ದರ್ಶನ್ ಹಾಗೂ ರೇಣುಕಾಸ್ವಾಮಿ ಕುಟುಂಬ ಭೇಟಿ ವಿಚಾರ; ವಿನೋದ್ ರಾಜ್ ಬೇಸರ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರಾಜ್ಯದಲ್ಲಿ ಸುದ್ದಿ ಆಗುತ್ತಲೇ ಇದೆ. ನಟ ದರ್ಶನ್ ಸೇರಿ ಪ್ರಕರಣದ 17 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕುಟುಂಬ ಸದಸ್ಯರು ಹಾಗೂ ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೋಡಿ ದರ್ಶನ್ ಜೊತೆ ಮಾತಾಡಿ ಬರುತ್ತಿದ್ದಾರೆ.
ನಟ ವಿನೋದ್ ರಾಜ್ ಕೂಡ ಇತ್ತೀಚೆಗೆ ದರ್ಶನ್ ಭೇಟಿ ಮಾಡಿ ಬಂದಿದ್ದರು. ಅದರ ಬೆನ್ನಲ್ಲೇ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಭೇಟಿ ನೋಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. 1 ಲಕ್ಷ ರೂ. ಆರ್ಥಿಕ ಸಹಾಯ ಮಾಡಿದ್ದರು. ಆದರೆ ವಿನೋದ್ ರಾಜ್ ರಾಜಿ ಸಂಧಾನಕ್ಕೆ ಹೋಗಿದ್ದರು ಎನ್ನುವ ಅರ್ಥದಲ್ಲಿ ಚರ್ಚೆ ಆಗುತ್ತಿದೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ವೀಡಿಯೋ ಮಾಡಿ ಮಾತನಾಡಿರುವ ವಿನೋದ್ ರಾಜ್ "ನಾಲ್ಕೈದು ದಿನಗಳ ಹಿಂದೆ ನಾನು ದರ್ಶನ್ ಭೇಟಿಗೆ ಹೋಗಿದ್ದೆ. ಎರಡು ದಿನಗಳ ಬಳಿಕ ರೇಣುಕಾಸ್ವಾಮಿ ಮನೆಗೆ ತೆರಳಿದ್ದೆ. ಆದರೆ ಮಾಧ್ಯಮಗಳಲ್ಲಿ ನನಗೆ ಏನು ಅರ್ಥ ಆಯ್ತು ಅಂದ್ರೆ ನಾನು ರಾಜಿ ಸಂಧಾನಕ್ಕೆ ಹೋಗಿದ್ದೆ ಎನ್ನುವಂತೆ ಹೇಳಲಾಗ್ತಿದೆ"
"ನಾನು ಕಂಡಿತ ಯಾವುದೇ ರಾಜಿ ಮಾಡಲು ಹೋಗಿರಲಿಲ್ಲ. ದರ್ಶನ್ ಒಬ್ಬ ಕಲಾವಿದ. ನನಗೆ ಪರಿಚಯ. ಹಾಗಾಗಿ ಭೇಟಿ ಮಾಡಿ ಬಂದೆ. ರೇಣುಕಾಸ್ವಾಮಿ ಪತ್ನಿ ಗರ್ಭೀಣಿ. ಹುಟ್ಟುವ ಮಗುವಿಗೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವ ಉದ್ದೇಶದಿಂದ ನನ್ನ ಕೈಲಾಗಿದ್ದು ಮಾಡಿದೆ. ಯಾವುದೇ ರಾಜಿ ಸಂಧಾನಕ್ಕೆ ಹೋಗಲಿಲ್ಲ, ಅದು ಸಾಧ್ಯವೂ ಇಲ್ಲ" ಎಂದಿದ್ದಾರೆ.

ರಾಜಿ ಸಂಧಾನದ ಬಗ್ಗೆ ಇತ್ತೀಚೆಗೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡಗೂ ಪ್ರಶ್ನೆ ಎದುರಾಗಿತ್ತು. ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದರು. ಯಾವುದೇ ಕಾರಣಕ್ಕೂ ಸಂಧಾನ ಮಾಡಿಕೊಳ್ಳಲ್ಲ ಎಂದು ಅವರು ಹೇಳಿದ್ದರು. ಪ್ರಕರಣದ ತನಿಖೆ ನಡೆಯುತ್ತಿದೆ. ಅಂತೆಕಂತೆ ಸುದ್ದಿ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ದರ್ಶನ್ ಬಗ್ಗೆ ಆಗಲಿ, ಮಂತ್ರಿಗಳ ಬಗ್ಗೆ ಆಗಲಿ ಯಾವುದೇ ಹೇಳಿಕೆ ಕೊಡಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮಾತು ಮುಂದುವರೆಸಿದ್ದ ಅವರು ಒಂದು ವೇಳೆ ದರ್ಶನ್ ನಮ್ಮ ಮನೆಗೆ ಬಂದರೆ ಬರಲಿ. ಅವತ್ತು ಏನಾಗುತ್ತೋ ನೋಡೋಣ. ನಾವು ಯಾರನ್ನು ಶತ್ರು ಎಂದು ಭಾವಿಸಲ್ಲ. ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಯಾರೇ ಮನೆಗೆ ಬರ್ತೀನಿ ಅಂದ್ರು ಬನ್ನಿ ಎಂದು ಸ್ವಾಗತಿಸುತ್ತೇವೆ. ಬಂದ್ರೆ ಬನ್ನಿ ಕೂತ್ಕೊಳಿ, ಊಟ ಮಾಡಿ ಹೋಗಿ ಅಂತೀವಿ ಅಷ್ಟೇ. ಅವರು ಬಂದು ಕ್ಷಮೆ ಕೇಳುವ ಬಗ್ಗೆ ಈಗ ಯಾಕೆ ಮಾತಾಡೋಣ. ದರ್ಶನ್ ಬರಲಿ ಆಗ ನೋಡೋಣ ಎಂದಿದ್ದರು.
ವಿನೋದ್ ರಾಜ್ ಬಳಿಕ ಪೋಷಕ ನಟ ಗಣೇಶ್ ರಾವ್ ಕೂಡ ಮೃತ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ರೇಣುಕಾಸ್ವಾಮಿ ಕುಟುಂಬಸ್ಥರ ಎದುರು ದರ್ಶನ್ ಪರ ವಹಿಸಿ ಮಾತನಾಡಿದ್ದರು. "ನಾನು ದರ್ಶನ್ ಜೊತೆ 13 ಸಿನಿಮಾಗಳಲ್ಲಿ ನಟಿಸಿದ್ದೀನಿ. ಅವರು ಅಷ್ಟು ಕ್ರೂರಿ ಅಲ್ಲ. ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಅವರ ಹೆಸರು ಮುಂಚೂಣಿಗೆ ಬರುತ್ತಿದೆ. ಅವರು ಈ ಮಟ್ಟಕ್ಕೆ ಇಳಿಯುವ ಮನುಷ್ಯ ಅಲ್ಲ ಅಂತ ನನ್ನ ಆತ್ಮಸಾಕ್ಷಿ ಹೇಳುತ್ತಿದೆ. ಸಂಗಡಿಗರು ಮಾಡಿರೋದ್ರಿಂದ ಅದರ ಅಪವಾದ ದರ್ಶನ್ ಮೇಲೆ ಬಂದಿದೆ" ಎಂದಿದ್ದರು.


Click it and Unblock the Notifications











