ತಮಿಳಿನ 'ವಿಕ್ರಮ್' ಖ್ಯಾತಿಯ ನಟಿ ಸ್ವಾದಿಷ್ಟ ಜತೆ ಶುರು ವಿನಯ್ ರಾಜ್‌ಕುಮಾರ್ ಸರಳ ಪ್ರೇಮಕಥೆ!
ಒಂದೆಡೆ ದೊಡ್ಮನೆ ಅಭಿಮಾನಿಗಳು ಯುವ ರಾಜ್‌ಕುಮಾರ್ ನಟಿಸಲಿರುವ ಮೊದಲ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಯುವ ರಾಜ್‌ಕುಮಾರ್ ಅಣ್ಣ ವಿನಯ್ ರಾಜ್‌ಕುಮಾರ್ ಅವರು ಸಾಲು ಸಾಲು ಚಿತ್ರಗಳನ್ನು ಘೋಷಿಸಿ ಹೆಚ್ಚು ಸಕ್ರಿಯರಾಗಿದ್ದಾರೆ. ಕಳೆದ ವರ್ಷವಷ್ಟೇ ವಿನಯ್ ರಾಜ್‌ಕುಮಾರ್ ನಟಿಸಿದ್ದ, ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ 'ಟೆನ್' ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಸರಿಯಾದ ಪ್ರಚಾರ ಹಾಗೂ ಬಿಡುಗಡೆ ಎರಡೂ ಸಿಗದೇ ರಿಲೀಸ್ ಆದ ಕೇವಲ ಒಂದೇ ವಾರಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಿತ್ತು.
ಇನ್ನು ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಎಂಬ ಚಿತ್ರ ಹಲವು ವರ್ಷಗಳ ಹಿಂದೆಯೇ ಸೆಟ್ಟೇರಿ ಚಿತ್ರೀಕರಣ ಆರಂಭಿಸಿದರೂ ಸಹ ನಂತರದ ದಿನಗಳಲ್ಲಿ ಚಿತ್ರ ಏನಾಯಿತು ಎಂಬ ಅಪ್‌ಡೇಟ್ ಮಾತ್ರ ತಿಳಿಯಲಿಲ್ಲ. ಸದ್ಯಕ್ಕೆ ವಿಜಯ್ ರಾಜ್‌ಕುಮಾರ್ ಕೈನಲ್ಲಿ ಪೆಪೆ ಎಂಬ ಚಿತ್ರವಿದ್ದು, ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದಾ ವಿಭಿನ್ನ ಕಥಾಹಂದರವಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್‌ಕುಮಾರ್ ಸದ್ಯ ಲವ್ ಸ್ಟೋರಿ ಇರುವ ಚಿತ್ರಕಥೆಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ.
ಕಳೆದ ಕಲೆ ದಿನಗಳ ಹಿಂದಷ್ಟೇ ಅಂದೊಂದಿತ್ತು ಕಾಲ ಎಂಬ ಚಿತ್ರವನ್ನು ಘೋಷಿಸಿದ್ದ ವಿನಯ್ ರಾಜ್‌ಕುಮಾರ್ ಈಗ ಮತ್ತೊಂದು ಲವ್ ಸಬ್ಜೆಕ್ಟ್ ಇರುವ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ವಿಕ್ರಮ್ ಖ್ಯಾತಿಯ ನಟಿ ಸ್ವಾದಿಷ್ಟ ಕೃಷ್ಣನ್ ನಟಿಸಲಿದ್ದು, ಚಿತ್ರದ ಮುಹೂರ್ತ ಸಮಾರಂಭ ಇಂದು ( ಜನವರಿ 23 ) ಸರಳವಾಗಿ ನಡೆದಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಸಿಂಪಲ್ ಸುನಿ ನಿರ್ದೇಶನ
