'ಪೆಪೆ' ಹಾಗೂ 'ಕರಿಯ' ಅಡ್ವಾನ್ಸ್ ಬುಕ್ಕಿಂಗ್ ಶುರು; ಹೇಗಿದೆ ರೆಸ್ಪಾನ್ಸ್?
ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಆಗಸ್ಟ್ 30ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಮತ್ತೊಂದು ಕಡೆ ದರ್ಶನ್ ನಟನೆಯ 'ಕರಿಯ' ಸಿನಿಮಾ ಕೂಡ ರೀ-ರಿಲೀಸ್ ಆಗುತ್ತಿದೆ. ಎರಡೂ ಚಿತ್ರಗಳ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ.
ಶ್ರೀಲೇಶ್ ನಾಯರ್ ನಿರ್ದೇಶನದ ಆಕ್ಷನ್ ಎಂಟರ್‌ಟ್ರೈನರ್ ಸಿನಿಮಾ 'ಪೆಪೆ'. ಈಗಾಗಲೇ ಸಣ್ಣ ಸಣ್ಣ ಟೀಸರ್ ಹಾಗೂ ಟ್ರೈಲರ್‌ನಿಂದ ಈ ಗ್ಯಾಂಗ್‌ಸ್ಟರ್ ಸಿನಿಮಾ ಸದ್ದು ಮಾಡ್ತಿದೆ. ಇತ್ತೀಚೆಗೆ ಬಂದ ಟ್ರೈಲರ್ ಸೂಪರ್ ಹಿಟ್ ಆಗಿ ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಇದೇ ಮೊದಲ ಬಾರಿಗೆ ನಟ ವಿನಯ್ ರಾಜ್‌ಕುಮಾರ್ ರಗಡ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

ಮಲೆನಾಡ ಭಾಗದಲ್ಲಿ ನಡೆಯುವ ರಿವೇಂಜ್ ಸ್ಟೋರಿ ಚಿತ್ರದಲ್ಲಿದೆ. ವಿನಯ್ ಇಲ್ಲಿ ಪೆಪೆ ಅಲಿಯಾಸ್ ಪ್ರದೀಪ ಆಗಿ ನಟಿಸುತ್ತಿದ್ದಾರೆ. 90ರ ದಶಕದ ಮಲೆನಾಡ ಭಾಗದ ರಕ್ತಿಸಿಕ್ತ ಅಧ್ಯಾಯವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಮಯೂರ್ ಪಟೇಲ್ , ನವೀನ್ ಡಿ ಪಡೀಲ್ , ಯಶ್ ಶೆಟ್ಟಿ , ಕಾಜಲ್ ಕುಂದರ್ , ಮೇದಿನಿ ಚಿತ್ರದ ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿದೆ.
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಪೆಪೆ' ಸಿನಿಮಾ ವಿತರಣೆ ಹಕ್ಕು ಕೊಂಡುಕೊಂಡಿದೆ. ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಟ್ರೈಲರ್ ನೋಡಿ ಹಲವರು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದಾರೆ. ಕೆ. ಜಿ ರಸ್ತೆಯ ಸಂತೋಷ್ ಸೇರಿ ನಾಲ್ಕೈದು ಚಿತ್ರಮಂದಿರಗಳಲ್ಲಿ 'ಪೆಪೆ' ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರು ಈಗಾಗಲೇ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.
'ಪೆಪೆ' ಜೊತೆಗೆ ಈ ವಾರ ದರ್ಶನ್ ನಟನೆಯ 'ಕರಿಯ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ 21 ವರ್ಷಗಳ ಹಿಂದೆ ತೆರೆಗೆ ಬಂದು ಸದ್ದು ಮಾಡಿತ್ತು. ಮುನಿಸ್ವಾಮಿ ಎಂಬ ವಿತರಕರು 'ಕರಿಯ' ಚಿತ್ರವನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. 4k ಡಿಜಿಟಲ್ ವರ್ಷನ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಆದರೆ 'ಶಾಸ್ತ್ರೀ' ಸಿನಿಮಾ ಇತ್ತೀಚೆಗೆ ರೀ-ರಿಲೀಸ್ ಆಗಿ ಸದ್ದು ಮಾಡಿತ್ತು. ಇದೀಗ ಅದೇ ಹಾದಿಯಲ್ಲಿ 'ಕರಿಯ'ನ ಆಗಮನವಾಗಲಿದೆ. ಜೆ.ಪಿ ನಗರದ ಸಿದ್ದೇಶ್ವರ, ಮಾಗಡಿ ರಸ್ತೆಯ ಪ್ರಸನ್ನ, ತಾವರೆಕೆರೆ ಬಾಲಾಜಿ ಸೇರಿದಂತೆ ಕೆಲವೆಡೆ ಅಡ್ವಾನ್ಸ್ ಬುಕ್ಕಿಂಗ್ ನಡೆಯುತ್ತಿದೆ. ಪ್ರಸನ್ನ ಚಿತ್ರಮಂದಿರದ ಬೆಳಗ್ಗೆ 7.30ರ ಶೋ ಟಿಕೆಟ್ ಬಹುತೇಕ ಸೋಲ್ಡೌಟ್ ಆಗಿದೆ.
'ದ ರೂಲರ್ಸ್', 'ಟೇಕ್ವಾಂಡೋ ಗರ್ಲ್' ಎನ್ನುವ ಮತ್ತೆರಡು ಕನ್ನಡ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಹಾಗೂ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿವೆ.


Click it and Unblock the Notifications











