ಕೊಲೆ ಆರೋಪಿ ದರ್ಶನ್ ಜೊತೆ ಸೇರಿ ಜೈಲು ಸಿಬ್ಬಂದಿ ಡಬಲ್ ಗೇಮ್?
ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲು ಸೇರಿದ ಮೇಲೆ ದರ್ಶನ್ ಬದಲಾಗುತ್ತಿದ್ದಾರೆ. ಪಶ್ಚಾತಾಪ ಪಡುತ್ತಿದ್ದಾರೆ. ಹೊರ ಬಂದ ಮೇಲೆ ಉತ್ತಮ ಜೀವನ ಸಾಗಿಸುತ್ತಾರೆ ಎಂದು ಆಪ್ತರು ಹೇಳುತ್ತಿದ್ದರು. ಇನ್ನು ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ದರ್ಶನ್ ಇದ್ದಾರೆ. ಅವರಿಗೆ ಯಾವುದೇ ವಿಶೇಷ ಸೌಲಭ್ಯ ಕಲ್ಪಿಸಿಲ್ಲ ಎನ್ನಲಾಗಿತ್ತು.
ಅದೊಂದು ಫೋಟೊ, ವೀಡಿಯೋ ದರ್ಶನ್ ಜೈಲು ಜೀವನ ಹೇಗಿದೆ? ಎಷ್ಟು ಆರಾಮಾಗಿ ಎಂಜಾಯ್ ಮಾಡಿಕೊಂಡಿದ್ದಾರೆ. ನಟೋರಿಯಸ್ ರೌಡಿಗಳ ಜೊತೆ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದಾರೆ? ಜೈಲಿನ ಒಳಗಿನಿಂದ ಹೊರಗಡೆ ಇರುವವರ ಜೊತೆ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ ಎನ್ನುವುದು ಬಯಲಾಗಿದೆ. ಒಂದ್ಕಡೆ ಮನೆಊಟ ಬೇಕು ಎಂದು ಕೋರ್ಟ್ ಮೊರೆ ಹೋಗಿ ಮತ್ತೊಂದು ಕಡೆ ಎಲ್ಲಾ ತರಹದ ಊಟ, ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.

ಜೈಲಿನಲ್ಲಿರುವ ವಿಲ್ಸನ್ ಗಾರ್ಡನ್ ನಾಗ ಎನ್ನುವ ನಟೋರಿಯಸ್ ರೌಡಿಯ ಆಪ್ತರ ಮೂಲಕ ದರ್ಶನ್ ಹೊರಗಿನಿಂದ ಬಿರಿಯಾನಿ ಕೂಡ ಸಪ್ಲೇ ಆಗುತ್ತಿತ್ತು ಎನ್ನಲಾಗಿದೆ. ಅಲ್ಲಿಗೆ ಮನೆಊಟ ಬೇಕು, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ಕೇಳಿ ನಟ ದರ್ಶನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದೆಲ್ಲಾ ಸುಳ್ಳು ಎನ್ನುವುದು ಇದೀಗ ಜಗಜ್ಜಾಹೀರಾಗುತ್ತಿದೆ. ದರ್ಶನ್ ಹೀಗೆ ಜೈಲು ನಿಯಮಗಳನ್ನು ಮೀರಿ ವರ್ತಿಸಲು ಅಲ್ಲಿನ ಸಿಬ್ಬಂದಿಯೇ ಕಾರಣ ಎನ್ನುವುದು ಗೊತ್ತಾಗುತ್ತಿದೆ.
