»   » ನಿವೃತ್ತಿ ಅಂತಾನಾ ವಿಷ್ಣುವರ್ಧನ್‌ ನೇರವಾಗಿ ಉತ್ತರಿಸಲಿಲ್ಲ

ನಿವೃತ್ತಿ ಅಂತಾನಾ ವಿಷ್ಣುವರ್ಧನ್‌ ನೇರವಾಗಿ ಉತ್ತರಿಸಲಿಲ್ಲ

By: *ಸತ್ಯನಾರಾಯಣ
Subscribe to Filmibeat Kannada

ಈ ಹಿಂದೊಮ್ಮೆ ವಿಷ್ಣು ನಿವೃತ್ತಿ ಬಗ್ಗೆ ಮಾತಾಡಿದ್ದು ನಿಮಗೆ ನೆನಪಿರಬಹುದು. ಅದಾದ ನಂತರ ಅವರು ಮೂರು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದೂ ಗೊತ್ತಿದೆ. ವಿಷ್ಣು ನಿವೃತ್ತರಾಗಲಿಲ್ಲ. ನಿವೃತ್ತರಂತೆಯೇ ಮಾತಾಡುವುದಕ್ಕೆ ಶುರುಮಾಡಿದ್ದಂತೂ ನಿಜ. ಈಗಂತೂ ಅವರ ಮಾತು ಪ್ರವಚನದಂತೆಯೇ ಕೇಳಿಸುತ್ತದೆ. ಕೈ ಬೆರಳು ಪದೇ ಪದೇ ಆಕಾಶ ನೋಡುತ್ತದೆ. ಆದರೆ ಕ್ಯಾಮರಾ ಮುಂದೆ ನಿಂತಾಗ ಅವರಿನ್ನೂ 'ಸಾಹಸ ಸಿಂಹ". ಅದಕ್ಕೆ ಉದಾಹರಣೆಯೆಂದರೆ 'ಕೋಟಿಗೊಬ್ಬ"ಚಿತ್ರ.

ಪ್ರೇಕ್ಷಕರು ಕೂಡ ಇಂಥಾ ವಿರೋಧಾಭಾಸಗಳಿಗೆ ಹೊಂದಿಕೊಂಡಿದ್ದಾರೆ ಅನಿಸುತ್ತದೆ.ಯಜಮಾನದಂಥ ಚಿತ್ರದಲ್ಲಿ ಪಂಚೆ ಮೀಸೆಯ ಹಿರಿಯ ವಿಷ್ಣುವನ್ನು ಒಪ್ಪಿಕೊಂಡ ಜನ ಈಗ ಕೋಟಿಗೊಬ್ಬ ಚಿತ್ರದಲ್ಲಿ ಅವರ ಹಳೇ ವರಸೆಗಳನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿ ವಿಷ್ಣು ಡಾನ್‌ ಆಗುತ್ತಾರೆ, ಮರುಕ್ಷಣ ಆಟೋಚಾಲಕನಾಗುತ್ತಾರೆ. ಹೆಣ್ಮಕ್ಕಳ ಮಾನ ಕಾಪಾಡುವ ಆಪದ್ಬಾಂಧವನಾಗುತ್ತಾರೆ. ನಂಬಿದವರನ್ನು ಪೊರೆಯುವ, ಅವರಿಗಾಗಿ ಸರ್ವಸ್ವವನ್ನೂ ಪಣಕ್ಕಿಡುವ ತ್ಯಾಗಮಯಿಯಾಗುತ್ತಾರೆ. ತಮ್ಮ ಎಡಗಾಲನ್ನು ಖಳನಾಯಕನ ಭುಜದೆತ್ತರಕ್ಕೆ ಎತ್ತಿ ಸಾಹಸ ಸಿಂಹನಾಗುತ್ತಾರೆ. ಬಣ್ಣ ಬಣ್ಣದ ಉಡುಪು ಧರಿಸಿ, ಚೆಲುವೆಯಾಂದಿಗೆ ನರ್ತಿಸುತ್ತಾ ಚೆಲುವ ಚೆನ್ನಿಗನಾಗುತ್ತಾರೆ. ಅದು ಮುಗಿಸಿ ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಅನುಭಾವಿಯಾಗುತ್ತಾರೆ. ಸರ್ವಶಕ್ತ ಭಗವಂತನ ಮುಂದೆ ನಾವೆಲ್ಲಾ ತೃಣ ಮಾತ್ರ ಅನ್ನುವ ಡೈಲಾಗ್‌ ಹೊಡೆಯುತ್ತಾರೆ. ತಮ್ಮನ್ನು ಇಲ್ಲಿಯ ತನಕ ಕೈ ಹಿಡಿದು ಕರೆ ತಂದ ನಿಷ್ಠಾವಂತ ಸೇವಕರನ್ನು ಸ್ಮರಿಸುತ್ತಾರೆ.

