For Quick Alerts
  ALLOW NOTIFICATIONS  
  For Daily Alerts

  ಮಾಜಿ ನಾಯಕೀಮಣಿಯರಿಗೆ ಈಗ ಶುಕ್ರದೆಸೆ. ನಲವತ್ತಾಗಿದ್ದಕ್ಕೆ ಕೊರಗುವ ಬದಲು, ಅವರು ಸಂತಸ ಪಡುವ ದಿನ ಬಂದಿದೆ......

  By Staff
  |

  *ಸತ್ಯನಾರಾಯಣ

  ನಲವತ್ತರ ಹೊಸಲು ದಾಟಿದ ಮಾಜಿ ನಾಯಕಿಯರಿಗೀಗ ಸುವರ್ಣಕಾಲ. ವಯಸ್ಸಾಯಿತು ಅಂತ ಅವರು ಬೇಜಾರು ಮಾಡಿಕೊಳ್ಳಬೇಕಾಗಿಲ್ಲ, ಬದಲಾಗಿ ವಯಸ್ಸಾಗಿದ್ದಕ್ಕೆ ಸಂತೋಷಪಡಬೇಕಾದ ಪರಿಸ್ಥಿತಿ ಬಂದಿದೆ.

  ಈ ಹಿರಿಯ ನಟಿಯರನ್ನು ಸಲುಹುವುದಕ್ಕೆ ಕಿರಿಯ ತೆರೆಯಿದೆ. ಅವರು ನಾಯಕಿಯರಾಗಿದ್ದ ಕಾಲದಲ್ಲೇ ಸಿಗದ ಸವಲತ್ತು, ಮರ್ಯಾದೆ, ಸಂಭಾವನೆ ಈಗ ಕಿರುತೆರೆಯಲ್ಲಿ ಅನಾಯಾಸವಾಗಿ ಸಿಗುತ್ತಿದೆ. ಉದಾಹರಣೆಗೆ ವಿನಯಾ ಪ್ರಸಾದ್‌ ಅವರನ್ನೇ ನೋಡಿ. ಅವರು ನಾಯಕಿಯಾಗಿಯೋ, ಅತ್ತಿಗೆಯಾಗಿಯೋ ಸಿನಿಮಾಗಳಲ್ಲಿ ನಟಿಸುತ್ತಿದ್ದಾಗ ಅಬ್ಬಬ್ಬಾ ಅಂದ್ರೆ 50 ಸಾವಿರ ಸಂಭಾವನೆ ಪಡೆದುಕೊಂಡಿರಬಹುದು. ಅದೇ ವಿನಯಾ ಪ್ರಸಾದ್‌ ಈಗ ಟಿವಿ ಸಿರಿಯಲ್ಲಿನಲ್ಲಿ ಒಂದು ದಿನ ನಟಿಸಿದರೆ 8 ಸಾವಿರ ರುಪಾಯಿ ಸಂಭಾವನೆ ಸಿಗುತ್ತದೆ. ತಿಂಗಳಿಗೆ ಅವರ ವರಮಾನ ಕನಿಷ್ಠ ಎಂದರೂ ಎರಡೂವರೆ ಲಕ್ಷ. ವಿನಯಾ ಯಾವತ್ತೂ ಜನಪ್ರಿಯ ಸಿನಿಮಾ ನಟಿಯಾಗಿರಲಿಲ್ಲ. ಆದರೆ, ಟೀವಿಗೆ ಕಾಲಿಟ್ಟ ನಂತರ ಆಕೆ ಮನೆಮನೆ ಮಾತಾಗಿದ್ದಾರೆ.

  ತಾರಾ, ಭವ್ಯ, ವನಿತಾವಾಸು, ಮೊದಲಾದ ಸೀನಿಯರ್‌ಗಳೆಲ್ಲಾ ಈಗ ವಿನಯಾ ಹಾದಿಯಲ್ಲೇ ನಡೆಯುತ್ತಿದ್ದಾರೆ. ಭವ್ಯ ಅವರ ಸಂಭಾವನೆ ದಿನವೊಂದಕ್ಕೆ ಆರು ಸಾವಿರ, ತಾರಾ ಅವರದು ನಾಲ್ಕು ಸಾವಿರ, ವನಿತಾವಾಸು ಮೂರೂವರೆ ಸಾವಿರ. ಸಿನಿಮಾಗಳಲ್ಲಿ ಪೋಷಕ ನಟಿಯಾಗಿದ್ದು, ಈಗ ಸೀರಿಯಲ್‌ಗಳಲ್ಲಿ ಬಿಜಿಯಾಗಿರುವ ನಟಿಯರಿಗೂ ಕಡಿಮೆಯೆಂದರೂ ದಿನವೊಂದಕ್ಕೆ ಮೂರು ಸಾವಿರ ಆದಾಯವಿದೆ.

  ನಟರಿಗೆ ಇಲ್ಲದ ಬೇಡಿಕೆ, ನಟಿಯರಿಗೆ ಬರುವುದಕ್ಕೆ ಕಾರಣಗಳು ಇಲ್ಲದೇ ಇಲ್ಲ. ಸಿನಿಮಾ ಮೂಲತಃ, ನಾಯಕ ಪ್ರಧಾನ ಮಾಧ್ಯಮ. ಇಲ್ಲಿ ನಾಯಕಿಯೇನಿದ್ದರೂ ನೆಪಮಾತ್ರಕ್ಕೆ. ವ್ಯಾಪಾರಿ ಚಿತ್ರಗಳಲ್ಲಂತೂ ಆಕೆ, ನಾಲ್ಕು ಹಾಡಿಗೆ ಕುಣಿದು ಹೋಗುವ ಅತಿಥಿಪಾತ್ರ. ಆದರೆ, ಟೀವಿ ಸಿರಿಯಲ್‌ ಅನ್ನೋದು ಮನೆಮನೆ ಕತೆಗಳನ್ನೇ ನೆಚ್ಚಿಕೊಂಡಿರುವ ಕಾರ್ಯಕ್ರಮ. ಮನೆಯಲ್ಲಿರುವ ಸಕಲ ಸದಸ್ಯರಿಗೂ ಇಲ್ಲಿ ಸಮಾನ ಆದ್ಯತೆ, ಅವಕಾಶ. ಹಾಗಾಗಿ ಮನೆಮಗನಿಗಿಂತ ಆತನನ್ನು ಪೊರೆಯುವ ಅಮ್ಮನ ಪಾತ್ರವೇ ಹೆಚ್ಚು ಹೈಲೈಟ್‌ ಆಗುತ್ತಿದೆ.

  ಈಗಷ್ಟೇ ತಮ್ಮ ಮೊದಲ ಕನ್ನಡ ಟೀವಿ ಸೀರಿಯಲ್‌ನಲ್ಲಿ ನಟಿಸುತ್ತಿರುವ ಮಾಜಿ ನಾಯಕಿ ಅಂಬಿಕಾ ಹೇಳುವುದನ್ನು ಕೇಳಿ - ‘ಹಾಡಿಕುಣಿಯುವ ಪಾತ್ರಗಳನ್ನು ಸಿನಿಮಾದಲ್ಲಿ ಮಾಡಿದ್ದಾಗಿದೆ. ನನಗೀಗ ಪರ್‌ಫಾರ್ಮೆನ್ಸ್‌ ಅವಕಾಶ ಇರುವ ಪಾತ್ರ ಬೇಕು. ಅದು ಸಿಗೋದು ಸೀರಿಯಲ್‌ನಲ್ಲಿ ಮಾತ್ರ. ಮೆಗಾ ಸೀರಿಯಲ್‌ ಆದರೆ, ಅಲ್ಲಿ ಬರುವ 260 ಎಪಿಸೋಡ್‌ಗಳಲ್ಲಿ ಕನಿಷ್ಠವೆಂದರೂ 200 ಎಪಿಸೋಡ್‌ನಲ್ಲಿ ನಮ್ಮ ಮುಖ ಬಂದು ಹೋಗುತ್ತದೆ. ಪಾತ್ರದ ಆಳ ವಿಸ್ತಾರಗಳೂ ಸಿನಿಮಾಗೆ ಹೋಲಿಸಿದರೆ ಜಾಸ್ತಿ. ಗದ್ದಲವಿಲ್ಲದ ವಾತಾವರಣದಲ್ಲಿ ಕೆಲಸ ಮಾಡುವ ತೃಪ್ತಿಯೂ ಸಿಗುತ್ತದೆ’.

  ತಮಿಳಿನ ಕುಟುಂಬಂ ಸೀರಿಯಲ್‌ನಿಂದ ಮನೆಮಾತಾಗಿರುವ ಅಂಬಿಕಾ ಈಗ ‘ಬಣ್ಣ’ ಮೆಗಾ ಸೀರಿಯಲ್‌ ಮೂಲಕ ಕನ್ನಡದ ಕಿರುತೆರೆಗೂ ಪದಾರ್ಪಣ ಮಾಡಿದ್ದಾರೆ. ಸೆಪ್ಟೆಂಬರ್‌ 3ರಿಂದ ಸಂಜೆ 6ಗಂಟೆಗೆ ಡಿ.ಡಿ.ಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಜೀವಾಳವೇ ಅಂಬಿಕಾ. ಈ ಪಾತ್ರಕ್ಕೆ ಆಕೆಗೆ ನೀಡಲಾಗುವ ಸಂಭಾವನೆ ದಿನವೊಂದಕ್ಕೆ 15 ಸಾವಿರ ರುಪಾಯಿ. ಈ ಹಿಂದೆ ಸುಮಲತಾ ದಿನವೊದಂಕ್ಕೆ 20 ಸಾವಿರ ರುಪಾಯಿ ಸಂಭಾವನೆ ಪಡೆವ ಮೂಲಕ ದಾಖಲೆ ಮಾಡಿದ್ದರು. ಆದರೆ, ಆ ಸೀರಿಯಲ್‌ ಅರ್ಧಕ್ಕೆ ನಿಂತುಹೋಯಿತು.

  ಅಂದಹಾಗೆ ಅಂಬಿಕಾಗೆ ಈಗ ವಯಸ್ಸಾಗಿದೆ. ಚಕ್ರವ್ಯೂಹ ಚಿತ್ರದಲ್ಲಿ ಅಂಬರೀಶ್‌ ಜೊತೆ ಚಳಿಚಳಿ ಗೀತೆಗೆ ಮಾದಕವಾಗಿ ನರ್ತಿಸಿದ ಅಂಬಿಕಾ ಇವರೇನೋ ಎಂದು ಅಚ್ಚರಿಯಾಗುವಷ್ಟು ಆಕೆ ಊದಿಕೊಂಡಿದ್ದಾರೆ. ಚಲಿಸುವ ಮೋಡಗಳು ಚಿತ್ರದಲ್ಲಿ ರಾಜ್‌ಕುಮಾರ್‌ ಜೊತೆ ಮೋಹಕವಾಗಿ ಕಾಣಿಸಿಕೊಂಡ ಅಂಬಿಕಾ ನೆರಳು ಕೂಡ ಈಗಿನ ಅಂಬಿಕಾ ನಿಲುವಲ್ಲಿಲ್ಲ. ಆದರೆ, ಮುಖದಲ್ಲಿನ್ನೂ ಅಲ್ಪಸ್ವಲ್ಪ ಚಾರ್ಮ್‌ ಉಳಿದುಕೊಂಡಿದೆ. ಕಿರುತೆರೆಯ ತಾಯಿ ಆಗೋದಕ್ಕೆ ಇಷ್ಟು ಸಾಕು.

  ಐದು ವರ್ಷಗಳ ಹಿಂದೆ ಮದುವೆಯಾಗಿ ಅಮೆರಿಕಾಗೆ ವರ್ಗವಾಗಿದ್ದ ಅಂಬಿಕಾ ಅಲ್ಲಿ ಎರಡು ಮಕ್ಕಳ ತಾಯಿಯಾದರು. ಅನಂತರ ಗಂಡಹೆಂಡತೆ ನಡುವೆ ಭಿನ್ನಾಭಿಪ್ರಾಯ ತಲೆದೋರಿತು. ಅದು ವಿಚ್ಚೇದನದಲ್ಲಿ ಅಂತ್ಯಗೊಂಡಿತು. ಮರಳಿ ಭಾರತಕ್ಕೆ ಬಂದ ಅಂಬಿಕಾ ಇನ್ನೊಂದು ಮದುವೆಯಾದರು. ಈಗಿನ ಪತಿಯ ಹೆಸರು ರವಿಕಾಂತ್‌. ಬಸವನಗುಡಿಯ ಪ್ರಜೆಯಾದ ಈತ ಬಾಲಚಂದರ್‌ ಅವರಿಗೆ ಸಹಾಯಕರಾಗಿ ದುಡಿಯುತ್ತಿದ್ದಾರೆ.

  ಆದರೆ, ಅಂಬಿಕಾ ಮಕ್ಕಳು ಅಮೆರಿಕಾದಲ್ಲಿ ಅಪ್ಪನ ಜೊತೆಗಿದ್ದಾರೆ. ಮೊನ್ನೆ ಅಮೆರಿಕಾ ಉಗ್ರಗಾಮಿಗಳ ಸಿಟ್ಟಿಗೆ ಬಲಿಯಾದಾಗಲೂ ಮಕ್ಕಳು ಹೋಸ್ಟನ್‌ನಲ್ಲಿದ್ದರಂತೆ. ಅವರಿಗೆ ಏನೂ ಆಗಿಲ್ಲ ಅನ್ನುವ ಸಮಾಧಾನ ಅಮ್ಮನದು. ಬಣ್ಣ ಸೀರಿಯಲ್‌ ನಂತರ ಹಂಸಲೇಖಾ ಅವರ ಪ್ರೀತಿಗಾಗಿ ಸೀರಿಯಲ್ಲನ್ನೂ ಒಪ್ಪಿಕೊಂಡಿರುವ ಅಂಬಿಕಾ ಬೆಂಗಳೂರಲ್ಲೇ ಸೆಟ್ಲ್‌ ಆಗುವ ಕನಸನ್ನು ಕಾಣುತ್ತಿದ್ದಾರೆ.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X