರ್ ನಿರ್ದೇಶನದ ಈ ಮೂರನೇ ಚಿತ್ರದಲ್ಲಿ ವಿಜಿ ಅವರ ದ್ವೀತಿಯ ಪುತ್ರಿ ಮೋನಿಷಾ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಮತ್ತೊಂದು ಕಡೆ ಗ್ರಾಮಾಯಣ ಚಿತ್ರದಲ್ಲಿ ಕೂಡ ವಿನಯ್ ರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ. ಸಂಪೂರ್ಣ ಗ್ರಾಮದಲ್ಲೇ ನಡೆಯುವ ಗ್ರಾಮಾಯಣ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಕೆ.ಪಿ.ಶ್ರೀಕಾಂತ್ ಅವರ ಜೊತೆ ಸೇರಿ ಮನೋಹರನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ನಿರೂಪಕಿ ಅಪರ್ಣ, ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಚಿತ್ರದಲ್ಲಿದ್ದಾರೆ.


Click it and Unblock the Notifications