ವಿಷ್ಣು ನಿರ್ದೇಶಕರಾಗುತ್ತಾರಾ ?
ಈ ಮಧ್ಯೆ ಅವರು ಮತ್ತೊಮ್ಮೆ ನಿವೃತ್ತಿಯ ಮಾತಾಡಿದ್ದು 'ಕೋಟಿಗೊಬ್ಬ" ಸಂತೋಷಕೂಟದಲ್ಲಿ . ಜಮೀನ್ದಾರ್ರು ಮತ್ತು ಸಿಂಹಾದ್ರಿಯ ಸಿಂಹ ಚಿತ್ರಗಳು ಮಾರ್ಚ್‌ ಹೊತ್ತಿಗೆ ಮುಗಿಯುತ್ತವೆ. ಮುಂದೇನು ? ಆಮೇಲೆ ನಾನು ಮತ್ತು ನನ್ನ ಬದುಕು ಅಂದರು ವಿಷ್ಣು. ಅದರರ್ಥ ನಿವೃತ್ತಿ ಅಂತಾನಾ? ಎಂದಿನಂತೆ ವಿಷ್ಣು ನೇರವಾಗಿ ಉತ್ತರಿಸಲಿಲ್ಲ. ಆಕಾಶದ ಕಡೆ ಬೆರಳು ತೋರಿದರು. ಅದು ಹಾಗಲ್ಲ. ವಿಷ್ಣು ಆಮೇಲೆ ನಿರ್ದೇಶಕರಾಗುತ್ತಾರೆ. ಅವರೇ ಆ ಚಿತ್ರದ ನಾಯಕ ಅಂದರು ಕೋಟಿಗೊಬ್ಬ ನಿರ್ಮಾಪಕ ಬಾಬು.

ಆದರೆ ಸದ್ಯಕ್ಕಂತೂ ವಿಷ್ಣು ಬೇರಾವ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲ. ಸಿಂಹಾದ್ರಿಯ ಸಿಂಹ ಮುಗಿದಾಕ್ಷಣ ಅವರು ನಿವೃತ್ತರಾಗುವುದು ಅವರ ವೃತ್ತಿ ಬದುಕಿಗೆ ಒಳ್ಳೇ ಅಂತ್ಯವಂತೂ ಆಗಲಾರದು. ಯಾಕೆಂದರೆ ಅದು ರೀಮೇಕು ಚಿತ್ರ.

ವಿಷ್ಣು ನಿವೃತ್ತಿಯ ಮಾತಾಡಿದ ಮಾರನೇ ದಿನವೇ ರಾಜ್‌ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾತಾಡಿದ್ದು ಕುತೂಹಲಕಾರಿ. ಮಂಡಿ ನೋವು ವಾಸಿಯಾದಾಕ್ಷಣ ಬಣ್ಣ ಹಚ್ಚುವ ಇರಾದೆ ಅವರದು. ಮಿಕ್ಕಂತೆ ಅವರಿಬ್ಬರ ಮಾತುಕತೆಯೆಲ್ಲವೂ ಒಬ್ಬರೇ ಬರೆದಿಟ್ಟ ಸಂಭಾಷಣೆಯ ಹಾಳೆಯಂತೇ ಕಾಣಿಸಿದ್ದು ಇನ್ನೊಂದು ಅಚ್ಚರಿ.

English summary
Kannada film hero Vishnuvardhan Thinking of retirement, but one is not sure
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada