ಅಣ್ಣಾವ್ರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವ್ಯಕ್ತಿಯ ಬಂಧನ!
ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ಧ್ವಂಸವಾಗಿತ್ತು. ಇದರ ಬೆನ್ನಲ್ಲೇ ವಿಷ್ಣು ಅಭಿಮಾನಿ ಎಂದು ಹೇಳಿಕೊಂಡು ಡಾ. ರಾಜ್‌ಕುಮಾರ್ ಕುಟುಂಬದವರ ಬಗ್ಗೆ ವಿನೋದ್ ಶೆಟ್ಟಿ ಎಂಬ ವ್ಯಕ್ತಿ ಅವಹೇಳಕಾರಿಯಾಗಿ ಮಾತನಾಡಿದ್ದರು. ಆತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಅಣ್ಣಾವ್ರ ಕುಟುಂಬದ ಬಗ್ಗೆ ವಿನೋದ್ ಶೆಟ್ಟಿ ಕೆಟ್ಟದಾಗಿ ಮಾತನಾಡಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಕೆಂಡಾಮಂಡಲವಾಗಿತ್ತು. ವಿನೋದ್ ಶೆಟ್ಟಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ವೀಡಿಯೋ ಮಾಡಿ ಆತ ಕ್ಷಮೆ ಕೇಳಿದ್ದರು. ತಾನು ಆ ರೀತಿ ಮಾತನಾಡುವುದಕ್ಕೆ ಕಾರಣ ಏನು ಎನ್ನುವುದನ್ನು ತಿಳಿಸಿದ್ದರು. ಈತನ ವಿರುದ್ಧ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ನೀಡಿದ ದೂರಿನ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಇದೀಗ ವಿನೋದ್ ಶೆಟ್ಟಿ ಪೊಲೀಸರ ಅತಿಥಿಯಾಗಿದ್ದಾರೆ.

ದಶಕಗಳಿಂದ ಸ್ಟಾರ್ ನಟರ ಅಭಿಮಾನಿಗಳ ನಡುವೆ ಸಂಘರ್ಷ, ಕೆಸರೆರಚಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಬಂದು ವೀಡಿಯೋ ಮಾತನಾಡುವುದು, ಆ ಮೂಲಕ ಮತ್ತೊಬ್ಬ ನಟನ ಅಭಿಮಾನಿಗಳನ್ನು ಕೆಣಕುವ ಸಾಹಸಕ್ಕೆ ಕೆಲವರು ಕೈ ಹಾಕುತ್ತಿದ್ದಾರೆ. ಇಂತವರಿಗೆ ಕೆಲವೊಮ್ಮೆ ತಕ್ಕ ಪಾಠ ಕಲಿಸುವ ಕೆಲಸವೂ ನಡೀತಿದೆ. ಆದರೂ ಬದಲಾಗುತ್ತಿಲ್ಲ. ವಿಷ್ಣುವರ್ಧನ್ ಸಮಾಧಿ ತೆರವು ವಿಚಾರಕ್ಕೆ ಕೆಲವರು ಅಣ್ಣಾವ್ರ ಕುಟುಂಬವನ್ನು ದೂಷಿಸಿ ಕಾಮೆಂಟ್ ಮಾಡಿದ್ದರು. ಅದರಲ್ಲಿ ವಿನೋದ್ ಶೆಟ್ಟಿ ಹುಚ್ಚಾಟ ಮೇರೆ ಮೀರಿತ್ತು.
ವಿಷ್ಣು ಬದುಕಿದ್ದಾಗಲೂ ನೋವು ಅನುಭವಿಸಿದ್ರು, ನಿಧನರಾದ ಬಳಿಕ ಕೂಡ ಸಂಕಷ್ಟ ಎದುರಿಸುವಂತಾಗಿದೆ. ಕೊನೆಗೆ ಅವರ ಸಮಾಧಿ ಕೂಡ ಧ್ವಂಸ ಮಾಡಿಬಿಟ್ಟರು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆಲ್ಲಾ ಕಾರಣ ಅಣ್ಣಾವ್ರ ಕುಟುಂಬ ಎನ್ನುವಂತೆ ವಿನೋದ್ ಶೆಟ್ಟಿ ಬಾಯಿಗೆ ಬಂದಂತೆ ಮಾತನಾಡಿದ್ದ ವೀಡಿಯೋ ವೈರಲ್ ಆಗಿತ್ತು. ಡಾ. ರಾಜ್‌ಕುಮಾರ್, ಶಿವಣ್ಣ, ಅಪ್ಪು, ರಾಘಣ್ಣ ಎಲ್ಲರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದ ವಿನೋದ್ ಶೆಟ್ಟಿ ಕೊನೆಗೆ ಫೋನ್ ನಂಬರ್ ಹಾಕಿ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದ್ದರು. ಅಣ್ಣಾವ್ರ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಂತೆ ಫೋನ್ ನಂಬರ್ ಸ್ವಿಚ್‌ಆಫ್ ಮಾಡಿಕೊಂಡು ವಿನೋದ್ ಸುಮ್ಮನಾಗಿದ್ದರು.