ಇನ್ನು ಈ ಚಿತ್ರಕ್ಕೆ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನವಿರಲಿದ್ದು, ಚಿತ್ರಕ್ಕೆ 'ಒಂದು ಸರಳ ಪ್ರೇಮಕಥೆ' ಎಂದು ಟೈಟಲ್ ಇಡಲಾಗಿದೆ. 2013ರಲ್ಲಿ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಎಂಬ ಚಿತ್ರವನ್ನು ನಿರ್ದೇಶಿಸಿ ಬೃಹತ್ ಗೆಲುವು ಸಾಧಿಸಿ ನೆಲೆಯೂರಿದ ನಿರ್ದೇಶಕ ಸುನಿ ಈ ಬಾರಿ ಅದೇ ಶೀರ್ಷಿಕೆ ಕನ್ನಡ ವರ್ಷನ್ ಅನ್ನು ಶೀರ್ಷಿಕೆಯಾಗಿ ಬಳಸಿದಂತಿದೆ. ಹೌದು, 'ಸಿಂಪಲ್ಲಾಗ್ ಒಂದ ಲವ್ ಸ್ಟೋರಿ' ಹಾಗೂ ಈಗಿನ 'ಒಂದು ಸರಳ ಪ್ರೇಮ ಕಥೆ' ಎರಡೂ ಶೀರ್ಷಿಕೆಗಳು ಒಂದೇ ಅರ್ಥವನ್ನು ನೀಡಲಿವೆ. ಇನ್ನು ಅವತಾರ ಪುರುಷ ಚಿತ್ರದ ಮೂಲಕ ನಿರೀಕ್ಷಿಸಿದ ಮಟ್ಟವನ್ನು ತಲುಪುವಲ್ಲಿ ವಿಫಲರಾದ ಸಿಂಪಲ್ ಸುನಿ ಈ ಬಾರಿ ಕಮ್‌ಬ್ಯಾಕ್ ಮಾಡ್ತಾರಾ ಕಾದು ನೋಡಬೇಕಿದೆ.

ವಿಕ್ರಮ್ ಬೆಡಗಿ ಚಿತ್ರದಲ್ಲಿ ನಾಯಕಿ
ಕಳೆದ ವರ್ಷ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ತಮಿಳಿನ ವಿಕ್ರಮ್ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರ ಪಾತ್ರಧಾರಿಯ ಪತ್ನಿ ಪಾತ್ರವನ್ನು ನಿರ್ವಹಿಸಿದ್ದ ನಟಿ ಸ್ವಾದಿಷ್ಟ ಕೃಷ್ಣನ್ 'ಒಂದು ಸರಳ ಪ್ರೇಮ ಕಥೆ' ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಮೂಲತಃ ಬೆಂಗಳೂರಿನವರೇ ಆದ ಸ್ವಾದಿಷ್ಟ ಕೃಷ್ಣನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಅಂದೊಂದಿತ್ತು ಕಾಲ ಮತ್ತೊಂದು ಲವ್ ಸಬ್ಜೆಕ್ಟ್
ಒಂದು ಸರಳ ಪ್ರೇಮಕಥೆ ಚಿತ್ರಕ್ಕೂ ಮುನ್ನ ಘೋಷಣೆಯಾಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ 'ಅಂದೊಂದಿತ್ತು ಕಾಲ' ಎಂಬ ಚಿತ್ರವೂ ಸಹ ಲವ್ ಸಬ್ಜೆಕ್ಟ್ ಆಗಿದೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕೀರ್ತಿ ನಿರ್ದೇಶನವಿದ್ದು, ಪೆಪೆ ಚಿತ್ರಕ್ಕೆ ಶ್ರೀಶೈಲ್ ನಾಯರ್ ನಿರ್ದೇಶನವಿದೆ. ಇನ್ನು ಪೆಪೆ ಚಿತ್ರದ ಮೇಲೆ ಸಿನಿ ರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದ್ದು, ಚಿತ್ರದ ನಿರ್ದೇಶಕ ಸಹ ಟ್ವಿಟರ್‌ನಲ್ಲಿ ತಮ್ಮ ಚಿತ್ರದ ಮೇಲೆ ಅಪಾರವಾದ ವಿಶ್ವಾಸವಿದೆ ಎಂಬುದನ್ನು ಹಲವಾರು ಬಾರಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications











