"ದರ್ಶನ್ ಕಸ್ಟಡಿಯಲ್ಲಿ ಇದ್ರೂ ಆಶ್ರಮಕ್ಕೆ ಸಹಾಯ ಮಾಡಿದ್ರು"; ನಟ ವಿನೋದ್ ರಾಜ್ ಭಾವುಕ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟ ಮುಂದುವರೆದಿದೆ. ಜಾಮೀನು ಪಡೆದು ಹೊರ ಬರುವ ಅವಕಾಶ ಸದ್ಯಕ್ಕಿಲ್ಲ ಎನ್ನುವಂತಾಗಿದೆ. ಇದು ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಬೇಸರ ತಂದಿದೆ. ಸಾಕಷ್ಟು ಸಮಾಜಮುಖಿ ಕೆಲಸಗಳಿಂದಲೂ ದರ್ಶನ್ ಗುರ್ತಿಸಿಕೊಂಡಿದ್ದರು. ಅವರ ಒಳ್ಳೆ ವ್ಯಕ್ತಿತ್ವದ ಬಗ್ಗೆ ನಟ ವಿನೋದ್ ರಾಜ್ ಮಾತನಾಡುತ್ತಾ ಭಾವುಕರಾಗಿದ್ದಾರೆ.
ಮೊದಲಿನಿಂದಲೂ ದರ್ಶನ್ ಹಾಗೂ ವಿನೋದ್ ರಾಜ್ ನಡುವೆ ಆತ್ಮೀಯ ಒಡನಾಟವಿದೆ. ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಅಲ್ಲಿಗೆ ಹೋಗಿ ಭೇಟಿ ನೀಡಿ ಮಾತನಾಡಿ ಬಂದಿದ್ದರು. ಬಳಿಕ ಮೃತ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಕೂಡ ಭೇಟಿಯಾಗಿದ್ದರು. ದರ್ಶನ್ ಸಂಕಷ್ಟದ ಬಗ್ಗೆ ಪದೇ ಪದೆ ವಿನೋದ್ ರಾಜ್ ನೋವು ತೋಡಿಕೊಳ್ಳುತ್ತಿದ್ದಾರೆ.

ಆಶ್ರಮಕ್ಕೆ ದರ್ಶನ್ ಸಹಾಯವನ್ನು ವಿನೋದ್ ರಾಜ್ ನೆನಪಿಸಿಕೊಂಡಿದ್ದಾರೆ. ಪಬ್ಲಿಕ್ ಚಾಯಿಸ್ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. "ಬಹಳ ನೋವಾಗುತ್ತದೆ. ಒಬ್ಬ ಮನುಷ್ಯನಿಗೆ ಇಂತಹ ಪರಿಸ್ಥಿತಿ ಬರಬಾರದು. ಪಾಪ. ಸಮಯ ಸಂದರ್ಭ, ಕೆಲ ತೀರ್ಮಾನಗಳು ಏನೆಲ್ಲಾ ಮಾಡಿಸುತ್ತದೆ ಹೇಳೊಕೆ ಸಾಧ್ಯವಿಲ್ಲ" ಎಂದು ವಿನೋದ್ ರಾಜ್ ಹೇಳಿದ್ದಾರೆ.
ದರ್ಶನ್ ಸಹಾಯಗುಣದ ಬಗ್ಗೆ ಬೇರೆಯವರು ಬಂದು ತಮ್ಮ ಬಳಿ ಮಾತನಾಡಿದ್ದನ್ನು ವಿನೋದ್ ರಾಜ್ ತಿಳಿಸಿದ್ದಾರೆ. "ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಒಬ್ರು ಬಂದು ಮಾತನಾಡಿದ್ರು. ಅವರಿಂದ ಒಂದು ಸತ್ಯ ತಿಳ್ಕೊಂಡೆ. ಅವ್ರು ಹೇಳ್ತಿದ್ರು, ನಾನು ಒಂದು ಆಶ್ರಮ ಮಾಡಿದ್ದೀನಿ. ಅದಕ್ಕೆ 50 ಸಾವಿರ ಇಟ್ಟಿಗೆ, ಸಿಮೆಂಟ್, ಕಬ್ಬಿಣ ಪ್ರತಿಯೊಂದು ದರ್ಶನ್ ಅವ್ರು ಕೊಟ್ರು ಅಂದ್ರು. ಕಸ್ಟಡಿಯಲ್ಲಿ ಇದ್ರು ಈ ಕೆಲಸ ಮಾಡಿಸಿದ್ದಾರೆ ಅಂದ್ರೆ ಮನಸ್ಸಿಗೆ ಬಹಳ ನೋವಾಗುತ್ತದೆ. ಇಷ್ಟು ಒಳ್ಳೆ ಮನಸ್ಸಿರುವ ವ್ಯಕ್ತಿಗೆ ಇಂತಹ ಪರಿಸ್ಥಿತಿ ಬಂತು ಎಂದು ಮನಸ್ಸಿಗೆ ನೋವಾಗುತ್ತದೆ. ಸೋಲು, ಗೆಲುವು ಎರಡನ್ನು ತಲೆಗೆ ತಗೋಬಾರದು, ನಮ್ಮ ಪಾಡಿಗೆ ನಾವು ಮುಂದೆ ಹೋಗಬೇಕು. ಯಶಸ್ಸು ಬಂತು ಎಂದುಕೊಂಡರೆ ಆಘಾತ ಕೊಡುತ್ತೆ, ಸೋಲು ಕೂಡ ಆಘಾತ ಕೊಡುತ್ತೆ" ಎಂದಿದ್ದಾರೆ.