ವಿನೋದ್ ಶೆಟ್ಟಿ ಆಡಿದ್ದ ಮಾತುಗಳಿಗೆ ಸ್ವತಃ ವಿಷ್ಣುವರ್ಧನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಯಾವುದಕ್ಕೆ ಯಾವುದನ್ನೋ ಲಿಂಕ್ ಮಾಡಿ ಮಾತನಾಡಬಾರದು, ಅಲ್ಲದೇ ಅಣ್ಣಾವ್ರ ಮನೆಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಬಳಿಕ ಕ್ಷಮೆ ಕೇಳಿ ವೀಡಿಯೋ ಮಾಡಿದ್ದ ವಿನೋದ್ ಶೆಟ್ಟಿ "ನಾನು ಅಣ್ಣಾವ್ರ ಬಗ್ಗೆ ಆ ರೀತಿ ಮಾತನಾಡಬಾರದಿತ್ತು, ಈ ಹಿಂದೆ ವಿಷ್ಣು ದಾದಾ ಸಮಾಧಿ ಬಗ್ಗೆ ಮನವಿ ಮಾಡಿ ಸರ್ಕಾರಕ್ಕೆ ಒಂದು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದೆ. ಆಗ ರಾಜ್ ಅಭಿಮಾನಿಗಳು ನನ್ನ ಬಗ್ಗೆ ಇದಕ್ಕಿಂತ ಕೆಟ್ಟದಾಗಿ ಮಾತನಾಡಿದ್ದರು. ನನ್ನ ಬಗ್ಗೆ ಮಾತನಾಡಿದ್ರೆ ಪರವಾಗಿಲ್ಲ. ಆದರೆ ವಿಷ್ಣು ಅಪ್ಪಾಜಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ರು. ಆ ದ್ವೇಷದಿಂದ, ಸಮಾಧಿ ಹೊಡೆದು ಹಾಕಿದ ಬೇಸರದಲ್ಲಿ ನಾನು ಈ ರೀತಿ ಮಾತನಾಡಿ ವೀಡಿಯೋ ಮಾಡಿದ್ದೆ" ಎಂದಿದ್ದರು.
ಅದೇ ವೀಡಿಯೋದಲ್ಲಿ "ರಾಜ್ ಕುಟುಂಬದಿಂದ ನನಗೆ ಒಂದು ಪೈಸೆ ಅನ್ಯಾಯ ಆಗಿಲ್ಲ. ಮೋಸ ಆಗಿಲ್ಲ. ಆದರೆ ದೊಡ್ಮನೆ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ಅದಕ್ಕೆ ಕ್ಷಮೆ ಇರಲಿ" ಎಂದು ವಿನೋದ್ ಶೆಟ್ಟಿ ಕ್ಷಮೆ ಕೇಳಿದ್ದರು.


Click it and Unblock the Notifications











