ಜೈಲಿಂದ ದರ್ಶನ ನೀಡಿದ ದಾಸ ; ಪವಿತ್ರಾ ಗೌಡ ಮುಖದಲ್ಲಿ ಕಾಣದ ಪಶ್ಚಾತಾಪದ ಕುರುಹು
ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ಘನತೆ, ಗೌರವವನ್ನು ಮಣ್ಣು ಪಾಲು ಮಾಡಿದ ಕುಖ್ಯಾತಿ ಪವಿತ್ರಾ ಗೌಡಗೆ ಸಲ್ಲುತ್ತೆ. ಕೇವಲ ದರ್ಶನ್ ಮಾತ್ರವಲ್ಲ ದರ್ಶನ್ ಜೊತೆ ಒಳ ಹೋದ ಇನ್ನು ಕೆಲ ಹುಡುಗರ ಬದುಕು ಕೂಡ ಬರ್ಬಾದ್ ಆಗಿದೆ. ಆದರೆ.. ಈ ರಾದ್ಧಾಂತಕ್ಕೆ ಎಲ್ಲ ತಾನೇ ಕಾರಣ ಎನ್ನುವ ಪಾಪಪ್ರಜ್ಞೆಯಾಗಲಿ.. ಪಶ್ಚಾತಾಪವಾಗಲಿ.. ಪವಿತ್ರಾ ಗೌಡಗೆ ಇಲ್ಲವೇ ಇಲ್ಲ.
ಬದಲಿಗೆ ಮಹತ್ತರ ಸಾಧನೆಯನ್ನು ಮಾಡಿದ ಖುಷಿ ಪವಿತ್ರಾ ಗೌಡ ಅವರಲ್ಲಿ ಇದ್ದಂತೆ ಇದೆ. ಎರಡನೇ ಬಾರಿ ಜೈಲಿಗೆ ಹೋದರೂ ಕೂಡ ಪವಿತ್ರಾ ಗೌಡ ಅವರ ದರ್ಪ.. ಅಹಂ.. ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಜೈಲಿಂದ ತೂರಿಕೊಂಡು ಬಂದು ವೈರಲ್ ಆದ ಫೋಟೊಗಳೇ ಸಾಕ್ಷಿ.

ಹೌದು, ದರ್ಶನ್ ಮತ್ತು ಪವಿತ್ರಾ ಗೌಡ ಪರಪ್ಪನ ಅಗ್ರಹಾರದ ಪಾಲಾಗುವ ಮುನ್ನ, ಇವರಿಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಆ ನಂತರ ಎಲ್ಲರ ಬೆರಳಚ್ಚು ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ್ದರು.
ಇನ್ನು ಇದೇ ಸಮಯದಲ್ಲಿಅನ್ನಪೂರ್ಣೇಶ್ವರಿ ನಗರ ಪೊಲೀಸರು ಫೋಟೊಗಳನ್ನು ತೆಗೆದುಕೊಂಡರು. ಯಾಕೆಂದರೆ.. ನಿಯಮವೇ ಆ ರೀತಿ ಇದೆ. ಜೈಲು ಪಾಲಾದ ಎಲ್ಲ ಖೈದಿಗಳ ಪೋಟೋಗಳನ್ನು ಕೂಡ ಪೊಲೀಸರು ಇದೇ ರೀತಿ ತೆಗೆಯುತ್ತಾರೆ. ಭವಿಷ್ಯದಲ್ಲಿ ಆರೋಪಿಗಳು ಬೇರೆ ಯಾವುದಾದರೂ ಕೇಸ್ ನಲ್ಲಿ ಭಾಗಿಯಾದರೇ ಆಗ ಆರೋಪಿಗಳ ಪೋಟೋ ಬೇಕಾಗುತ್ತೆ ಎಂಬ ಉದ್ದೇಶ ಇದರ ಹಿಂದೆ ಇದೆ.

