twitter
    For Quick Alerts
    ALLOW NOTIFICATIONS  
    For Daily Alerts

    ಯಜಮಾನ ಚಿತ್ರದ ನಂತರ ಏರಿದ ವಿಷ್ಣು ತಾರಾಮೌಲ್ಯ. ಈಗ ಚಿತ್ರವೊಂದಕ್ಕೆ ಅವರು ಪಡೆವ ಸಂಭಾವನೆ 36 ಲಕ್ಷ ರುಪಾಯಿ...!

    By Staff
    |

    *ಸತ್ಯನಾರಾಯಣ

    ವಿಷ್ಣುವರ್ಧನ್‌ ಬೆಲೆ ಏರಿದೆಯಂತೆ. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಹೊತ್ತಲ್ಲಿ ಕಲಾವಿದನ ಬೆಲೆ ಏರುವುದರಲ್ಲಿ ತಪ್ಪೇನಿದೆ ಎನ್ನುವುದು ವಿಷ್ಣು ವಾದವಾಗಿರಬಹುದು. ಆದರೆ ನಿರ್ಮಾಪಕನ ಬೆಲೆ ಮಾತ್ರ ದಿನೇದಿನೇ ದಿನೇದಿನೇ ಇಳಿಮುಖವಾಗುತ್ತಿದೆ ಅಂತಾರೆ ಜೈಜಗದೀಶ್‌.

    ವಿಷ್ಣು ಬೆಲೆ ಏರೋದಕ್ಕೆ ಕಾರಣ ಯಜಮಾನ ಚಿತ್ರದ ಯಶಸ್ಸು. ಹಾಗಾಗಿ ಯಜಮಾನದ ನಿರ್ಮಾಪಕ ರೆಹಮಾನ್‌ ಈಗ ಇತರೇ ನಿರ್ಮಾಪಕರ ಕಣ್ಣಿಗೆ ಖಳನಾಯಕನ ಥರ ಕಾಣಿಸುವುದಕ್ಕೆ ಶುರುವಾಗಿದ್ದಾರೆ. ಯಜಮಾನ ಚಿತ್ರಕ್ಕೆ ವಿಷ್ಣು ಪಡೆದ ಸಂಭಾವನೆ 30 ಲಕ್ಷ ರುಪಾಯಿ. ಈಗ ಅವರ ರೇಟ್‌ 36 ಲಕ್ಷ. ಅದನ್ನು ಎರಡು ಕಂತುಗಳಲ್ಲಿ ಕೊಡಬಹುದು.

    ವಿಚಿತ್ರವೆಂದರೆ ವಿಷ್ಣು ಕಾಲ್‌ಷೀಟ್‌ ಸಿಗುವುದಾದರೆ 36 ಏನು 40 ಕೊಡೋದಕ್ಕೂ ಸಿದ್ಧರಾಗಿರುವ ನಿರ್ಮಾಪಕರಿದ್ದಾರೆ. ಯಾಕೆಂದರೆ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಓಡುವ ಕುದುರೆಯೆಂದರೆ ವಿಷ್ಣು ಮಾತ್ರ. ಬೇರೆ ಸ್ಟಾರ್‌ಗಳಿಗೆ ಹತ್ತೋ, ಹದಿನೈದೋ ಲಕ್ಷ ಸುರಿದು ಕೈಸುಟ್ಟುಕೊಳ್ಳೋ ಬದಲಾಗಿ ವಿಷ್ಣು ಅವರ ಮೇಲೆ ಬಂಡವಾಳ ಹೂಡಿದರೆ ಮಿನಿಮಮ್‌ ಗ್ಯಾರಂಟಿ ಇರುತ್ತದೆ ಅನ್ನೋದು ನಿರ್ಮಾಪಕರ ಲೆಕ್ಕಾಚಾರ. ಸೂರಪ್ಪ ಬಾಬು, ಕೆ. ಮಂಜು, ರಾಮಸ್ವಾಮಿ, ವೈಜಾಕ್‌ ರಾಜು, ರೆಹಮಾನ್‌ ಮೊದಲಾದ ನಿರ್ಮಾಪಕರು ಈಗ ವಿಷ್ಣು ಬೆನ್ನಹಿಂದೆ ಬಿದ್ದಿದ್ದಾರೆ. ಇವರೆಲ್ಲರಿಗೂ ತಮಿಳು ಹಿಟ್‌ ಚಿತ್ರಗಳ ಕ್ಯಾಸೆಟ್‌ ಜೊತೆ ಬರೋದಕ್ಕೆ ವಿಷ್ಣು ಅಪ್ಪಣೆ ಕೊಡಿಸಿದ್ದಾರೆ. ಯಾಕೆಂದರೆ ರೀಮೇಕ್‌ ಚಿತ್ರಗಳಷ್ಟೇ ತನ್ನ ಮಾನ ಕಾಪಾಡೋದಕ್ಕೆ ಸಾಧ್ಯ ಎದು ಅವರು ಬಲವಾಗಿ ನಂಬಿದ್ದಾರೆ. ಒರಿಜಿನಲ್‌ ಕತೆ ಹೇಳಿ ವಿಷ್ಣು ಅವರನ್ನು ಒಪ್ಪಿಸುವಲ್ಲಿ ಈಗಾಗಲೇ ನಾಲ್ಕೈದು ಕತೆಗಾರರು ದಯನೀಯ ಸೋಲನ್ನು ಅನುಭವಿಸಿದ್ದಾರೆ.

