"ಚಿಕ್ಕಪ್ಪನ ಅಗಲಿಕೆ ಬಳಿಕ ನಮ್ ಏರಿಯಾದಲ್ಲಿ ಹುಡುಗ್ರು ಗಣೇಶ ಕೂರಿಸ್ತಿಲ್ಲ"; ವಿನಯ್
ನಾಡಿನೆಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಮನೆಗಳಲ್ಲಿ ಮಾತ್ರವಲ್ಲ ಬೀದಿ ಬೀದಿಗಳಲ್ಲಿ ಯುವಕರು, ಮಕ್ಕಳು ವಿಘ್ನ ವಿನಾಶಕನನ್ನು ಕೂರಿಸಿ, ಪೂಜೆ ಮಾಡಿ ಸಂಭ್ರಮಿಸುತ್ತಿದ್ದಾರೆ. ದೊಡ್ಮನೆಯಲ್ಲಿ ಕೂಡ ಗಣೇಶ ಹಬ್ಬದ ಸಂಭ್ರಮ ಜೋರಾಗಿರುತ್ತದೆ. ಅಣ್ಣಾವ್ರಿಗೆ, ಅಪ್ಪುಗೂ ಗಣೇಶ ಅಂದ್ರೆ ಅಚ್ಚುಮೆಚ್ಚು. ಈ ಬಗ್ಗೆ ವಿನಯ್ ರಾಜ್‌ಕುಮಾರ್ ಮಾತನಾಡಿದ್ದಾರೆ.
ಕೀರ್ತಿ ಕೃಷ್ಣ ನಿರ್ದೇಶನದ 'ಅಂದೊಂದಿತ್ತು ಕಾಲ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ರಾಜ್‌ಕುಮಾರ್ ಜೊತೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಪ್ರಚಾರ ಜೋರಾಗಿದೆ. ಹಬ್ಬದ ಸಂಭ್ರಮದಲ್ಲೇ ಚಿತ್ರದ ಹೊಸ್ ಹಾಡು ಬಿಡುಗಡೆಯಾಗಿದೆ. ತಾಯಿ, ಮಗನ ಬಾಂಧವ್ಯ ಸಾರುವ ಹಾಡಿದು. ನಿರ್ಮಾಪಕ ಸುರೇಶ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ವಾರವೇ ಸಿನಿಮಾ ತೆರೆಗೆ ಬರ್ತಿದೆ. ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಪುನೀತ್ ಮುಖ್ಯ ಅತಿಥಿಯಾಗಿ ಭಾಗಿ ಆಗಿ ಕ್ಲಾಪ್ ಮಾಡಿ ಶುಭ ಕೋರಿದ್ದರು.

ಸಿನಿಮಾ ಬಿಡುಗಡೆ ಹೊಸ್ತಿಲ್ಲಿ ವಿನಯ್ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾರೆ. ಟಿವಿ9 ಸಂದರ್ಶನದಲ್ಲಿ ಮಾತನಾಡಿ ತಮ್ಮ ಮನೆಯ ಗಣೇಶ ಹಬ್ಬದ ಬಗ್ಗೆ ಹಂಚಿಕೊಂಡಿದ್ದಾರೆ. ತಮ್ಮ ಮನೆಯ ಗೇಟ್ ಬಳಿ ಇರುವ ಪುಟ್ಟ ಗಣಪತಿ ಮೂರ್ತಿ, ಅದಕ್ಕೆ ಅಣ್ಣಾವ್ರ, ಅಪ್ಪು ಪ್ರತಿದಿನ ನಮಿಸುತ್ತಿದ್ದ ಸಂಗತಿಯನ್ನು ಹೇಳಿದ್ದಾರೆ. ಚಿಕ್ಕಪ್ಪ(ಪುನೀತ್ ರಾಜ್‌ಕುಮಾರ್) ಅಗಲಿಕೆ ಬಳಿಕ ನಮ್ಮ ಏರಿಯಾದಲ್ಲಿ ಗಣೇಶ ಉತ್ಸವ ಮಾಡ್ತಿಲ್ಲ ಎಂದು ವಿಜಯ್ ಬೇಸರ ಹೊರ ಹಾಕಿದ್ದಾರೆ.