'ಡೆವಿಲ್' ಚಿತ್ರದ 'ಇದ್ರೇ ನೆಮ್ದಿಯಾಗಿರ್ಬೇಕ್' ಸಾಂಗ್ ಚೆನ್ನಾಗಿತ್ತು. ಅದಕ್ಕೆ ಡ್ಯಾನ್ಸ್ ಮಾಡಿದ್ದೆ. ಈಗ ಬಂದಿರುವ ಹಾಡು ಚೆನ್ನಾಗಿದೆ ಎಂದು ವಿನೋದ್ ರಾಜ್ ಹೇಳಿದ್ದಾರೆ. "ದರ್ಶನ್ ಹಾಗೂ ಅವರ ಕುಟುಂಬಕ್ಕೆ ಭಗವಂತ ನೆಮ್ಮದಿ ಸುಖ ಶಾಂತಿ ಕೊಡಲಿ. ಪಾಪ ಮಿಲನಾ ಪ್ರಕಾಶ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ, ಅವರಿಗೆ ಯಶಸ್ಸು ಸಿಗಲಿ, ಸಿನಿಮಾ ಚೆನ್ನಾಗಿ ಹೆಸರು ಮಾಡಲಿ, ತಮಿಳುನಾಡಿನಲ್ಲಿ ರಜನಿಕಾಂತ್ ರೀತಿ ಕರ್ನಾಟಕದಲ್ಲಿ ದರ್ಶನ್ ಗ್ಯಾರಂಟಿ ಸೂಪರ್ ಸ್ಟಾರ್" ಎಂದು ವಿನೋದ್ ರಾಜ್ ವಿಶ್ಲೇಷಿಸಿದ್ದಾರೆ.
ಚಿತ್ರರಂಗದ ಹಿರಿಯರ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಒಬ್ಬೊಬ್ಬರಿಂದ ಒಂದೊಂದು ವಿಚಾರ ಕಲಿಯಬಹುದು. ನಮ್ಮ ತಾಯಿ, ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಷಣ್ಣ, ಪಾವರ್ತಮ್ಮ ರಾಜ್‌ಕುಮಾರ್ ಎಲ್ಲರೂ ಸಾಧನೆ ಮಾಡಿದ್ದಾರೆ. ಶಂಕರ್ ನಾಗ್, ಪ್ರಭಾಕರ್ ಹೀಗೆ ಎಲ್ಲರೂ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಅದನ್ನೆಲ್ಲಾ ಮರೆಯಬಾರದು ಎಂದು ನಟ ವಿನೋದ್ ರಾಜ್ ಹೇಳಿದ್ದಾರೆ.
ಕಳೆದ ವರ್ಷ ಜೂನ್ 11ರಂದು ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಬಂಧನವಾಗಿತ್ತು. ಬಳಿಕ ಅಕ್ಟೋಬರ್ 30ರಂದು ಮಧ್ಯಂತ ಜಾಮೀನು ಪಡೆದು ಹೊರ ಬಂದಿದ್ದರು. ಡಿಸೆಂಬರ್‌ನಲ್ಲಿ ಪ್ರಕರಣದ ಎಲ್ಲಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಜೈಲಿನಿಮದ ಬಿಡುಗಡೆಯಾಗಿ ಬಂದಿದ್ದ ದರ್ಶನ್ 'ಡೆವಿಲ್' ಸಿನಿಮಾ ಚಿತ್ರೀಕರಣ ಮುಗಿಸಿದ್ದರು. ಹೈಕೋರ್ಟ್ ಜಾಮೀನು ನೀಡಿದ್ದರ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂನಲ್ಲಿ ಆರೋಪಿಗಳ ಜಾಮೀನು ರದ್ದಾಗಿತ್ತು. ಆಗಸ್ಟ್ 14ರಂದು ಮತ್ತೆ ದರ್ಶನ್ ಜೈಲು ಸೇರಿದ್ದರು.


Click it and Unblock the Notifications