    ಅನಾನುಕೂಲವೇ ವಿಷ್ಣು ಪಾಲಿಗೆ ಅನುಕೂಲ : ಕ್ಯಾಸೆಟ್‌ ನೋಡಿ ಕಾಲ್‌ಷೀಟ್‌ ಕೊಡುವ ವಿಷ್ಣು ನಿರ್ಧಾರದಿಂದಾಗಿ ನಿರ್ಮಾಪಕರೆಲ್ಲಾ ದಿನ ಬೆಳಗಾದರೆ ಮದ್ರಾಸಿಗೆ ಹೋಗಿ ಹೊಸ ಚಿತ್ರಗಳ ಕ್ಯಾಸೆಟ್‌ಗಾಗಿ ಅಲೆದಾಡುತ್ತಿದ್ದಾರೆ. ಅಲ್ಲೂ ಚೌಕಾಸಿಯಿದೆ. ರೀಮೇಕ್‌ ಚಿತ್ರದ ನಾಯಕನ ಪಾತ್ರ ವಿಷ್ಣು ಇಮೇಜ್‌ಗೆ ಒಗ್ಗಿಕೊಳ್ಳುವಂತಿರಬೇಕು. ಈಗ ಅವರು ಸಾಹಸ ಸಿಂಹನ ಪಾತ್ರ ಮಾಡ್ತಾ ಇಲ್ಲ. ಅದಕ್ಕೆ ಅವರೇ ನೀಡುವ ಕಾರಣವೆಂದರೆ ಬದಲಾದ ಮನೋಧರ್ಮ. ಆದರೆ ವಿಷ್ಣುವನ್ನು ಹತ್ತಿರದಿಂದಬಲ್ಲವರು ಬೇರೆಯೇ ಕಾರಣ ನೀಡುತ್ತಾರೆ. ವಿಷ್ಣು ಅವರು ಈಗ ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ. ಹಿಂದಿನಂತೆ ಹೊಡೆದಾಟದ ದೃಶ್ಯಗಳಲ್ಲಿ ಪಾಲ್ಗೊಳ್ಳುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಈ ಅನಾನುಕೂಲವೇ ವಿಷ್ಣು ಪಾಲಿಗೆ ಅನುಕೂಲವಾಗಿ ಪರಿಣಮಿಸಿದೆ. ಅವರು ವಯಸ್ಕನ ಪಾತ್ರಗಳಲ್ಲಿ ಕಾಣಿಸಿಕೊಂಡ ರೀಮೇಕ್‌ಗಳೆಲ್ಲಾ ಹಿಟ್‌ ಆಗಿವೆ. ಉದಾಹರಣೆಗೆ ಸೂರ್ಯವಂಶ, ಸೂರಪ್ಪ, ಯಜಮಾನ, ಇದೀಗ ಬೀಡುಗಡೆಗೆ ಸಿದ್ಧವಾಗುತ್ತಿರುವ ದಿಗ್ಗಜರು ಚಿತ್ರದಲ್ಲೂ ವಿಷ್ಣು ಹಿರಿಯಣ್ಣನಾಗಿ ನಟಿಸಿದ್ದಾರೆ.

    ಪಾತ್ರ ಎಷ್ಟೇ ಚೆನ್ನಾಗಿರಲಿ, ಸಂಭಾವನೆ ಮಟ್ಟಿಗೆ ಮಾತ್ರ ವಿಷ್ಣು ರಾಜಿ ಮಾಡಿಕೊಳ್ಳುವವರಲ್ಲ. ಅತಿಥಿ ಪಾತ್ರಕ್ಕೂ ವಿಷ್ಣು ಸಂಭಾವನೆ ಡಿಮ್ಯಾಂಡ್‌ ಮಾಡ್ತಾರೆ ಎನ್ನುವ ಸುದ್ದಿ ಬಂದಿದೆ. ಇದರ ಅನುಭವವಾಗಿದ್ದು ಜಯಶ್ರೀ ದೇವಿ ಅವರಿಗೆ. ಅವರ ಅದ್ಧೂರಿ ಚಿತ್ರ ಶ್ರೀ ಮಂಜುನಾಥ ದಲ್ಲಿ ಶಿವನ ಪಾತ್ರಕ್ಕಾಗಿ ದೇವಿ ಅವರು ವಿಷ್ಣುವನ್ನು ಸಂಪರ್ಕಿಸಿದರಂತೆ. ಅವರದೇ ಹಿಂದಿನ ಚಿತ್ರ ಹಬ್ಬದಲ್ಲಿ ವಿಷ್ಣು ವಟಿಸಿದ್ದರು. ಆದರೆ, ಶಿವನಾಗುವುದಕ್ಕೆ ವಿಷ್ಣು 20 ಲಕ್ಷ ಕೇಳಿದರಂತೆ. ದೇವಿ ಗಾಬರಿಯಾದಾಗ ವಿಷ್ಣು ಹೇಳಿದರಂತೆ, ಹಬ್ಬ ಚಿತ್ರದಲ್ಲಿ ನೀವು ಸಾಕಷ್ಟು ಸಂಪಾದನೆ ಮಾಡಿದ್ದೀರಲ್ಲ. ಈ ಮೊತ್ತ ಏನು ಮಹಾ? ಹಬ್ಬ ಚಿತ್ರದಲ್ಲಿ ಅಂಥಾ ಲಾಭವೇನೂ ಬಂದಿಲ್ಲ ಎಂದು ದೇವಿ ಹೇಳಿದಾಗ ಸಿಟ್ಟಾದ ವಿಷ್ಣು ನನ್ನನ್ನು ಹಾಕಿಕೊಂಡು ನಷ್ಟ ಅನುಭವಿಸುವುದಾದರೆ, ನನ್ನ ಕಾಲ್‌ಶೀಟ್‌ ಯಾಕೆ ಬೇಕು. ನಾನು ಮಾಡೋದಿಲ್ಲ ಎಂದರಂತೆ. ಹೀಗೆ ಮುಖಭಗ ಮಾಡಿಸಿಕೊಂಡು ಬಂದ ದೇವಿ ಕೊನೆಗೆ ಶಿವನ ಪಾತ್ರಕ್ಕೆ ಚಿರಂಜೀವಿ ಅವರನ್ನು ಹಾಕಿಕೊಂಡರು. ತತ್‌ಕ್ಷಣ ಗ್ರಾಮದೇವತೆ ಚಿತ್ರದ ನಿರ್ಮಾಪಕರನ್ನು ಸಂಪರ್ಕಿಸಿದ ವಿಷ್ಣು, ಆ ಚಿತ್ರದಲ್ಲಿ ಬರುವ ಶಿವನ ಪಾತ್ರವನ್ನು ತಾವು ಮಾಡುತ್ತೇನೆ ಅಂದರಂತೆ. ಎರಡೂ ಚಿತ್ರಗಳಲ್ಲಿ ಶಿವಂದಿರಿಗೆ ರುದ್ರ ತಾಂಡವ ನೃತ್ಯವಿದೆ. ಗೆಲ್ಲುವವರು ಯಾರು ಅನ್ನೋದು ಚಿತ್ರ ಹೊರಬಂದ ಮೇಲೆಯೇ ನಿರ್ಧಾರವಾಗಲಿದೆ.

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 6:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X