''ದರ್ಶನ್‌ನ ಬಿಟ್ಟು ಕೊಡ್ಬೇಡ ಕಂದಾ ಅಂತ ಅಂದಿದ್ರು ಅಮ್ಮ'' - ವಿನೋದ್ ರಾಜ್...!
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾಗಿರಲಿಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್ ಆಗಿತ್ತು. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಸದ್ಯಕ್ಕೆ ಕೋಪದ ಕೈಗೆ ಬುದ್ದಿ ಕೊಟ್ಟಾಗ ಏನಾಗುತ್ತೆ ಅನ್ನುವುದಕ್ಕೆ ತಾಜಾ ನಿದರ್ಶನವಾಗಿದ್ದು ದುರ್ದೈವ.
ಇಂಥಾ ದರ್ಶನ್ ಅವರನ್ನು ಇಲ್ಲಿಯವರೆಗೆ ಕನ್ನಡ ಚಿತ್ರರಂಗದಿಂದ ಅನೇಕರು ಹೋಗಿ ಜೈಲಿನಲ್ಲಿ ಭೇಟಿಯಾಗಿದ್ದಾರೆ. ಮಾತನಾಡಿದ್ದಾರೆ. ದು:ಖವನ್ನೂ ಹಂಚಿಕೊಂಡಿದ್ಧಾರೆ. ಈ ಸಾಲಿಗೀಗ ಸೇರಿರುವ ವಿನೋದ್ ರಾಜ್ ತಮ್ಮ ಮನದ ನೋವನ್ನೂ ಹೊರ ಹಾಕಿದ್ದಾರೆ.

ಹೌದು, ಕಂಬಿ ಹಿಂದೆ ಇರುವ ದರ್ಶನ್ ಅವರ ದರ್ಶನ ಪಡೆಯಲು, ವಿನೋದ್ ರಾಜ್ ಇಂದು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಮಾತನಾಡಿದ ವಿನೋದ್ ರಾಜ್.. ಕೆಲ ಒಮ್ಮೆ ನಡೆಯಬಾರದ್ದು ನಡೆದು ಹೋಗುತ್ತೆ ಎಂದಿದ್ದಾರೆ. ದರ್ಶನ್‌ಗೆ ಮೂಗಿನ ತುದಿಯಲ್ಲಿಯೇ ಕೋಪ ಇದೆ, ಇದು ದರ್ಶನ್ ಬದುಕಿನ ಅಗ್ನಿ ಪರೀಕ್ಷೆ ಅಷ್ಟೇ ಎಂದಿರುವ ವಿನೋದ್ ರಾಜ್ ನಮ್ಮ ತಾಯಿಗೆ ದರ್ಶನ್ ಮೇಲೆ ವಿಶೇಷವಾದ ಪ್ರೀತಿ ಇತ್ತು ಎಂದು ಹೇಳಿದ್ದಾರೆ. ಅವರ ಕೊನೆಯ ದಿನಗಳಲ್ಲಿ ಕೂಡ ದರ್ಶನ್ ಬಗ್ಗೆಯೇ ಅಮ್ಮ ಮಾತನಾಡುತ್ತಿದ್ದರು ಎಂದಿರುವ ವಿನೋದ್ ರಾಜ್ ತುಂಬಾ ಕಷ್ಟ ಪಟ್ಟು ಬೆಳೆದ ಜೀವ ಅದು, ಯಾವತ್ತೂ ದರ್ಶನ್‌ನ ಬಿಟ್ಟು ಕೊಡಬೇಡ ಎಂದು ಹೇಳುತ್ತಿದ್ದರು ಎಂದು ಅಮ್ಮ ಲೀಲಾವತಿ ಅವರ ಮಾತುಗಳನ್ನೂ ನೆನಪಿಸಿಕೊಂಡಿದ್ದಾರೆ ವಿನೋದ್ ರಾಜ್.
ಇನ್ನೂ.. ಯಾಕೆ ಈ ರೀತಿ ಘಟನೆ ಆಯಿತು ಅನ್ಸುತ್ತೆ, ಅಚಾತುರ್ಯ ಅಂತಾ ಅಷ್ಟೇ ಹೇಳ್ತೀನಿ ಎಂದಿರುವ ವಿನೋದ್ ರಾಜ್, ನಮ್ಮ ತಾಯಿ ಜೊತೆ ದರ್ಶನ್ ತಂದೆ ತೂಗುದೀಪ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ತಾಯಿಯ ಆರೋಗ್ಯ ಸರಿ ಇಲ್ಲದಾಗ ಬಂದು ನನ್ನ ತಾಯಿಯನ್ನು ದರ್ಶನ್ ಮಾತನಾಡಿಸಿದ್ದರು. ಒಂದು ಕಡೆ ಪ್ರಾಣ ಕಳೆದುಕೊಂಡ ಕುಟುಂಬದವರ ನೋವು. ಇನ್ನೊಂದು ಕಡೆ ಅಭಿಮಾನಿಗಳು ಮತ್ತು ನಿರ್ಮಾಪಕರ ಜೊತೆ ದರ್ಶನ್ ಸಂತೋಷವಾಗಿದ್ದರು. ಹೇಗಿದ್ದವರು ಈಗ ಯಾವ ರೀತಿ ಬದಲಾವಣೆ ಆಗಿದೆ ಈ ರೀತಿ ಆಗಬಾರದಿತ್ತು ಎಂದು ತಮ್ಮ ಬೇಸರವನ್ನೂ ವಿನೋದ್ ರಾಜ್ ಹೊರಹಾಕಿದ್ದಾರೆ.

