ಆ ದ್ವೇಷದಿಂದ ನಾನು ಡಾ. ರಾಜ್ ಬಗ್ಗೆ ಕೆಟ್ಟದಾಗಿ ಮಾತನಾಡ್ದೆ.. ನಾನು ಮಾಡಿದ್ದು ತಪ್ಪು.. ಕ್ಷಮಿಸಿ
ವಿಷ್ಣುವರ್ಧನ್ ಸಮಾಧಿ ತೆರವು ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಶುರುವಾಗಿದೆ. ಕೆಲವರು ಸುಖಾಸುಮ್ಮನೆ ಅಣ್ಣಾವ್ರ ಫ್ಯಾಮಿಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ವಿನೋದ್ ಶೆಟ್ಟಿ ಎಂಬ ವ್ಯಕ್ತಿ ಡಾ. ರಾಜ್‌ಕುಮಾರ್ ಕುಟುಂಬ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವೀಡಿಯೋ ಹರಿಬಿಟ್ಟಿದ್ದರು.
ಅಣ್ಣಾವ್ರು, ಶಿವಣ್ಣ, ಅಪ್ಪು, ರಾಘಣ್ಣ ಬಗ್ಗೆ ಬಾಯಿ ಬಂದಂತೆ ಮಾತನಾಡಿದ್ದರು. ಸಾಲದ್ದಕ್ಕೆ ತಮ್ಮ ಫೋನ್ ನಂಬರ್ ಹಾಕಿ ಯಾವುದೇ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದರು. ಇದು ಸಹಜವಾಗಿಯೇ ರಾಜವಂಶ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಗರಂ ಆಗಿ ಆ ನಂಬರ್‌ಗೆ ಕರೆ ಮಾಡಿ ಚಳಿ ಬಿಡಿಸಿದ್ದರು. ಇದೀಗ ವಿನೋದ್ ಶೆಟ್ಟಿ ಎಂಬ ಆ ವ್ಯಕ್ತಿ ಕ್ಷಮೆ ಕೋರಿ ಮತ್ತೊಂದು ವೀಡಿಯೋ ಹಂಚಿಕೊಂಡಿದ್ದಾರೆ. ಅಣ್ಣಾವ್ರ ಫ್ಯಾಮಿಲಿ ಬಗ್ಗೆ ತಾನು ಕೆಟ್ಟದಾಗಿ ಮಾತನಾಡಲು ಕಾರಣ ಏನು ಎಂದು ಕೂಡ ಹೇಳಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರು ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿನೋದ್ ಶೆಟ್ಟಿ ವೀಡಿಯೋ ಮಾಡಿ ಮಾತನಾಡಿ "ಕರ್ನಾಟಕದ ಜನರಲ್ಲಿ ಒಂದು ಮನವಿ ಹಾಗೂ ಕ್ಷಮೆ ಇದೆ. ರಾಜ್‌ಕುಮಾರ್ ಅವ್ರ ಬಗ್ಗೆ ನಾನು ಮಾತನಾಡಬಾರದಿತ್ತು. ಇದಕ್ಕೆ ಕಾರಣ ಏನಂದ್ರೆ, ಈ ಹಿಂದೆ ವಿಷ್ಣುವರ್ಧನ್ ಸಮಾಧಿ ಬಗ್ಗೆ ಮನವಿ ಮಾಡಿ ಸರ್ಕಾರಕ್ಕೆ ಒಂದು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದೆ. ಆಗ ರಾಜ್ ಅಭಿಮಾನಿಗಳು ನನ್ನ ಬಗ್ಗೆ ಇದಕ್ಕಿಂತ ಕೆಟ್ಟದಾಗಿ ಮಾತನಾಡಿದ್ದರು. ನನ್ನ ಬಗ್ಗೆ ಮಾತನಾಡಿದ್ರೆ ತೊಂದರೆ ಇರಲಿಲ್ಲ. ಆದರೆ ವಿಷ್ಣು ಅಪ್ಪಾಜಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ರು. ಆ ದ್ವೇಷದಿಂದ, ಸಮಾಧಿ ಹೊಡೆದು ಹಾಕಿದ ಬೇಸರದಲ್ಲಿ ನಾನು ಈ ರೀತಿ ಮಾತನಾಡಿ ವೀಡಿಯೋ ಮಾಡಿದ್ದೆ" ಎಂದಿದ್ದಾರೆ.
"ರಾಜ್ ಕುಟುಂಬದಿಂದ ನನಗೆ ಒಂದು ಪೈಸೆ ಅನ್ಯಾಯ ಆಗಿಲ್ಲ. ಮೋಸ ಆಗಿಲ್ಲ. ಆದೆರೆ ದೊಡ್ಮನೆ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ಅದಕ್ಕೆ ಕ್ಷಮೆ ಇರಲಿ. ದಯವಿಟ್ಟು ರಾಜ್ ಕುಟುಂಬ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರಿಗೆ ಜಾಗ ಕೊಟ್ಟಂತೆ ವಿಷ್ಣು ಅವರಿಗೂ ಜಾಗ ಕೊಡಬೇಕು" ಎಂದು ವಿನೋದ್ ಶೆಟ್ಟಿ ಮನವಿ ಮಾಡಿದ್ದಾರೆ.
ಸ್ಟಾರ್ ನಟರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೇ ಇದ್ದರೂ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಹುಚ್ಚಾಟ ಹೀಗೆ ಮಿತಿ ಮೀರುತ್ತಿದೆ. ಇದರಿಂದ ಕಲಾವಿದರಿಗೂ ಅವರ ಅಭಿಮಾನಿಗಳಿಗೂ ಬೇಸರವಾಗುತ್ತದೆ. ಸೋಶಿಯಲ್ ಮೀಡಿಯಾ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ. ಯಾರಾದರೂ ತಿರುಗಿ ಬಿದ್ದರೆ ಬಳಿಕ ಕ್ಷಮೆ ಕೇಳಿ ಸುಮ್ಮನಾಗುತ್ತಾರೆ. ಮೊದಲು ಮಾತಿನ ಮೇಲೆ ನಿಗಾ ಇರಬೇಕು. ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎನ್ನುವುದನ್ನು ಮರೆಯಬಾರದು. ಇನ್ನಾದರೂ ಇಂತಹ ದುಸ್ಸಾಹಸಕ್ಕೆ ಯಾರು ಪ್ರಯತ್ನಿಸಬಾರದು.
ದಾದಾ ಸಮಾಧಿ ಧ್ವಂಸ ವಿಚಾರ ಅಭಿಮಾನಿಗಳಿಗೆ ನೋವು ತಂದಿದೆ. ಮತ್ತೆ ಅದೇ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಸುದೀಪ್ ಸೇರಿ ಸಿನಿಮಾ ತಾರೆಯರು ಬೆಂಬಲ ಸೂಚಿಸಿದ್ದಾರೆ. ಇದೆಲ್ಲದರ ನಡುವೆ ಕೆಲವರ ಹುಚ್ಚಾಟ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ. ಆಗಬೇಕಿರುವ ಕೆಲಸ ಬಿಟ್ಟು ಹೀಗೆ ಬೇರೆಯವರನ್ನು ಆರೋಪಿಸುತ್ತಾ, ಮತ್ತೊಬ್ಬರ ಕುರಿತು ಕೆಟ್ಟದಾಗಿ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಹೀಗೆ ಕೆಟ್ಟದಾಗಿ ಮಾತನಾಡುವವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಅಣ್ಣಾವ್ರ ಅಭಿಮಾನಿ ಎನ್. ಆರ್ ರಮೇಶ್ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