ದರ್ಶನ್ ಹೀಗೆ ನಟೋರಿಯಸ್ ರೌಡಿಗಳ ಜೊತೆ ಕೂಡ ಆರಾಮಾಗಿ ಸಿಗರೇಟ್ ಸೇದುತ್ತಾ ಕುಳಿತುಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. ಇದು ಜೈಲಿನಲ್ಲಿ ದುಡ್ಡಿದ್ದರೆ ರಾಜಾತಿಥ್ಯ ಸಿಗುತ್ತಾ? ಎನ್ನುವ ಪ್ರಶ್ನೆ ಮೂಡಿಸಿದೆ. ಇನ್ನು ಈ ಪ್ರಕರಣದಲ್ಲಿ 7 ಮಂದಿ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಹೆಚ್ಚಿನ ತನಿಖೆಗೆ ಸರ್ಕಾರ ಆದೇಶ ನೀಡಿದೆ. ಶೀಘ್ರದಲ್ಲೇ ದರ್ಶನ್‌ನ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಇಷ್ಟೆಲ್ಲಾ ಚರ್ಚೆ ನಡುವೆ ದರ್ಶನ್ ಜೊತೆ ಸೇರಿ 2 ತಿಂಗಳಿಂದ ಜೈಲು ಸಿಬ್ಬಂದಿ ಡಬಲ್ ಗೇಮ್ ಆಡಿದ್ರಾ? ಎನ್ನುವ ಚರ್ಚೆ ನಡೆಯುತ್ತಿದೆ. ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ ಎನ್ನುವ ಬಗ್ಗೆ ಹೊರಗಡೆ ಸುಳ್ಳು ಸುದ್ದಿ ಹರಡುವಂತೆ ಮಾಡಿ ಒಳಗೊಳಗೆ ಆತನಿಗೆ ಬೇಕಾದ್ದನ್ನೆಲ್ಲಾ ಸರಬರಾಜು ಮಾಡುತ್ತಿದ್ರಾ? ಅಥವಾ ದರ್ಶನ್ ಬಿಂದಾಸ್ ಲೈಫ್ ನೋಡಿಯೂ ನೋಡದಂತೆ ಸುಮ್ಮನಿದ್ರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.
ಸದ್ಯ ಫೋಟೊ, ವೀಡಿಯೋ ಹೊರಬಂದು ಸತ್ಯ ಬಯಲಾಗಿದೆ. ಈಗಾಗಲೇ 3 ಎಫ್‌ಐಆರ್ ದಾಖಲಾಗಿದೆ. 2 ಎಫ್‌ಐಆರ್‌ಗಳಲ್ಲಿ ದರ್ಶನ್ A1 ಆಗಿದ್ದಾರೆ. ಜೈಲಿನ ಒಳಗೆ ಸಾರ್ವಜನಿಕರಿಗೆ ಮಾಧ್ಯಮಗಳಿಗೆ ಪ್ರವೇಶವಿಲ್ಲ. ನಾಲ್ಕು ಗೋಡೆಗಳ ನಡುವೆ ಏನೆಲ್ಲಾ ನಡೆಯುತ್ತದೆ ಎನ್ನುವುದು ಒಳಗೆ ಇರುವವರಿಗೆ ಮಾತ್ರ ಗೊತ್ತು. ಹಾಗಾಗಿ ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ? ಎನ್ನುವ ಬಗ್ಗೆ ಅಂತೆಕಂತೆ ಸುದ್ದಿ ಹೆಚ್ಚು ಹರಿದಾಡಿತ್ತು.

ದರ್ಶನ್‌ಗೆ ಜೈಲಿನ ಊಟ ಸೇರುತ್ತಿಲ್ಲ. ಅಜೀರ್ಣವಾಗಿ ವಾಂತಿ, ಭೇದಿ ಆಗುತ್ತಿದೆ. ಊಟ, ನಿದ್ದೆ ಸರಿಯಾಗಿ ಇಲ್ಲದೇ ದೇಹದ ತೂಕ ಕಳೆದುಕೊಂಡಿದ್ದಾರೆ. ವಿಗ್ ತೆಗೆದು ತಲೆ ಬೋಳಿಸಿಕೊಂಡಿದ್ದಾರೆ. ಪಶ್ಚಾತ್ತಾಪ ಪಡುತ್ತಿದ್ದಾರೆ. ವಿಐಪಿ ಸೆಲ್ 60ರಲ್ಲಿ ಒಬ್ಬರೇ ಇದ್ದಾರೆ. ಯಾರನ್ನು ಭೇಟಿ ಆಗುತ್ತಿಲ್ಲ. ಇತರೆ ಕೈದಿಗಳನ್ನು ಭೇಟಿ ಮಾಡದೇ ಸುಮ್ಮನಿದ್ದಾರೆ. ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರವನ್ನೇ ಕೊಡುತ್ತಿದ್ದೇವೆ ಎಂದು ಜೈಲು ಸಿಬ್ಬಂದಿ ಪರೋಕ್ಷವಾಗಿ ಸುದ್ದಿ ಹರಡಿದ್ದರು. ಆದರೆ ಒಳಗೊಳಗೆ ಎಲ್ಲಾ ಸೌಲಭ್ಯ ಒದಗಿಸುತ್ತಾ ಬಂದಿದ್ದಾರೆ.