ಮುಂದುವರೆದು ಮಾತನಾಡಿರುವ ವಿನೋದ್ ರಾಜ್, ನನಗೆ ಸರ್ಜರಿಯಾಗುವ ಮುನ್ನ ದರ್ಶನ್‌ನ ಭೇಟಿಯಾಗಿದ್ದೆ, ಆಗ ದರ್ಶನ್ ತೋಟದ ಮನೆಗೆ ಹೋಗಿ ಕೆಲ ಗಿಡಗಳನ್ನು ಹಾಕಿ ಬರೋಣ ಅಂತ ಅನ್ಕೊಂಡಿದ್ವಿ ಎಂದಿರುವ ವಿನೋದ್ ರಾಜ್, ಅಷ್ಟರಲ್ಲಿ ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ. ಆದರಿಂದ ಮೀಟ್ ಮಾಡೋಕೆ ಆಗಲಿಲ್ಲ ಎಂದು ಹೇಳಿದ್ದಾರೆ. ಈಗ ದರ್ಶನ್ 2ನೇ ಬಾರಿ ಜೈಲಿಗೆ ಹೋಗಿರೋದು ಇದು ಯಾಕಾಯಿತು ಎಂದು ನಮಗೆ ಜೀರ್ಣಿಸಿಕೊಳ್ಳೋಕೆ ಆಗುತ್ತಿಲ್ಲ ಎಂದು ಕೂಡ ವಿನೋದ್ ರಾಜ್ ಹೇಳಿದ್ದಾರೆ.
ಆ ನಂತರ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾಗಿ ಬಂದು ಮಾತನಾಡಿದ ವಿನೋದ್ ರಾಜ್, ದರ್ಶನ್ ನೋಡಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಆದರೆ ಅಲ್ಲಿ ಪ್ರಾಣ ಕಳೆದುಕೊಂಡ ತಂದೆ ತಾಯಿ ನೋವು ದೊಡ್ಡದು. ಆತನ ಹೆಂಡತಿ ಗರ್ಭದಲ್ಲಿರುವ ಮಗು ಎಲ್ಲವನ್ನು ನೆನೆಸಿಕೊಂಡರೆ ತುಂಬಾ ನೋವಾಗುತ್ತೆ ಎಂದಿದ್ದಾರೆ. ದೇವರ ದಯೆಯಿಂದ ಎಲ್ಲಾ ಸರಿ ಹೋಗಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಪ್ರಾರ್ಥನೆ ಮಾಡಿದ್ದಾರೆ. ಅಣ್ಣಾ ಎಂದು ಬಾಯಿ ತುಂಬಾ ಹೇಳುವ ದರ್ಶನ್ ಹೀಗೆ ಆಯ್ತಲ್ಲ ಎಂದು ನೋವಾಗುತ್ತಿದೆ ಎಂದಿದ್ದಾರೆ ವಿನೋದ್ ರಾಜ್ .


Click it and Unblock the Notifications











