Pepe Release Date: 'ಭೀಮ'ನ ಆರ್ಭಟದ ಬೆನ್ನಲ್ಲೇ 'ಪೆಪೆ' ರಿಲೀಸ್ ಡೇಟ್ ಘೋಷಣೆ
ಸೋತು ಸುಣ್ಣವಾಗಿದ್ದ ಕನ್ನಡ ಚಿತ್ರರಂಗಕ್ಕೆ 'ಭೀಮ'ನಿಂದ ಬಲ ಸಿಕ್ಕಂತಾಗಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಕಳೆದ ವಾರ ತೆರೆಕಂಡಿತ್ತು. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ಸಿನಿಮಾ ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ 'ಪೆಪೆ' ರಿಲೀಸ್ ಡೇಟ್ ಘೋಷಣೆ ಆಗಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಪೆಪೆ' ಕೂಡ ಒಂದು. ವಿನಯ್ ರಾಜ್‌ಕುಮಾರ್ ನಟನೆಯ ಗ್ಯಾಂಗ್‌ಸ್ಟರ್ ಸಿನಿಮಾ ಇದು. ಶ್ರೀಲೇಶ್ ನಾಯರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಷ್ಟುದಿನ ಲವರ್ ಬಾಯ್ ಆಗಿಯೇ ಹೆಚ್ಚು ನಟಿಸಿದ್ದ ರಾಘಣ್ಣ ಹಿರಿಮಗ ವಿನಯ್ ಮೊದಲ ಬಾರಿಗೆ ಔಟ್ ಅಂಡ್ ಔಟ್ ಆಕ್ಷನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕತ್ತಿ ಹಿಡಿದು ರಕ್ತದ ಓಕುಳಿಯೇ ಆಡಿದ್ದಾರೆ. ಲುಂಗಿ ಹುಟ್ಟು ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ 'ಪೆಪೆ' ಚಿತ್ರದ ಪೋಸ್ಟರ್, ಟೀಸರ್‌ಗಳು ರಿಲೀಸ್ ಆಗಿ ಹಿಟ್ ಆಗಿದೆ. ಸಿನಿಮಾ ನೋಡಲೇಬೇಕು ಎನ್ನುವ ಕುತೂಹಲ ಮೂಡಿಸಿವೆ. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿ 'ಎ' ಸರ್ಟಿಫಿಕೇಟ್ ಕೊಟ್ಟಿದೆ. 2 ಗಂಟೆ 10 ನಿಮಿಷದ ಸಣ್ಣ ಸಿನಿಮಾ ಇದಾಗಿದೆ. 30 ವರ್ಷಗಳ ಅವಧಿಯಲ್ಲಿ ನಡೆಯುವ ಮಲೆನಾಡಿನ ಗ್ಯಾಂಗ್‌ಸ್ಟರ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.
ನಿರ್ದೇಶಕ ಶ್ರೀಲೇಶ್ ನಾಯರ್ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಸಿನಿಮಾ ಇದು. ಕೇರಳ ಮೂಲದ ನಿರ್ದೇಶಕರು 'ಪೆಪೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಮಲೆನಾಡ ಭಾಗದ ಕುಟುಂಬಗಳ ಮಧ್ಯೆ ನಡೆಯುವ ಸೇಡಿನ ಕಥೆ ಚಿತ್ರದಲ್ಲಿ. ಭಾರೀ ಮಾರಾಮಾರಿಯೇ ಚಿತ್ರದಲ್ಲಿ ಇರಲಿದೆ. ಹಾಗಾಗಿ ಬಹಳ ರಾ ಆಗಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ಕ್ರೌರ್ಯ ಕೊಂಚ ಹೆಚ್ಚಾಗಿಯೇ ಇದೆ ಎನ್ನುವುದು ಸ್ಯಾಂಪಲ್‌ಗಳಲ್ಲಿ ಗೊತ್ತಾಗುತ್ತಿದೆ.
ಚಿತ್ರದಲ್ಲಿ ಲುಂಗಿ ಉಟ್ಟು ಹಳ್ಳಿಹೈದನ ಪಾತ್ರದಲ್ಲಿ ವಿನಕ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ತಡವಾಗಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಸಮರ್ಥ್ ಉಪಾಧ್ಯ ಛಾಯಾಗ್ರಹಣ 'ಪೆಪೆ' ಚಿತ್ರಕ್ಕಿದೆ. ವಿನಯ್ ಜೊತೆಗೆ ಯಶ್ ಶೆಟ್ಟಿ, ಬಾಲ ಬೆಳವಾಡಿ, ಕಾಜಲ್ ಕುಂದರ್, ಮೇದಿನಿ ಕೆಳಮನೆ, ಮಯೂರ್ ಪಟೇಲ್, ಅರುಣಾ ಬಾಲರಾಜ್ ಸೇರಿ ದೊಡ್ಡ ತಾರಾಗಣವಿದೆ.

ಉದಯ್ ಸಿನಿ ವೆಂಚರ್ ಬ್ಯಾನರ್‌ನಲ್ಲಿ ಉದಯ್ ಶಂಕರ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ 'ಪೆಪೆ' ಸಿನಿಮಾ ಚಿತ್ರೀಕರಣ ನಡೆದಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ. ಆಗಸ್ಟ್ 30ಕ್ಕೆ ಸಿನಿಮಾ ತೆರೆಗೆ ಬರಲಿದೆ. ಶೀಘ್ರದಲ್ಲೇ ಸಿನಿಮಾ ಟ್ರೈಲರ್ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.
'ಪೆಪೆ' ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳನ್ನು ಬಹಳ ವಿಭಿನ್ನವಾಗಿ ಚಿತ್ರಿಸಲಾಗಿದೆ. ಒಬ್ಬರಲ್ಲ ಇಬ್ಬರಲ್ಲ 4 ಜನ ಸ್ಟಾರ್ ಸಾಹಸ ಸಂಯೋಜಕರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್‌ರೆಂಟ್ ಡ್ಯಾನಿ ಹಾಗೂ ನರಸಿಂಹ ಚಿತ್ರದ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ. 'ಜಾಕಿ' ಚಿತ್ರದಲ್ಲಿ ರವಿವರ್ಮಾ ಫೈಯರ್ ಫೈಟ್ ಗಮನ ಸೆಳೆದಿತ್ತು. ಅಂತದ್ದೇ ಫೈಟ್ 'ಪೆಪೆ' ಚಿತ್ರದಲ್ಲೂ ಇರಲಿದೆ.


Click it and Unblock the Notifications