ಹೀಗೆ ಫೋಟೊ ತೆಗೆಯುವ ಸಮಯದಲ್ಲಿ ದರ್ಶನ್ ದುಖದಲ್ಲಿಯೇ ನಿಂತಿದ್ದಾರೆ. ಅವರ ಮುಖದಲ್ಲಿ ಆ ದುಖ ಕಾಣುತ್ತೆ ಕೂಡ. ಆದರೆ.. ಪವಿತ್ರಾ ಗೌಡ ಮಾತ್ರ ಯಾವುದೋ ರೀಲ್ಸ್ ಮಾಡುತ್ತಿರುವಂತೆ.. ಫೋಟೊಶೂಟ್ ನಡೆಯುತ್ತಿರುವಂತೆ.. ನಕ್ಕಿದ್ದಾರೆ.
ಪವಿತ್ರಾ ಗೌಡ ಅವರ ಈ ನಗು ಸದ್ಯ ಹಲವರನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ದರ್ಶನ್ ಅವರ ವೀರಾಭಿಮಾನಿಗಳೇ ಪವಿತ್ರಾ ಗೌಡ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಚೂರಾದರೂ ಪಾಪಪ್ರಜ್ಞೆ ಬೇಡವಾ ? ದರ್ಶನ್ ಅವರ ಮುಖ ನೋಡಲು ಆಗುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಮತ್ತೊಂದು ಫೋಟೊದಲ್ಲಿ ಪವಿತ್ರಾ ಗೌಡ ಲಿಪ್‌ಸ್ಟಿಕ್ ಎದ್ದು ಕಾಣುತ್ತಿದೆ. ಕಳೆದ ಬಾರಿ ಪವಿತ್ರಾ ಗೌಡ ಬಂಧನವಾದಾಗ ಇದೇ ಲಿಪ್‌ಸ್ಟಿಕ್ ಕಾರಣಕ್ಕೆ, ಬಂಧನದಲ್ಲಿರುವ ಆರೋಪಿಗೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಪವಿತ್ರಾ ಗೌಡರ ಭದ್ರತೆ ವಹಿಸಿಕೊಂಡಿದ್ದ ವಿಜಯನಗರ ಮಹಿಳಾ ಪಿಎಸ್ಐಗೆ ರೂಲ್ ನಂಬರ್ 7ರಡಿ ಮೆಮೊ ನೀಡಿ ವಿವರಣೆ ಕೇಳಿದ್ದರು.
ಇನ್ನುಳಿದಂತೆ ಸಹವಾಸ ದೋಷದಿಂದ ಪರಪ್ಪನ ಅಗ್ರಹಾರಕ್ಕೆ ತೆರಳಿದ ದರ್ಶನ್, ಪೊಲೀಸರಿಗೆ ಶರಣಾಗುವ ಮುನ್ನ ತಮಿಳುನಾಡಿನ ಈರೋಡ್ ಜಿಲ್ಲೆಯ ಬಣ್ಣಾರಿಯಮ್ಮ ದೇವಾಲಯಕ್ಕೆ ತೆರಳಿದ್ದರು. ಅಲ್ಲಿ ದೇವರ ದರ್ಶನವನ್ನು ಪಡೆದು ತಲೆಯ ಕೂದಲನ್ನು ಮುಡಿಕೊಟ್ಟಿದ್ದರು. ಆದಾದ ಬಳಿಕ ಕೊಡಗಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದ ದರ್ಶನ್ ಹೊಸಕೆರೆ ಹಳ್ಳಿಯಲ್ಲಿರುವ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಮನೆಗೆ ಹೋಗಿದ್ದರು. ವಿಜಯ ಲಕ್ಷ್ಮಿ ಅವರ ಮನೆಯಲ್ಲಿ ಬಂಧಿಸಿ ಆ ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದರ್ಶನ್ ಅವರನ್ನು ಕರೆದುಕೊಂಡು ಬರಲಾಗಿತ್ತು.
ಸದ್ಯ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಉಳಿದ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದು ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಮತ್ತೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


Click it and Unblock the Notifications