ಒಂದ್ಕಡೆ ಮನೆಊಟಕ್ಕಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಅನುಕಂಪ ಹುಟ್ಟುವಂತೆ ಮಾಡಿ ಮತ್ತೊಂದು ಕಡೆ ರಾಜಾರೋಷವಾಗಿ ದರ್ಶನ್ ಎಲ್ಲಾ ಸೌಲಭ್ಯ ಪಡೆಯುತ್ತಿದ್ರಾ? ಎನ್ನುವ ಅಚ್ಚರಿ ಮೂಡಿದೆ. ಹಾಗಿದ್ದರೆ ದುಡ್ಡಿದ್ದರೆ ಜೈಲಿನಲ್ಲಿ ಯಾರು ಯಾವ ಸೌಲಭ್ಯ ಬೇಕಾದರೂ ಪಡೆಯಬಹುದು ಎನ್ನುವುದು ನಿಜವಾದಂತೆ ಆಗಿದೆ. ಮನೆಊಟ ಅರ್ಜಿ ನಾಟಕಕ್ಕೆ ಜೈಲು ಸಿಬ್ಬಂದಿಯೇ ಸ್ಕ್ರಿಪ್ಟ್ ಬರೆದ್ರಾ? ಎನ್ನುವ ಅನುಮಾನವೂ ಕಾಡುತ್ತದೆ.
ದರ್ಶನ್ ಜೈಲಿನಲ್ಲಿ ಹೇಗಿದ್ದಾರೋ? ಹೊರಗಡೆ ಐಷಾರಾಮಿ ಜೀವನ ನಡೆಸುತ್ತಿದ್ದವರು ಒಳಗಡೆ ವಿಚಾರಣಾಧೀನ ಕೈದಿಯಾಗಿ ಯಾವ ಸ್ಥಿತಿಯಲ್ಲಿದ್ದಾರೋ? ಎಂದು ಕೆಲ ಅಭಿಮಾನಿಗಳು ಆತಂಕಗೊಂಡಿದ್ದರು. ಸುಖದ ಸುಪ್ಪತ್ತಿಗೆಯಲ್ಲಿದ್ದ ಸ್ಟಾರ್ ನಟನಿಗೆ ಇಂತಹ ಗತಿ ಬರಬಾರದಿತ್ತು ಎಂದು ಕೆಲವರು ಬೇಸರಗೊಂಡಿದ್ದರು. ಆದರೆ ಜೈಲಿನ ಅಸಲಿ ಕಹಾನಿ ಬೇರೇನೆ ಇದೆ. ದರ್ಶನ್ ಜಾಲಿ ಜೀವನಕ್ಕೆ ಜೈಲು ಸಿಬ್ಬಂದಿಯೇ ಸಾಥ್ ಕೊಟ್ಟಿದ್ದಾರೆ. ಜೈಲು ಸಿಬ್ಬಂದಿ ಜೊತೆ ಸೇರಿ ದರ್ಶನ್ ಎಲ್ಲರ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನ ಮಾಡಿರೋದು ಗೊತ್ತಾಗುತ್ತಿದೆ.


Click it and Unblock the Notifications