ಸದಾಶಿವ ನಗರದಲ್ಲಿ ಕೂಡ ಗಣೇಶ ಹಬ್ಬದ ಸಂಭ್ರಮ ಜೋರಾಗಿ ಇರುತ್ತದೆ. ಸದಾಶಿವನಗರ ಫ್ರೆಂಡ್ಸ್ ಅಸೋಸಿಯೇಶನ್ ಹುಡುಗರು ಸೇರಿ ಪ್ರತಿ ವರ್ಷ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸುತ್ತಾ ಬರ್ತಿದ್ದರು. ಆ ಉತ್ಸವಕ್ಕೆ ದೊಡ್ಮನೆ ಸದಸ್ಯರು ಹೋಗಿ ಬರುತ್ತಿದ್ದರು. ಉತ್ಸವದ ಕೊನೆಯ ದಿನ ಅಂದರೆ ಗಣೇಶ ವಿಸರ್ಜನೆ ಸಮಯದಲ್ಲಿ ಏರಿಯಾದಲ್ಲಿ ಮೆರವಣಿಗೆ ಇರುತ್ತಿತ್ತು. ರಾಘಣ್ಣ, ಅಪ್ಪು ಮನೆ ಮುಂದೆಯೂ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಮನೆ ಮಂದಿ ಪೂಜೆ ಸಲ್ಲಿಸುತ್ತಿದ್ದರು. ಹುಡುಗರ ಜೊತೆ ಸೇರಿ ಪುನೀತ್ ಕೂಡ ಬಿಂದಾಸ್ ಹೆಜ್ಜೆ ಹಾಕುತ್ತಿದ್ದರು.
2019ರಲ್ಲಿ ಹೀಗೆ ಅಪ್ಪು ಮನೆ ಮುಂದೆ ಗಣೇಶ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡಿದ್ದ ವೀಡಿಯೋ ಸಖತ್ ವೈರಲ್ ಆಗಿತ್ತು. ಈ ಬಗ್ಗೆ ಕೂಡ ವಿನಯ್ ರಾಜ್‌ಕುಮಾರ್ ಮಾತನಾಡಿದ್ದಾರೆ. "ಚಿಕ್ಕಂದಿನಲ್ಲಿ ಚಿಕ್ಕಪ್ಪ ಕೂಡ ಏರಿಯಾ ಹುಡುಗರ ಜೊತೆ ಸೇರಿ ಗಣೇಶ ಕೂರಿಸಿ ಸಂಭ್ರಮಿಸುತ್ತಿದ್ದರಂತೆ. ನಾನು ಅದನ್ನು ಕೇಳಿದ್ದೀನಿ ನೋಡಿಲ್ಲ. ನಮ್ಮ ಏರಿಯಾ ಹುಡುಗರೆಲ್ಲಾ ಸೇರಿ ಗಣೇಶ ಕೂರಿಸ್ತಾರೆ. ವಿಸರ್ಜನೆಗೂ ಮುಂಚೆ ಮನೆ ಮುಂದೆ ಮೆರವಣಿಗೆ ಬರುತ್ತಿತ್ತು. ಆಗ ಡ್ಯಾನ್ಸ್ ಮಾಡುತ್ತಿದ್ದೆವು. ಚಿಕ್ಕಪ್ಪ ಅಗಲಿಕೆ ಬಳಿಕ ಹುಡುಗರು ಗಣೇಶ ಕೂರಿಸುವುದು ನಿಲ್ಲಿಸಿದ್ದಾರೆ" ಎಂದು ವಿನಯ್ ಹೇಳಿದ್ದಾರೆ.
ತಮ್ಮ ಮನೆಯಲ್ಲಿ ಹಬ್ಬ ಆಚರಣೆ ಹೇಗಿರುತ್ತದೆ ಎಂದು ವಿನಯ್ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ. "ಗಣೇಶ ಹಬ್ಬ ಅಂದ್ರೆ ಮನೆಯಲ್ಲಿ ಸಂಭ್ರಮ ಜೋರು. ಕುಟುಂಬ ಸದಸ್ಯರು, ನೆಂಟರು ಎಲ್ಲಾ ಒಂದೆಡೆ ಸೇರಿ ಹಬ್ಬ ಆಚರಿಸಿ, ಹಬ್ಬದ ಊಟ ಮಾಡಿ, ಹಳೇ ನೆನಪುಗಳನ್ನು ಮೆಲುಕು ಹಾಕುತ್ತೇವೆ. ಪ್ರತಿವರ್ಷ ಗೌರಿ ಹಬ್ಬದ ದಿನವೇ ಗೌರಿ, ಗಣೇಶ ಮೂರ್ತಿಗಳನ್ನು ಮನೆಗೆ ತರ್ತೀವಿ. ಒಂದು ದಿನ ಪೂಜಿಸಿ ನೀರಿನಲ್ಲಿ ವಿಸರ್ಜನೆ ಮಾಡುತ್ತೇವೆ" ಎಂದಿದ್ದಾರೆ.


Click it and Unblock the Notifications











