»   » ಕನಕಪುರ: ವಿಷ್ಣುವರ್ಧನ್‌ -ದೇವೇಗೌಡ -ಪ್ರೇಮಚಂದ್ರ ಸಾಗರ್‌

ಕನಕಪುರ: ವಿಷ್ಣುವರ್ಧನ್‌ -ದೇವೇಗೌಡ -ಪ್ರೇಮಚಂದ್ರ ಸಾಗರ್‌

Posted By: Super
Subscribe to Filmibeat Kannada

ವಿಷ್ಣುವರ್ಧನ್‌ ಕನಕಪುರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ? ವಿಷ್ಣು ಅಭಿಮಾನಿಗಳು ಮಾತ್ರವಲ್ಲ ; ವಿವಿಧ ರಾಜಕೀಯ ಪಕ್ಷಗಳ ವಲಯಗಳಲ್ಲೂ ಇವತ್ತಿನ ಚರ್ಚೆ ಇದೇನೇ! ವಿಷ್ಣುವರ್ಧನ್‌ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎನ್ನುವ ಸುದ್ದಿ ವಿಧಾನಸೌಧ ಮೊಗಸಾಲೆಯಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಈ ಸುದ್ದಿಯನ್ನು ಯಾರೂ ದೃಢೀಕರಿಸುತ್ತಿಲ್ಲ , ಅಲ್ಲಗಳೆಯುತ್ತಲೂ ಇಲ್ಲ.

ಎಂ.ವಿ.ಚಂದ್ರಶೇಖರ್‌ ಮೂರ್ತಿ ಅವರ ನಿಧನದಿಂದ ತೆರವಾದ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದು ಕಾಂಗ್ರೆಸ್‌ ಹಾಗೂ ಜಾತ್ಯತೀತ ಜನತಾದಳಗಳಿಗೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ. ಸ್ಥಾನ ಉಳಿಸಿಕೊಳ್ಳುವ ಸವಾಲು ಕಾಂಗ್ರೆಸ್‌ ಮುಂದಿದ್ದರೆ, ಕಾಂಗ್ರೆಸ್‌ನಿಂದ ಕನಕಪುರವನ್ನು ಕಸಿದುಕೊಳ್ಳಲು ಜಾತ್ಯತೀತ ಜನತಾದಳ ತೀವ್ರ ಯತ್ನ ನಡೆಸಿದೆ.

ಕಾಂಗ್ರೆಸ್‌ ಹಾಗೂ ಗೌಡರ ದಳಗಳ ಮೇಲಾಟದ ವಿಷಯವಾಗಿ ಮಾತ್ರ ಕನಕಪುರ ಉಳಿದಿಲ್ಲ . ಮರು ಚುನಾವಣೆಯಲ್ಲಿ ಸ್ವತಃ ದೇವೇಗೌಡರೇ ಸ್ಪರ್ಧಿಸುತ್ತಾರೆಂದು ಗೌಡರ ನಿಕಟವರ್ತಿಗಳು ಹೇಳುತ್ತಿದ್ದಾರೆ. ಹಾಸನ ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಸೋಲಿನಿಂದ ಕಂಗೆಟ್ಟಿರುವ ಗೌಡರಿಗೆ ಇನ್ನೂ ಮೂರು ವರ್ಷ ಕಾಯುವ ತಾಳ್ಮೆ ಉಳಿದಿಲ್ಲ ; ಅವರಿಗೀಗ ಇನ್‌ಸ್ಟಂಟ್‌ ಟಾನಿಕ್‌ ಬೇಕು! ಆ ಟಾನಿಕ್‌ ಕನಕಪುರ ಆಗಬಹುದೇ?

ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ ದೌರ್ಜನ್ಯವನ್ನು ಖಂಡಿಸಿ ಗೌಡರು ರಾಜ್ಯ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆ ಹಾಗೂ ಪಾದಯಾತ್ರೆಯಿಂದ ದೇವೇಗೌಡರು , ಕೃಷ್ಣ ಸರ್ಕಾರದ ವಿರುದ್ಧ ಯುದ್ಧ ಸಾರಿದ್ದು , ಕನಕಪುರದಲ್ಲಿ ಗೆಲ್ಲುವ ಮೂಲಕ ಆ ಯುದ್ಧವನ್ನು ಮುಂದುವರೆಸುವ ಹುಮ್ಮಸ್ಸಿನಲ್ಲಿದ್ದಾರೆ.

ವಿಷ್ಣು ಮನ ಒಲಿಸಲು ಅಂಬರೀಷ್‌ ರಾಯಭಾರ

ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸೋಲು ಕಾಣಲು ಬಯಸದ ಎಸ್‌.ಎಂ. ಕೃಷ್ಣ ಅವರು ಕನಕಪುರದಲ್ಲಿ ದೇವೇಗೌಡರ ವಿರುದ್ಧ ಪ್ರಬಲ ಸ್ಪರ್ಧಿಯನ್ನು ಇಳಿಸಲು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ಹೆಸರುಗಳು ಎರಡು. ಒಂದು ಮೃತ ಸಂಸದರ ಪತ್ನಿ , ಇನ್ನೊಂದು ವಿಷ್ಣುವರ್ಧನ್‌.

ಚಂದ್ರಶೇಖರ್‌ ಅವರ ಪತ್ನಿಗೆ ಟಿಕೆಟ್‌ ಕೊಡಲು ಸೋನಿಯಾಗಾಂಧಿ ಒಲವು ತೋರಿದ್ದಾರಂತೆ. ಆದರೆ, ರಾಜಕೀಯ ಅನನುಭವಿ, ಮಹಿಳೆ- ಗೌಡರ ಪಟ್ಟುಗಳಿಗೆ ತಕ್ಕ ಉತ್ತರ ಕೊಡುವುದು ಕಷ್ಟ . ಈ ಕಾರಣದಿಂದಾಗಿಯೇ ಕಾಂಗ್ರೆಸ್‌ ಜನಪ್ರಿಯ ನಟ ವಿಷ್ಣುವರ್ಧನ್‌ ಅವರನ್ನು ಓಲೈಸಲು ಪ್ರಯತ್ನಿಸುತ್ತಿದೆ. ವಿಷ್ಣು ಅವರ ಜೀವದ ಗೆಳೆಯ ಹಾಗೂ ಮಂಡ್ಯದ ಸಂಸದ ಅಂಬರೀಷ್‌ ವಿಷ್ಣು ಅವರ ಮನವೊಲಿಸುತ್ತಾರೆ ಅನ್ನುತ್ತದೆ ಒಂದು ಮೂಲ.

ವಿಷ್ಣುಗೆ ರಾಜಕೀಯ ಒಲ್ಲದ ಸಂಬಂಧವೇನಲ್ಲ . ಮಂಡ್ಯ ಚುನಾವಣೆಯಲ್ಲಿ ಅಂಬರೀಷ್‌ಗೆ ಮತ ಕೇಳಿದ್ದ ಅವರು, ಈ ಬಾರಿ ಕನಕಪುರದಲ್ಲಿ ತಮಗೆ ಓಟು ಕೇಳುತ್ತಾರೆನ್ನುವುದು ಸದ್ಯದ ವಿಶ್ಲೇಷಣೆ.

ಕಾಂಗ್ರೆಸ್‌ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಕೂಡ ವಿಷ್ಣು ವರ್ಧನ್‌ ಅವರ ಸ್ಪರ್ಧೆಯನ್ನು ಅಲ್ಲಗಳೆದಿಲ್ಲ . ವಿಷ್ಣು ಅವರ ಬಗ್ಗೆ ಕಾಂಗ್ರೆಸ್‌ಗೆ ಅಪಾರ ಗೌರವವಿದೆ. ಆದರೆ, ಚುನಾವಣಾ ದಿನಾಂಕ ಪ್ರಕಟವಾದ ನಂತರವೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎನ್ನುತ್ತಾರೆ ಅಲ್ಲಂ.

ಬಿಜೆಪಿ -ಸಂಯುಕ್ತದಳ ಪಾಳಯಗಳಲ್ಲೂ ಚಟುವಟಿಕೆ

ಪ್ರೇಮಚಂದ್ರ ಸಾಗರ್‌ ಅವರನ್ನು ಕನಕಪುರದಿಂದ ಕಣಕ್ಕಿಳಿಸಲು ಭಾರತೀಯ ಜನತಾಪಕ್ಷ ತೀವ್ರ ಪ್ರಯತ್ನ ನಡೆಸುತ್ತಿದೆ. ಕೇಂದ್ರ ಸಚಿವ ಅನಂತಕುಮಾರ್‌, ಸಾಗರ್‌ ಅವರ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ. ಈ ನಡುವೆ ಪಿಜಿಆರ್‌ ಸಿಂಧ್ಯಾ ಅವರನ್ನು ಕಣಕ್ಕಿಳಿಸಲು ಸಂಯುಕ್ತ ಜನತಾದಳ ಸಿದ್ಧತೆ ನಡೆಸುತ್ತಿದೆ. ಕೊನೆ ಕ್ಷಣಗಳ ಒಪ್ಪಂದದಲ್ಲಿ ಸಂಯುಕ್ತದಳ ಸ್ಪರ್ಧೆಯಿಂದ ವಿರಮಿಸಿ, ಗೌಡರನ್ನು ಬೆಂಬಲಿಸಿದರೆ ಅಚ್ಚರಿಯಿಲ್ಲ .

ವಿಷ್ಣುವರ್ಧನ್‌- ದೇವೇಗೌಡ- ಪ್ರೇಮಚಂದ್ರ ಸಾಗರ್‌ ; ತ್ರಿಕೋಣ ಸ್ಪರ್ಧೆಯ ಊಹೆ ಚೆನ್ನಾಗಿದೆಯಲ್ಲವೇ!?

English summary
Vishnuvardhan to contest in Kankapura Bi-elections ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada