»   » ಇವೆಲ್ಲ ಹಳೆ ಸಾಹಸಗಳು, ಹೊಸದೇನನ್ನೂ ಅವರು ಮಾಡುತ್ತಿಲ್ಲ ಎನ್ನುವುದು ಬೇರೆ ಮಾತು!

ಇವೆಲ್ಲ ಹಳೆ ಸಾಹಸಗಳು, ಹೊಸದೇನನ್ನೂ ಅವರು ಮಾಡುತ್ತಿಲ್ಲ ಎನ್ನುವುದು ಬೇರೆ ಮಾತು!

Subscribe to Filmibeat Kannada

ವೀರಾಧಿವೀರ ಕಣೆ, ಸಾಹಸಸಿಂಹ ಕಣೆ, ಮರೆಯದ ಮಾಣಿಕ್ಯ, ಛಲದಲಿ ಚಾಣಕ್ಯ, ನಾಗ ಕಾಳ ಭೈರವನೇ..... ಎಂದು ತಮ್ಮ ಅಭಿನಯದ ಚಿತ್ರಗಳ ಹೆಸರುಗಳನ್ನೇ ಒಳಗೊಂಡ ಗೀತೆಯನ್ನು ಹಾಡಿ ಕುಣಿದ ವಿಷ್ಣುವರ್ಧನ್‌ ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಎಂದೇ ಹೆಸರಾದವರು. ಇವೆಲ್ಲ ಹಳೆ ಸಾಹಸಗಳು, ಹೊಸದೇನನ್ನೂ ಅವರು ಮಾಡುತ್ತಿಲ್ಲ ಎನ್ನುವುದು ಬೇರೆ ಮಾತು !

ವಿಷ್ಣು ತಮ್ಮ ಜೀವನದ ಸಂಘರ್ಷದಲ್ಲಿ ಸಾಹಸದಿಂದಲೇ ಮೇಲೇರಿದ್ದು, ಚಿತ್ರರಂಗದಲ್ಲೂ ಹಲವು ಸಿಹಿ - ಕಹಿ ಉಂಡು ಮಾಗಿದ ಪ್ರತಿಭೆ. ಒರೆಗೆ ಹಚ್ಚಿದಂತೆಲ್ಲಾ ಚಿನ್ನ ಹೊಳೆಯುವಂತೆ, ವಿಷ್ಣು ಎಲ್ಲ ಸನ್ನಿವೇಶಗಳಲ್ಲೂ ತಮ್ಮ ಕಾಂತಿ ಬೆಳಗಿಸಿಕೊಳ್ಳುತ್ತಲೇ ಬೆಳೆದ ನಟ.

ಒಂದು ಕಾಲದಲ್ಲಂತೂ ವಿಷ್ಣುವರ್ಧನ್‌ರಿಗೆ ಬಿರುದು ನೀಡುವಂತಹ ಹೆಸರಿನ ಚಿತ್ರಗಳೇ ಸಾಲು ಸಾಲಾಗಿ ತೆರೆಕಂಡವು. ಸಾಹಸಸಿಂಹ, ಕರುಣಾಮಯಿ, ಚಿನ್ನದಂತ ಮನುಷ್ಯ, ಚಾಣಕ್ಯ, ದೊರೆ, ವಿಷ್ಣು ದಾದಾ... ಇತಾದಿ ಇತ್ಯಾದಿ. ರಾಜ್ಯದ ಉದ್ದಗಲಕ್ಕೂ ವಿಷ್ಣು ಅಭಿಮಾನಿಗಳಿದ್ದಾರೆ. ಶಂಕರ್‌ನಾಗ್‌ ನಂತರ ಎಲ್ಲ ವರ್ಗದ ಅಭಿಮಾನಿಗಳನ್ನೂ ಸೇಳೆದ ನಟ ವಿಷ್ಣುವರ್ಧನ್‌ ಎಂಬುದು ಅನೇಕರ ಅನಿಸಿಕೆ. ಶಂಕರ್‌ನಾಗ್‌ರಂತೆ ಬಹುಮುಖ ವ್ಯಕ್ತಿತ್ವ - ಪ್ರತಿಭೆ ವಿಷ್ಣುವರ್ಧನ್‌ರಿಗಿಲ್ಲ. ಶಂಕರ್‌ಗೆ ಶಂಕರ್‌ ಒಬ್ಬರೇ ಸಾಟಿ. ಆದರೂ, ಶಂಕರ್‌ನಾಗ್‌ ನಂತರ ಚಿತ್ರರಂಗದಲ್ಲಿ ಬಹುಕಾಲದಿಂದ ತಮ್ಮ ಇಮೇಜ್‌ ಕಾಪಾಡಿಕೊಂಡು ಬಂದಿರುವ ವಿಷ್ಣುವರ್ಧನ್‌ ಸಾಧನೆಯೂ ಕಡಿಮೆ ಏನಲ್ಲ.

175ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ವಿಷ್ಣುವರ್ಧನ್‌ ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷಗಳೇ ಕಳೆದಿವೆ. ವಂಶವೃಕ್ಷ ಇವರ ಪ್ರಥಮ ಚಿತ್ರವಾದರೂ, ನಾಗರಹಾವು ಇವರಿಗೆ ನಾಯಕನ ಸ್ಥಾನ ಮಾನ ತಂದಿತ್ತ ಐತಿಹಾಸಿಕ ಚಿತ್ರ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ.... ಮುಂತಾದ ಗೀತೆಗಳನ್ನೂ ಹಾಡುವ ಮೂಲಕ ಗಾಯಕ - ನಾಯಕ ಎರಡೂ ಪಟ್ಟ ಹೊತ್ತಿರುವ ವಿಷ್ಣುವರ್ಧನ್‌ ಇಂದೂ ತಮ್ಮ ಇಮೇಜ್‌ ಉಳಿಸಿಕೊಂಡು ಡಿಮ್ಯಾಂಡ್‌ನಲ್ಲಿದ್ದಾರೆ.

ಕನ್ನಡ ಚಿತ್ರ ನಿರ್ಮಾಪಕರು ಹಿಂದಿ, ತಮಿಳು, ತೆಲುಗು ಭಾಷೆಯ ನಿರ್ಮಾಪಕರಂತೆ ಹೊಸ ಮುಖಗಳಿಗೆ ಅವಕಾಶ ನೀಡಿ ಪ್ರಯೋಗ ಮಾಡಲು ಸಿದ್ಧರಿಲ್ಲದಿರುವುದೂ ವಿಷ್ಣುವರ್ಧನ್‌ಗೆ ಪ್ಲಸ್‌ ಪಾಯಿಂಟ್‌ ಆಗಿದೆ ಎಂದೇ ಹೇಳಬಹುದು. ಸಾಹಸಪ್ರಧಾನ ಚಿತ್ರಗಳಲ್ಲಿ ಮಿಂಚಿರುವ ವಿಷ್ಣುವರ್ಧನ್‌ ಹಾಸ್ಯಮಯ ಹಾಗೂ ಸಾಂಸಾರಿಕ ಚಿತ್ರಗಳಲ್ಲೂ ಹೆಸರು ಮಾಡಿದ್ದಾರೆ.

ಅಭಿನಯ ಕೌಶಲವನ್ನು ಕರಗತ ಮಾಡಿಕೊಂಡಿರುವ ವಿಷ್ಣುವರ್ಧನ್‌ - ದ್ವಾರಕೀಶ್‌ ಒಂದು ಕಾಲದಲ್ಲಂತೂ ಭಲೇ ಜೋಡಿ ಎಂದೇ ಹೆಸರಾಗಿದ್ದರು. ಮತ್ತೆ ಈ ಇಬ್ಬರು ಒಂದಾದ ನಂತರ ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು ಮುಂತಾದ ಒಂದೆರಡು ಚಿತ್ರಗಳೂ ತೆರೆಕಂಡವು.

ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ವೀರಪ್ಪನಾಯ್ಕ, ಸೂರ್ಯವಂಶ, ಹಬ್ಬ ಮೊದಲಾದ ಚಿತ್ರಗಳು ಯಶಸ್ವಿಯಾಗಿದ್ದು, ವಿಷ್ಣುವರ್ಧನ್‌ ತಾರಾಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಈಗ ಸಿದ್ಧವಾಗುತ್ತಿರುವ ಯಜಮಾನ ಚಿತ್ರ ವಿಷ್ಣುವರ್ಧನ್‌ಗೆ ಮತ್ತೆ ಬ್ರೇಕ್‌ ನೀಡುವ ಚಿತ್ರ ಆಗುತ್ತದೆ ಎಂಬುದು ಸ್ಯಾಂಡಲ್‌ವುಡ್‌ನಲ್ಲಿ ಗಸ್ತು ಹೊಡೆದು ಬಂದಿರುವ ನಮ್ಮ ಬಾತ್ಮೀದಾರರು ಹೇಳುತ್ತಿದ್ದಾರೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada