ಮುಖ ನೋಡ್ಕೊಂಡು ಬರೋಕೆ ಹೋಗಿದ್ದೇ, ದರ್ಶನ್ ಏನ್ ಟೈಗರ್ ಅಂದ್ರು - ವಿನೋದ್ ಪ್ರಭಾಕರ್....!
ತಮ್ಮ ಆಪ್ತ ವಲಯ ಮತ್ತು ಹೊಸಬರ ಚಿತ್ರಗಳಿಗೆ ತಮ್ಮ ಚಿತ್ರಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ನೀಡಿದವರು ದರ್ಶನ್. ಹೆಚ್ಚಿನ ಸಂದರ್ಭದಲ್ಲಿ ಅವರ ಚಿತ್ರಕ್ಕೆ ಕೊಡದ ಮಹತ್ವ ಬೇರೆಯವರ ಚಿತ್ರಕ್ಕೆ ಕೊಟ್ಟಿರುವ ಉದಾಹರಣೆ ಕೂಡ ಇದೆ. ದರ್ಶನ್ ಅವರ ಇಂತಹ ಪ್ರೀತಿಯನ್ನ ಗಳಿಸಿದವರಲ್ಲಿ ವಿನೋದ್ ಪ್ರಭಾಕರ್ ಕೂಡ ಒಬ್ಬರು ಮತ್ತು ಪ್ರಮುಖರು.
ದರ್ಶನ್ ಹೋದಲ್ಲಿ..ಬಂದಲ್ಲಿ.. ಮೊದಲೆಲ್ಲ ನೆರಳಿನಂತೆ ಹಿಂಬಾಲಿಸುತ್ತಿದ್ದ ವಿನೋದ್ ಪ್ರಭಾಕರ್ ಅವರಿಗೆ ರಾಬರ್ಟ್ ಚಿತ್ರದ ಮೂಲಕ ತಮ್ಮ ಆಪ್ತ ಸ್ನೇಹಿತನ ಜೊತೆ ತೆರೆಯನ್ನೂ ಹಂಚಿಕೊಳ್ಳುವ ಭಾಗ್ಯವೂ ಸಿಕ್ಕಿತ್ತು.ಇಂಥ ವಿನೋದ್ ಪ್ರಭಾಕರ್ ಪರಪ್ಪನ ಅಗ್ರಹಾರಕ್ಕೆ ಸೇರಿದ ದರ್ಶನ್ ಅವರ ಬಗ್ಗೆ ಇಲ್ಲಿಯವರೆಗೆ ಎಲ್ಲಿಯೂ ಮಾತನಾಡಿರಲಿಲ್ಲ. ದರ್ಶನ್ ಅವರನ್ನು ನೋಡಲು ಪೊಲೀಸ್ ಠಾಣೆ ಬಳಿ ಕೂಡ ಬಂದಿರಲಿಲ್ಲ.

ಸಹಜವಾಗಿಯೇ ವಿನೋದ್ ಪ್ರಭಾಕರ್ ಅವರ ಈ ನಡೆ ಅನೇಕರನ್ನು ಕೆರಳಿಸಿತ್ತು. ಬ್ರದರ್ ಫಾರ್ಮ್ ಅನದರ್ ಮದರ್ ಎಂದವರು ಎಲ್ಲಿ ಅನ್ನುವ ಚರ್ಚೆಯನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಾಕಿತ್ತು. ಆದರೆ ಈಗ ವಿನೋದ್ ಪ್ರಭಾಕರ್ ಬಂದಿದ್ದಾರೆ. ತಮ್ಮ ಅತ್ಯಾಪ್ತ ಸ್ನೇಹಿತನನ್ನ ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿದ್ದಾರೆ.ಡಿ ಬಾಸ್' ಗಾಗಿ ಇಡೀ ಪ್ರಪಂಚವನ್ನೇ ಎದುರು ಹಾಕಿಕೊಳ್ತೇನೆ ಎಂದು ಹೇಳಿದ್ದ ವಿನೋದ್ ಪ್ರಭಾಕರ್ ಈ ಪ್ರಕರಣದ ಬಗ್ಗೆ ಇಷ್ಟು ದಿನ ಮೌನವಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರವನ್ನೂ ನೀಡಿದ್ಧಾರೆ.
ಪರಪ್ಪನ ಅಗ್ರಹಾರದ ಆಚೆ ಮಾತನಾಡಿರುವ ವಿನೋದ್ ಪ್ರಭಾಕರ್, ಮೃತ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದಿದ್ದಾರೆ.ಇನ್ನೂ ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಆಗಿತ್ತು. ಅವರ ಬರ್ತಡೇಗೆ ಭೇಟಿ ಮಾಡಿದ್ದೆ ಎಂದಿರುವ ವಿನೋದ್ ಪ್ರಭಾಕರ್,ಪೊಲೀಸ್ ಸ್ಟೇಷನ್ ಹತ್ರ ಹೋಗಿ ಭೇಟಿಯಾಗಲು ಪ್ರಯತ್ನಪಟ್ಟೆ. ಅಲ್ಲಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಇವತ್ತು ಅವರ ಮುಖ ನೋಡಿಕೊಂಡು ಬರಲು ಜೈಲಿಗೆ ಬಂದು ಭೇಟಿ ಮಾಡಿದ್ದೇನೆ. ದರ್ಶನ್ ಅವರು ಮೌನವಾಗಿದ್ದರು. ಏನ್ ಟೈಗರ್ ಅಂತ ಅಷ್ಟೇ ನನ್ನ ಬಳಿ ಮಾತಾನಾಡಿದ್ದು. ಅವರಿಗೆ ಶೆಕ್ ಹ್ಯಾಂಡ್ ಮಾಡಿ ಬಂದೆ ಎಂದಿರುವ ವಿನೋದ್ ಪ್ರಭಾಕರ್, ಎಲ್ಲರಿಗೂ ಭಗವಂತ ಒಳ್ಳೆಯದನ್ನ ಮಾಡಲಿ. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವುದು ಕಾನೂನಿನಲ್ಲಿದೆ. ನನ್ನ ಪ್ರಕಾರ ಎಲ್ಲರಿಗೂ ಒಳ್ಳೆಯದು ಆಗುತ್ತೆ ಎಂದಿದ್ದಾರೆ
ಪ್ರಕರಣ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವುದಷ್ಟೇ ನನಗೆ ಗೊತ್ತು ಎಂದಿರುವ ವಿನೋದ್ ಪ್ರಭಾಕರ್, ಕಾನೂನಿಗಿಂತ ಯಾರು ದೊಡ್ಡವರಿಲ್ಲ ಎಲ್ಲರಿಗೂ ನ್ಯಾಯ ಸಿಗಲಿ. ನನಗೆ ದೇವರ ಮೇಲೆ ಅಪಾರವಾದ ನಂಬಿಕೆ ಇದೆ. ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಕಳೆದಿದೆ. ನಾನು ನನ್ನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ನ್ಯೂಸ್ ನಲ್ಲಿ ನೋಡಿದ ಮೇಲೆ ನನಗೆ ಈ ಪ್ರಕರಣದ ಬಗ್ಗೆ ಗೊತ್ತಾಯ್ತು. ಅಂದ್ರೆ ಅವತ್ತು ನನಗೆ ನ್ಯೂಸ್ ನೋಡಿ ಶಾಕ್ ಆಯ್ತು ಎಂದಿದ್ದಾರೆ.

ಇದೇ ವೇಳೆ ವಿನೋದ್ ಪ್ರಭಾಕರ್ ಎಲ್ಲಿ, ಯಾಕೆ ಮಾತನಾಡ್ತಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಲ್ಲ ಎಂಬ ಅನೇಕರ ಆಕ್ರೋಶದ ನುಡಿಗಳಿಗೆ ಉತ್ತರವನ್ನೂ ನೀಡಿರುವ ಮರಿ ಟೈಗರ್, ಈಗ ಪೋಸ್ಟ್ ಹಾಕಿ ಈ ಪ್ರಾಬ್ಲಮ್ ಸರಿಹೋಗುತ್ತೆ ಅಂದರೆ ನಾನೇ ಸಾವಿರ ಪೋಸ್ಟ್ ಹಾಕುತ್ತಿದ್ದೆ ಎಂದಿದ್ದಾರೆ. ಈ ಪ್ರಕರಣ ಬಹಳ ಗಂಭೀರವಾಗಿದೆ. ಪೊಲೀಸ್ ತನಿಖೆಯಲ್ಲಿ ಕೇಸ್ ಇದೆ. ಏನು ಮಾತನಾಡಬೇಕು ಎನ್ನುವ ಕ್ಲಾರಿಟಿ ನನಗಿಲ್ಲ. ಅದಕ್ಕೆ ಅವರನ್ನು ಭೇಟಿ ಮಾಡುವವರಗೆ ಮಾತನಾಡಬಾರದು ಅಂದು ಕೊಂಡಿದ್ದೆ ಎಂದಿದ್ದಾರೆ.
ಇನ್ನೂ ರೇಣುಕಾಸ್ವಾಮಿ ಫ್ಯಾಮಿಲಿ ಒಂದು ಕಡೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಇತ್ತ ದರ್ಶನ್ ಕುಟುಂಬದ ಜೊತೆಗೆ ಅಭಿಮಾನಿಗಳು ಕೂಡ ನೋವಿನಲ್ಲಿದ್ದಾರೆ. ಯಾರಿಗೆ ಸಾಂತ್ವನ ಹೇಳಬೇಕು ಅಂತ ತಿಳಿಯಲಿಲ್ಲ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಾಗಿ ಮಾತನಾಡಲು ಆಗುತ್ತಿಲ್ಲ ಎಂದಿದ್ದಾರೆ ವಿನೋದ್ ಪ್ರಭಾಕರ್.


Click it and Unblock the Notifications











